ಲಂಡನ್(ಏ.04)‌: ಕೊರೋನಾ ಸೋಂಕನ್ನು ತಡೆಗಟ್ಟಲು ವಿಶ್ವದ ತಾರಾ ಕ್ರೀಡಾಪಟುಗಳು ಹಣ ಸಂಗ್ರಹ ಮಾಡುತ್ತಿದ್ದು, ಇಂಗ್ಲೆಂಡ್‌ ಕ್ರಿಕೆಟಿಗ ಜೋಸ್‌ ಬಟ್ಲರ್‌ ಸಹ ಈ ಕಾರ್ಯಕ್ಕೆ ಮುಂದಾಗಿದ್ದಾರೆ. 

2019ರ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ತಾವು ಧರಿಸಿದ್ದ ಜೆರ್ಸಿಯನ್ನು ಹರಾಜು ಹಾಕುವುದಾಗಿ ಘೋಷಿಸಿರುವ ಬಟ್ಲರ್‌, ಅದರಲ್ಲಿ ಬರುವ ಹಣವನ್ನು ಇಲ್ಲಿನ ರಾಯಲ್‌ ಬ್ರೊಮ್‌ಪ್ಟನ್‌ ಹಾಗೂ ಹೇರ್‌ಫೀಲ್ಡ್‌ ಆಸ್ಪತ್ರೆಗೆ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಇಂಗ್ಲೆಂಡ್ ತಂಡದ ಆಟಗಾರರು ಸ್ವಯಂ ಪ್ರೇರಿತರಾಗಿ ಶೇ.20ರಷ್ಟು ವೇತನ ಕಡಿತಕ್ಕೆ ಒಪ್ಪಿಕೊಂಡಿದ್ಧಾರೆ.

ವೇತನ ಕಡಿತಕ್ಕೆ ಸ್ವಯಂ ಪ್ರೇರಿತವಾಗಿ ಒಪ್ಪಿಕೊಂಡ ಇಂಗ್ಲೆಂಡ್‌ ಕ್ರಿಕೆಟಿಗರು

ವಿಡಿಯೋ ಸಂದೇಶ ರವಾನಿಸಿರುವ ಬಟ್ಲರ್, ನೀವೆಲ್ಲ ಮನೆಯಲ್ಲೇ ಸುರುಕ್ಷಿತವಾಗಿದ್ದೀರಿ ಎಂದು ಭಾವಿಸುತ್ತೇನೆ. ಆಸ್ಪತ್ರೆಗಳು, ಡಾಕ್ಟರ್‌ಗಳು, ನರ್ಸ್‌ಗಳು ಅನನ್ಯ ಸೇವೆ ಮಾಡುತ್ತಿರುವುದು ನಮಗೆಲ್ಲ ಗೊತ್ತೇ ಇದೆ. ಈಗ ಅವರಿಗೆ ನಮ್ಮಲ್ಲರ ಬೆಂಬಲ ಅಗತ್ಯವಿದೆ. ನೀವೆಲ್ಲಾ ಕೈಲಾದ ಸಹಾಯ ಮಾಡಿ ಎಂದು ಜನತೆಗೆ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಕ್ರೀಡಾಲೋಕದ ದಿಗ್ಗಜರಾದ ರೋಜರ್ ಫೆಡರರ್, ನೋವಕ್ ಜೋಕೋವಿಚ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಲವರು ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಕೆಲಸಕ್ಕೆ ದೇಣಿಗೆ ನೀಡುವ ಮೂಲಕ ಬೆಂಬಲ ಸೂಚಿಸಿದ್ದಾರೆ.

2019ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಸೂಪರ್‌ ಓವರ್‌ನಲ್ಲಿ ಬಟ್ಲರ್ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ರನೌಟ್ ಮಾಡುವುದರೊಂದಿಗೆ ಚೊಚ್ಚಲ ಬಾರಿಗೆ ಇಂಗ್ಲೆಂಡ್ ತಂಡ ಚಾಂಪಿಯನ್ ಪಟ್ಟಕ್ಕೇರಲು ನೆರವಾಗಿದ್ದರು.