ಕೋಲ್ಕತಾ(ಮೇ.07): ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ)ಯ ಬಹುನಿರೀಕ್ಷಿತ 100 ಬಾಲ್‌ಗಳ ಟೂರ್ನಿ ‘ದ ಹಂಡ್ರೆಡ್‌’ನಲ್ಲಿ ತಂಡ ಖರೀದಿಸಲು ಐಪಿಎಲ್‌ನ ಕೋಲ್ಕತಾ ನೈಟ್‌ರೈಡ​ರ್ಸ್ ಆಸಕ್ತಿ ತೋರಿದೆ. 

ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡ ಬಳಿಕ ಪ್ರತಿಕ್ರಿಯಿಸಿರುವ ಕೆಕೆಆರ್‌ನ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ವೆಂಕಿ ಮೈಸೂರು, ಬಂಡವಾಳ ಹೂಡಿಕೆ ಮಾಡುವಂತೆ ಪ್ರಸ್ತಾಪ ಬಂದರೆ ಪರಿಶೀಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೊರೋನಾದಿಂದಾಗಿ ಚೊಚ್ಚಲ ಆವೃತ್ತಿಯ ಟೂರ್ನಿಯನ್ನು 2021ಕ್ಕೆ ಮುಂದೂಡಲಾಗಿದೆ.

ಇದೇ ಜುಲೈನಲ್ಲಿ ಆರಂಭವಾಗಬೇಕಿದ್ದ ಚೊಚ್ಚಲ ಆವೃತ್ತಿಯ 'ದ ಹಂಡ್ರೆಡ್' ಕ್ರಿಕೆಟ್ ಟೂರ್ನಿ ಕೂಡಾ ರದ್ದಾಗಿದೆ. ಜುಲೈ 17 ರಿಂದ ಆಗಸ್ಟ್ 15ರವರೆಗೆ ಟೂರ್ನಿ ಆಯೋಜನೆಗೆ ವೇಳಾಪಟ್ಟಿ ಸಿದ್ದವಾಗಿತ್ತು. ಆದರೆ ಕೊರೋನಾ ಎನ್ನುವ ಹೆಮ್ಮಾರಿ ಈ ಕ್ರೀಡಾಕೂಟವನ್ನು ಬಲಿ ಪಡೆದಿದೆ.

IPL 2020: ಕೆಕೆಆರ್ ತಂಡಕ್ಕೆ ಹೊಸ ಕೋಚ್ ನೇಮಕ!

ಕೊರೋನಾ ಭೀತಿಯಿಂದಾಗಿ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಚಟುವಟಿಕೆಗಳು ಸ್ತಬ್ಧವಾಗಿವೆ. ಇಂಗ್ಲೆಂಡ್ ದೇಸಿ ಕ್ರಿಕೆಟ್ ಟೂರ್ನಿ ಏಪ್ರಿಲ್‌ನಿಂದ ಆರಂಭವಾಗಬೇಕಿತ್ತು, ಆದರೆ ಕೋವಿಡ್‌ 19 ಹೆಮ್ಮಾರಿಯಿಂದಾಗಿ ಇಂಗ್ಲೆಂಡ್ ಕ್ರಿಕೆಟ್‌ ಮಂಡಳಿ ಎಲ್ಲಾ ದೇಸಿ ಟೂರ್ನಿಗಳನ್ನು ರದ್ದುಪಡಿಸಿದೆ. ಇಡೀ ವರ್ಷ ಕ್ರಿಕೆಟ್ ನಡೆಯದೇ ಹೋದರೆ ಇಂಗ್ಲೆಂಡ್ ಸುಮಾರು 2800 ಕೋಟಿ ರುಪಾಯಿ ನಷ್ಟ ಅನುಭವಿಸಲಿದೆ ಎನ್ನಲಾಗಿದೆ. 

ಶಾರುಖ್‌ ಖಾನ್‌ ಸಹ ಮಾಲಿಕತ್ವದ ಕೆಕೆಆರ್‌, ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್‌)ನಲ್ಲೂ ತಂಡ ಹೊಂದಿದೆ. 2015ರಲ್ಲಿ ಕೆಕೆಆರ್ ಫ್ರಾಂಚೈಸಿ ಟ್ರಿನಿಬಾಗೋ ನೈಟ್‌ ರೈಡರ್ಸ್ ತಂಡವನ್ನು ಖರೀದಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಸಿಪಿಎಲ್ ಟೂರ್ನಿಯಲ್ಲೂ ಕೆಕೆಆರ್ ಅತ್ಯಂತ ಯಶಸ್ವಿ ಫ್ರಾಂಚೈಸಿ ಎನಿಸಿಕೊಂಡಿದೆ‌.