* ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕೆವಿನ ಒ ಬ್ರಿಯಾನ್* ಐರ್ಲೆಂಡ್ ತಂಡದ ಪರ ದಶಕಗಳ ಕಾಲ ಕ್ರಿಕೆಟ್ ಆಡಿದ್ದ ಕೆವಿನ್ ಒ ಬ್ರಿಯಾನ್* ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸ್ಮರಣೀಯ ಇನಿಂಗ್ಸ್ ಆಡಿದ್ದ ಐರ್ಲೆಂಡ್ ಆಟಗಾರ
ಡುಬ್ಲಿನ್(ಆ.16): 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ತಂಡಕ್ಕೆ ರೋಚಕ ಸೋಲುಣಿಸಿದ್ದ ಐರ್ಲೆಂಡ್ ಸ್ಟಾರ್ ಆಲ್ರೌಂಡರ್ ಕೆವಿನ್ ಒ ಬ್ರಿಯಾನ್, ಇಂದು(ಆ.16) ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ದಶಕಗಳ ಕಾಲ ಐರ್ಲೆಂಡ್ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ 38 ವರ್ಷದ ಕೆವಿನ್ ಒ ಬ್ರಿಯಾನ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
ಕೆವಿನ್ ಒ ಬ್ರಿಯಾನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಮ್ಮ ಸ್ಟೇಟ್‌ಮೆಂಟ್‌ನೊಂದಿಗೆ ತಮ್ಮ ವಿದಾಯವನ್ನು ಘೋಷಿಸಿದ್ದಾರೆ. 2006ರ ಜೂನ್ ತಿಂಗಳಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕೆವಿನ್ ಒ ಬ್ರಿಯಾನ್, 2007ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು ಐರ್ಲೆಂಡ್ ಎರಡನೇ ಸುತ್ತು ಪ್ರವೇಶಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಇದಾದ ಬಳಿಕ 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಮಿಂಚಿದ್ದರು. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಇಂಗ್ಲೆಂಡ್ ನೀಡಿದ್ದ 328 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡವು 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಕೆವಿನ್ ಒ ಬ್ರಿಯಾನ್ ಕೇವಲ 63 ಎಸೆತಗಳಲ್ಲಿ ಸ್ಪೋಟಕ 113 ರನ್ ಚಚ್ಚಿದ್ದರು.
ಬಲಗೈ ಬ್ಯಾಟರ್ ಕೆವಿನ್ ಒ ಬ್ರಿಯಾನ್, ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಐರ್ಲೆಂಡ್‌ನ ನಾಲ್ವರು ಬ್ಯಾಟರ್‌ಗಳ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ. ಇನ್ನುಳಿದಂತೆ ವಿಲಿಯಂ ಫೋರ್ಟ್‌ಫೀಲ್ಡ್, ಎಡ್ ಜಾಯ್ಸ್ ಹಾಗೂ ಪೌಲ್ ಸ್ಟೆರ್ಲಿಂಗ್ ಏಕದಿನ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ್ದಾರೆ. ಇನ್ನು 2018ರಲ್ಲಿ ಕೆವಿನ್ ಒ ಒಬ್ರಿಯಾನ್ ಪಾಕಿಸ್ತಾನ ವಿರುದ್ದ ಐರ್ಲೆಂಡ್ ತಂಡವು ತಾನಾಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೂ ಕಣಕ್ಕಿಳಿದಿದ್ದರು.
ಜಿಂಬಾಬ್ವೆ ಪ್ರವಾಸದಿಂದ ವಾಷಿಂಗ್ಟನ್ ಸುಂದರ್ ಔಟ್, RCB ಕ್ರಿಕೆಟಿಗನಿಗೆ ಒಲಿದ ಜಾಕ್‌ಪಾಟ್..!
ಕೆವಿನ್ ಒ ಬ್ರಿಯಾನ್, 2021ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಮೀಬಿಯಾ ವಿರುದ್ದ ಕೊನೆಯ ಬಾರಿಗೆ ಐರ್ಲೆಂಡ್ ತಂಡದ ಪರ ಕಾಣಿಸಿಕೊಂಡಿದ್ದರು. ಇದುವರೆಗೂ ಕೆವಿನ್ ಒ ಬ್ರಿಯಾನ್ ಐರ್ಲೆಂಡ್ ತಂಡದ ಪರ 3 ಟೆಸ್ಟ್, 153 ಏಕದಿನ ಹಾಗೂ 110 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 258, 3,619 ಹಾಗೂ 1,973 ರನ್ ಬಾರಿಸಿದ್ದಾರೆ.
ಕೆವಿನ್ ಒ ಬ್ರಿಯಾನ್, ಬ್ಯಾಟಿಂಗ್‌ನಲ್ಲಷ್ಟೇ ಅಲ್ಲದೇ ಮಧ್ಯಮ ವೇಗದ ಬೌಲರ್ ಆಗಿಯೂ ಸೈ ಎನಿಸಿಕೊಂಡಿದ್ದರು. ಕೆವಿನ್ ಒ ಬ್ರಿಯಾನ್, ಐರ್ಲೆಂಡ್ ತಂಡದ ಪರ 172 ವಿಕೆಟ್ ಕಬಳಿಸಿದ್ದರು. ಇನ್ನು ಪೌಲ್ ಸ್ಟೆರ್ಲಿಂಗ್, ವಿಲಿಯಂ ಫೋರ್ಟ್‌ಫೀಲ್ಡ್ ಬಳಿಕ ಐರ್ಲೆಂಡ್ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿದ್ದಾರೆ.
