ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾಗೆ ಯಶಸ್ವಿ ಶಸ್ತ್ರಚಿಕಿತ್ಸೆನ್ಯೂಜಿಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಟೀಂ ಇಂಡಿಯಾ ವೇಗಿಆರು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರವಿರಲಿರುವ ಬುಮ್ರಾ
ಕ್ರೈಸ್ಟ್ಚರ್ಚ್(ಮಾ.09): ದೀರ್ಘ ಸಮಯದಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ ಅವರು ಬುಧವಾರ ನ್ಯೂಜಿಲೆಂಡ್ನ ಕ್ರೈಸ್ಟ್ಚರ್ಚ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹಲವು ಕ್ರಿಕೆಟಿಗರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿರುವ ಡಾ.ರೋವನ್ ಶೌಟೆನ್ ಬುಮ್ರಾಗೂ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ವೇಗಿ ಜಸ್ಪ್ರೀತ್ ಬುಮ್ರಾ ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದು, ಸುಮಾರು 6 ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೂ ಮುನ್ನ ಸಂಪೂರ್ಣ ಫಿಟ್ ಆಗುವ ನಿರೀಕ್ಷೆಯಿದೆ. ಅವರು ಕಳೆದ ಸೆಪ್ಟಂಬರ್ನಿಂದಲೂ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿದ್ದಾರೆ.
ರ‍್ಯಾಂಕಿಂಗ್: 6 ಅಂಕ ಕಳೆದುಕೊಂಡ ಅಶ್ವಿನ್!
ದುಬೈ: ಭಾರತದ ಹಿರಿಯ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಹಾಗೂ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್‌ಸನ್ ಬುಧವಾರ ಪ್ರಕಟಗೊಂಡ ಐಸಿಸಿ ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಕಳೆದ ವಾರ 41 ವರ್ಷದ ಆ್ಯಂಡರ್ಸನ್ನು ಹಿಂದಿಕ್ಕಿ ಅಶ್ವಿನ್ 2017ರ ಬಳಿಕ ಮೊದಲ ಬಾರಿಗೆ ನಂ.1 ಸ್ಥಾನಕ್ಕೇರಿದ್ದರು. ಆದರೆ ನೂತನ ಪಟ್ಟಿಯಲ್ಲಿ ಅಶ್ವಿನ್ 6 ರೇಟಿಂಗ್ ಅಂಕಗಳನ್ನು ಕಳೆದುಕೊಂಡಿದ್ದು, ಸದ್ಯ 859 ರೇಟಿಂಗ್ ಅಂಕದೊಂದಿಗೆ ಆ್ಯಂಡರ್‌ಸನ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. 849 ಅಂಕ ಹೊಂದಿರುವ ಪ್ಯಾಟ್ ಕಮಿನ್ಸ್ 3ನೇ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಜಡೇಜಾ ಹಾಗೂ ಅಶ್ವಿನ್ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಡಿಆರ್‌ಎಸ್ ಬಳಿಕೆಯಲ್ಲಿ ಎಡವುತ್ತಿದ್ದೇವೆ: ರೋಹಿತ್
ಅಹಮದಾಬಾದ್: ಆಸ್ಪ್ರೇಲಿಯಾ ವಿರುದ್ಧ ಸರಣಿಯಲ್ಲಿ ಡಿಆರ್‌ಎಸ್ ಬಳಕೆಯಲ್ಲಿ ಪದೇ ಪದೇ ತಪ್ಪುಗಳಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ನಾಯಕ ರೋಹಿತ್ ಶರ್ಮಾ, ‘ಡಿಆರ್‌ಎಸ್ ಬಳಕೆಯಲ್ಲಿ ನಾವು ಎಡವುತ್ತಿದ್ದೇವೆ. ವಿಶೇಷವಾಗಿ ಜಡೇಜಾ ಎಲ್ಲಾ ಎಸೆತಗಳನ್ನು ಔಟ್ ಎಂದೇ ಭಾವಿಸುತ್ತಾರೆ’ ಎಂದಿದ್ದಾರೆ. ‘ಬೌಲರ್ ಹಾಗೂ ವಿಕೆಟ್ ಕೀಪರ್ ವಿಶ್ವಾಸ ಹೊಂದಿದ್ದರೆ ನಾವು ಡಿಆರ್‌ಎಸ್ ಪಡೆಯುತ್ತೇವೆ. ಆದರೆ ಕೆಲ ಎಸೆತಗಳು ಸ್ಟಂಪ್‌ನ ಹತ್ತಿರಕ್ಕೂ ಬಂದಿರುವುದಿಲ್ಲ. ಮುಂದಿನ ಪಂದ್ಯದಲ್ಲಿ ಈ ತಪ್ಪುಗಳನ್ನು ಸರಿಪಡಿಸುವ ಭರವಸೆ ಇದೆ’ ಎಂದು ರೋಹಿತ್ ಹೇಳಿದ್ದಾರೆ.
ಅಹಮದಾಬಾದ್ ಟೆಸ್ಟ್‌ಗೆ ಸಾಕ್ಷಿಯಾದ ಪ್ರಧಾನಿ ಮೋದಿ, ಆಸೀಸ್ ಪ್ರಧಾನಿ ಆಂಥೋನಿ! ಕ್ರಿಕೆಟ್‌ನ ಐತಿಹಾಸಿಕ ಕ್ಷಣ
ಐಸಿಸಿ ತೀರ್ಪು ಬಗ್ಗೆ ಬಿಸಿಸಿಐ ಮೇಲ್ಮನವಿ?
3ನೇ ಟೆಸ್ಟ್‌ಗೆ ಆತಿಥ್ಯ ವಹಿಸಿದ್ದ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದ ಪಿಚ್‌ಗೆ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ‘ಕಳಪೆ’ ಎಂದು ರೇಟಿಂಗ್ ನೀಡಿದ್ದರು. ಐಸಿಸಿಯ ಈ ತೀರ್ಪಿನ ಬಗ್ಗೆ ಬಿಸಿಸಿಐ ಮೇಲ್ಮನವಿ ಸಲ್ಲಿಸಲು ಗಂಭೀರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಮೇಲ್ಮನವಿ ಸಲ್ಲಿಸಲು ಐಸಿಸಿ ನಿರ್ಧಾರ ಪ್ರಕಟಿಸಿದ ದಿನದಿಂದ 14 ದಿನಗಳವರೆಗೂ ಸಮಯವಿರಲಿದೆ.
