ಕೆಕೆಆರ್ ಫ್ರಾಂಚೈಸಿ ಕೆ ಎಲ್ ರಾಹುಲ್ ಅವರನ್ನು 25 ಕೋಟಿ ರೂ.ಗಳಿಗೆ ಖರೀದಿಸಲು ಮುಂದಾಗಿದೆ. ಡೆಲ್ಲಿ ಕ್ಯಾಪಿಟಲ್ಸ್‌ಗೆ ದೊಡ್ಡ ಆಫರ್ ನೀಡಿರುವ ಕೆಕೆಆರ್, ರಾಹುಲ್‌ರನ್ನು ತಮ್ಮ ತಂಡಕ್ಕೆ ಸೆಳೆಯಲು ಉತ್ಸುಕವಾಗಿದೆ. ಹೊಸ ನಾಯಕನ ಹುಡುಕಾಟದಲ್ಲಿರುವ ಕೆಕೆಆರ್.

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗುವುದರೊಂದಿಗೆ ಟೂರ್ನಿಗೆ ಅಧಿಕೃತವಾಗಿ ತೆರೆ ಎಳೆಯಲಾಗಿದೆ. ಇದೀಗ 2025ರ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿರುವ ಕೆಲವು ತಂಡಗಳು ಮುಂದಿನ ಆವೃತ್ತಿಯ ಐಪಿಎಲ್ ಟೂರ್ನಿಗೆ ಈಗಿನಿಂದಲೇ ಭರ್ಜರಿ ಸಿದ್ದತೆಗಳನ್ನು ಆರಂಭಿಸಿವೆ. ಇದೀಗ 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಟ್ರೇಡ್ ವಿಂಡೋ ಓಪನ್ ಆಗಿದೆ. ಇದರಿಂದ ಹಲವು ಸ್ಟಾರ್ ಆಟಗಾರರನ್ನು ತಮ್ಮ ತಂಡಕ್ಕೆ ಸೆಳೆಯಲು ಫ್ರಾಂಚೈಸಿಗಳು ಆಫರ್ ನೀಡಲು ಆರಂಭಿಸಿವೆ. ಇದೆಲ್ಲದರ ನಡುವೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 14 ಕೋಟಿ ರುಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದ ಕೆ ಎಲ್ ರಾಹುಲ್‌ಗೆ ಮಾಜಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿ ಗಾಳ ಹಾಕಿದೆ ಎನ್ನುವ ಸುದ್ದಿ ವೈರಲ್ ಆಗಿದೆ.

ಕೆ ಎಲ್ ರಾಹುಲ್‌ಗೆ ಬಿಗ್ ಆಫರ್:

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮೂರು ಬಾರಿಯ ಐಪಿಎಲ್ ಚಾಂಪಿಯನ್‌ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಡೆಲ್ಲಿ ಕ್ಯಾಪಿಟಲ್ಸ್‌ಗೆ ದೊಡ್ಡ ಆಫರ್ ನೀಡಿದೆ. ಕೆಕೆಆರ್ ಫ್ರಾಂಚೈಸಿಯು ಕೆ ಎಲ್ ರಾಹುಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಒಲವು ತೋರಿದೆ. ಮಾಧ್ಯಮ ವರದಿಗಳ ಪ್ರಕಾರ ಕೆ ಎಲ್ ರಾಹುಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಕೆಕೆಆರ್ ಫ್ರಾಂಚೈಸಿಯು ಬರೋಬ್ಬರಿ 25 ಕೋಟಿ ರುಪಾಯಿ ನೀಡಲು ರೆಡಿಯಿದೆ. ಟ್ರೇಡ್‌ ವಿಂಡೋದಲ್ಲಿ ಕೇವಲ ಆಟಗಾರರಿಗೆ ಹಣ ನೀಡಿ ತಮ್ಮ ಕಡೆ ಸೆಳೆದುಕೊಳ್ಳಬಹುದು. ಇದಲ್ಲದಿದ್ದರೇ ಆಟಗಾರರ ವಿನಿಮಯವನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ಯಾವ ಆಟಗಾರರನ್ನು ಡೆಲ್ಲಿಗೆ ನೀಡಿ ಕೆ ಎಲ್ ರಾಹುಲ್ ಅವರನ್ನು ಕೆಕೆಆರ್ ಫ್ರಾಂಚೈಸಿ ತಮ್ಮ ಕಡೆ ಸೆಳೆಯಲು ಮುಂದಾಗಿದೆ ಎನ್ನುವುದಕ್ಕೆ ಸದ್ಯ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

Scroll to load tweet…

ಹೊಸ ನಾಯಕನ ಹುಡುಕಾಟದಲ್ಲಿದೆ ಕೋಲ್ಕತಾ ನೈಟ್‌ರೈಡರ್ಸ್:

2024ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಮರು ವರ್ಷ ಶ್ರೇಯಸ್ ಅಯ್ಯರ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಪಾಲಾಗಿದ್ದರು. ಹೀಗಾಗಿ 2025ರ ಐಪಿಎಲ್‌ನಲ್ಲಿ ಕೆಕೆಆರ್ ಫ್ರಾಂಚೈಸಿಯು ಅಜಿಂಕ್ಯ ರಹಾನೆಗೆ ನಾಯಕ ಪಟ್ಟ ಕಟ್ಟಿತ್ತು. ಆದರೆ ರಹಾನೆ ನೇತೃತ್ವದಲ್ಲಿ ಕೆಕೆಆರ್ ಫ್ರಾಂಚೈಸಿಯು ನೀರಸ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದಲ್ಲಿಯೇ ಹೊರಬಿದ್ದು ಮುಖಭಂಗ ಅನುಭವಿಸಿತ್ತು. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಗೆ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಹೊಸ ನಾಯಕ ಹುಡುಕಾಟದಲ್ಲಿದೆ.

ಈಗಾಗಲೇ ಪಂಜಾಬ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳನ್ನು ನಾಯಕನಾಗಿ ಮುನ್ನಡೆಸಿದ ಅನುಭವ ಹೊಂದಿರುವ ಕೆ ಎಲ್ ರಾಹುಲ್‌ ಅವರನ್ನು ಕರೆತಂದು ನಾಯಕತ್ವ ಪಟ್ಟ ಕಟ್ಟಬೇಕೆನ್ನುವುದು ಕೆಕೆಆರ್ ಫ್ರಾಂಚೈಸಿಯ ಲೆಕ್ಕಾಚಾರವಾಗಿದೆ. ಹೀಗಾಗಿ ಶತಾಯಗತಾಯ ಟ್ರೇಡ್ ವಿಂಡೋ ಮೂಲಕ ಕೆ ಎಲ್ ರಾಹುಲ್ ಅವರನ್ನು ಕರೆತರಲು ಕೆಕೆಆರ್ ಫ್ರಾಂಚೈಸಿ ರಣತಂತ್ರ ಹೆಣೆಯುತ್ತಿದೆ ಎಂದು ವರದಿಯಾಗಿದೆ.

ಕೆಕೆಆರ್‌ ಕೋಚ್‌ ಹುದ್ದೆ ತ್ಯಜಿಸಿದ ಚಂದ್ರಕಾಂತ್‌

ಕೋಲ್ಕತಾ: ಐಪಿಎಲ್‌ನ ಕೆಕೆಆರ್‌ ತಂಡದ ಮುಖ್ಯ ಕೋಚ್‌ ಚಂದ್ರಕಾಂತ್‌ ಪಂಡಿತ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚಂದ್ರಕಾಂತ್‌ ಅವಧಿಯಲ್ಲಿ 2024ರಲ್ಲಿ ಕೆಕೆಆರ್‌ ಚಾಂಪಿಯನ್ ಆಗಿದ್ದರೂ, ಕಳೆದ ವರ್ಷ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಅವರು ತಂಡದಿಂದ ದೂರವಾಗಿದ್ದಾಗಿ ಫ್ರಾಂಚೈಸಿ ಮಾಹಿತಿ ಪ್ರಕಟಿಸಿದೆ.

ಐಪಿಎಲ್‌: ಲಖನೌ ತಂಡಕ್ಕೆ ಭರತ್‌ ಬೌಲಿಂಗ್‌ ಕೋಚ್‌

ಲಖನೌ: ಟೀಂ ಇಂಡಿಯಾ ಮಾಜಿ ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಅವರನ್ನು ಐಪಿಎಲ್‌ನ ಲಖನೌ ಸೂಪರ್‌ ಜೈಂಟ್ಸ್‌ ಫ್ರಾಂಚೈಸಿಯು ಮುಂದಿನ ಆವೃತ್ತಿಗೆ ಬೌಲಿಂಗ್‌ ಕೋಚ್‌ ಆಗಿ ನೇಮಿಸಿದೆ. ಭರತ್‌ ಕಳೆದ 4 ವರ್ಷಗಳಿಂದ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ಬೌಲಿಂಗ್ ಕೋಚ್‌ ಅಗಿದ್ದರು. ಆದರೆ 18ನೇ ಆವತ್ತಿಯಲ್ಲಿ ತಂಡ ಕಳಪೆ ಪ್ರದರ್ಶನ ನೀಡಿ 8ನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಕೆಕೆಆರ್‌ ಮುಂದಿನ ಆವೃತ್ತಿಗೆ ತನ್ನ ಸಹಾಯಕ ಕೋಚ್‌ಗಳನ್ನು ಬದಲಾವಣೆ ಮಾಡುತ್ತಿದ್ದು, ಅರುಣ್‌ರನ್ನು ಕೂಡ ಕೈಬಿಟ್ಟಿದೆ.