ಮೌಂಟ್‌ ಮಾಂಗನ್ಯುಯಿ(ಫೆ.11): ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ ವೈಫಲ್ಯದಿಂದ ನ್ಯೂಜಿಲೆಂಡ್‌ ವಿರುದ್ಧದ ಮೊದಲ 2 ಏಕದಿನ ಪಂದ್ಯದಲ್ಲಿ ಸೋಲುಂಡಿರುವ ಟೀಂ ಇಂಡಿಯಾ, ಮಂಗಳವಾರ ಇಲ್ಲಿನ ಬೇ ಓವಲ್‌ ಮೈದಾನದಲ್ಲಿ ಆರಂಭವಾದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ. 5-0 ಅಂತರದಲ್ಲಿ ಟಿ20 ಸರಣಿ ಗೆದ್ದಿದ್ದ ಭಾರತ ಏಕದಿನ ಸರಣಿಯನ್ನು ಈಗಾಗಲೇ ಕೈ ಚೆಲ್ಲಿದೆ. ಆರಂಭದ 2 ಏಕದಿನ ಪಂದ್ಯಗಳಲ್ಲಿ ಎದುರಾದ ಸೋಲಿನಿಂದ ಟೀಂ ಇಂಡಿಯಾ ಆಘಾತಕ್ಕೊಳಗಾಗಿದ್ದು, 3ನೇ ಪಂದ್ಯವನ್ನು ಗೆದ್ದು ಮುಖಭಂಗ ತಪ್ಪಿಸಿಕೊಳ್ಳುವ ಯತ್ನದಲ್ಲಿದೆ.

3ನೇ ಏಕದಿನ: ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ

ಹ್ಯಾಮಿಲ್ಟನ್‌ನ ಸೆಡಾನ್‌ ಪಾರ್ಕ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ದಾಖಲೆಯ ಮೊತ್ತ ಬೆನ್ನತ್ತಿ ಗೆದ್ದಿದ್ದ ನ್ಯೂಜಿಲೆಂಡ್‌, ಆಕ್ಲೆಂಡ್‌ನ ಈಡನ್‌ ಪಾರ್ಕ್ನಲ್ಲಿ ನಡೆದಿದ್ದ 2ನೇ ಏಕದಿನ ಪಂದ್ಯದಲ್ಲಿ 22 ರನ್‌ಗಳ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಸೋಲಿನ ಅಂತರವನ್ನು ತಗ್ಗಿಸಿಕೊಳ್ಳುವ ಉತ್ಸಾಹದಲ್ಲಿ ಭಾರತ ತಂಡ ಇದ್ದರೇ, ಕ್ಲೀನ್‌ ಸ್ವೀಪ್‌ ಮಾಡಿ ಟಿ20 ಸೋಲಿನ ಸೇಡನ್ನು ತೀರಿಸಿಕೊಳ್ಳುವ ವಿಶ್ವಾಸದಲ್ಲಿ ಉಭಯ ತಂಡಗಳ ನಡುವೆ ಮತ್ತೊಂದು ಸುತ್ತಿನ ಪೈಪೋಟಿ ಏರ್ಪಟ್ಟಿದೆ.

ಏಕದಿನ ವಿಶ್ವಕಪ್‌ ಬಳಿಕ ನಡೆಯುತ್ತಿರುವ 3ನೇ ಏಕದಿನ ಸರಣಿ ಇದಾಗಿದೆ. ವೆಸ್ಟ್‌ಇಂಡೀಸ್‌ ವಿರುದ್ಧದ ಸರಣಿಯನ್ನು 2-1 ರಿಂದ ಹಾಗೂ ಆಸ್ಪ್ರೇಲಿಯಾ ವಿರುದ್ಧದ ಸರಣಿಯನ್ನು 2-1ರಿಂದ ಗೆದ್ದಿದ್ದ ಭಾರತ ತಂಡ, 3ನೇ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್‌ ಎದುರು ಇನ್ನು ಒಂದು ಪಂದ್ಯ ಬಾಕಿ ಇರುವಂತೆ 2-0 ಯಿಂದ ಪರಾಭವ ಹೊಂದಿದೆ.

3ನೇ ಏಕದಿನ: ಟೀಂ ಇಂಡಿಯಾದಲ್ಲಿ ಬದಲಾವಣೆ ಖಚಿತ; ಇಲ್ಲಿದೆ ಸಂಭಾವ್ಯ ತಂಡ!

ವೇಗಿಗಳ ಮೇಲೆ ನಿರೀಕ್ಷೆ: ಎರಡೂ ಏಕದಿನ ಪಂದ್ಯಗಳಲ್ಲಿ ಪ್ರತಿ ಬಾರಿ ವಿಕೆಟ್‌ಗಾಗಿ ಹುಡುಕಾಟ ನಡೆಸುವಾಗ ನಾಯಕ ಕೊಹ್ಲಿ, ವೇಗಿಗಳ ಕೈಗೆ ಚೆಂಡನ್ನು ನೀಡುತ್ತಿದ್ದರು. ವಿಶೇಷವಾಗಿ ಬುಮ್ರಾ ಮೇಲೆ ಅತಿಯಾದ ಅವಲಂಬನೆ ಹೊಂದಲಾಗಿದೆ. ಯುವ ವೇಗಿ ನವದೀಪ್‌ ಸೈನಿ ಕೂಡ ಭರವಸೆ ಮೂಡಿಸಿದ್ದಾರೆ. ಭಾರತದ ಕಳಪೆ ಫೀಲ್ಡಿಂಗ್‌ ಸಹ ಚರ್ಚೆಗೆ ಕಾರಣವಾಗಿದೆ. ಹ್ಯಾಮಿಲ್ಟನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ, ಆಕ್ಲೆಂಡ್‌ನಲ್ಲಿ ನಡೆದ 2ನೇ ಪಂದ್ಯದಲ್ಲಿ ಕಿವೀಸ್‌ ವಿರುದ್ಧ ತಂಡ ಸೋಲುವುದಕ್ಕೆ ಕಳಪೆ ಫೀಲ್ಡಿಂಗ್‌ ಸಹ ಪ್ರಮುಖ ಕಾರಣ. ಅಲ್ಲದೇ ಇತರೆ ರನ್‌ ರೂಪದಲ್ಲಿ ದುಬಾರಿಯಾಗುತ್ತಿರುವುದು ಕಾರಣವಾಗಿದೆ.

ಪಿಚ್‌ ರಿಪೋರ್ಟ್‌

ಬೇ ಓವಲ್‌ ಕ್ರೀಡಾಂಗಣದ ಮೈದಾನ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಟಿ20 ಸರಣಿಯ ಕೊನೆಯ ಪಂದ್ಯ ಇಲ್ಲಿಯೇ ನಡೆದಿತ್ತು. ಇಲ್ಲಿ ಬ್ಯಾಟ್ಸ್‌ಮನ್‌ಗಳು ಸರಾಗವಾಗಿ ರನ್‌ಗಳಿಸಬಲ್ಲರು. ಭಯ ತಂಡಗಳಿಂದ ದೊಡ್ಡ ಮೊತ್ತ ನಿರೀಕ್ಷಿಸಬಹುದಾಗಿದೆ. ಟಾಸ್‌ ಪ್ರಮುಖ ಪಾತ್ರ ನಿರ್ವಹಿಸಲಿದೆ.

ಪಂದ್ಯ ಆರಂಭ: ಬೆಳಗ್ಗೆ 7.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍ 1