ಆರ್‌ಸಿಬಿ ತಂಡವು 2025ರ ಐಪಿಎಲ್‌ಗೆ ಹೊಸ ನಾಯಕನನ್ನು ಘೋಷಿಸಿದೆ. ಈ ಹಿಂದೆ ಏಳು ಸತತ ಗೆಲುವು ಸಾಧಿಸಿದ್ದರೂ, ಪ್ಲೇಆಫ್‌ನಲ್ಲಿ ರಾಜಸ್ಥಾನದ ವಿರುದ್ಧ ಸೋತಿತ್ತು. 17 ಆವೃತ್ತಿಗಳಲ್ಲಿ ಮೂರು ಬಾರಿ ಫೈನಲ್ ತಲುಪಿದ್ದರೂ, ಟ್ರೋಫಿ ಗೆಲ್ಲದ ಆರ್‌ಸಿಬಿ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲಿದೆ.
ಬೆಂಗಳೂರು: ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ನಾಯಕನ ಘೋಷಣೆಯಾಗಿದೆ. 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ನಾಯಕರಾಗಿ ರಜತ್ ಪಾಟೀದಾರ್ ನೇಮಕವಾಗಿದ್ದಾರೆ. ಈ ಮೂಲಕ ಹೊಸ ತಂಡ ಹೊಸ ನಾಯಕನೊಂದಿಗೆ ಹೊಸ ಹುರುಪಿನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ.
ಹೌದು, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ನೀರಸ ಪ್ರದರ್ಶನದ ಮೂಲಕ ಕಂಗಾಲಾಗಿದ್ದ ಆರ್‌ಸಿಬಿ ತಂಡವು ಇದಾದ ಬಳಿಕ ಫಿನಿಕ್ಸ್‌ನಂತೆ ಎದ್ದು ನಿಂತು ಸತತ 7 ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಮುಗ್ಗರಿಸುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಇದೀಗ ಆರ್‌ಸಿಬಿ ತಂಡವು ಹಳೆಯ ತಪ್ಪುಗಳನ್ನು ತಿದ್ದಿಕೊಂಡು 18ನೇ ಆವೃತ್ತಿಯಲ್ಲಿ ಹೊಸ ಅಧ್ಯಾಯ ಸೃಷ್ಟಿಸಲು ಸಜ್ಜಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ದ್ವಿತಿಯಾರ್ಧದಲ್ಲಿ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ರಜತ್ ಪಾಟೀದಾರ್‌ಗೆ ಆರ್‌ಸಿಬಿ ಫ್ರಾಂಚೈಸಿಯು ನಾಯಕತ್ವ ಪಟ್ಟ ಕಟ್ಟಿದೆ. ರಜತ್ ಪಾಟೀದಾರ್ ಅವರ ಮೇಲೆ ವಿಶ್ವಾಸ ಇದ್ದಿದ್ದಕ್ಕಾಗಿಯೇ ಆರ್‌ಸಿಬಿ ಫ್ರಾಂಚೈಸಿಯು ಮಧ್ಯಪ್ರದೇಶ ಮೂಲದ ಆಟಗಾರನನ್ನು ಐಪಿಎಲ್ ಮೆಗಾ ಹರಾಜಿಗೂ ಮುನ್ನ ರೀಟೈನ್ ಮಾಡಿಕೊಂಡಿತ್ತು. ಆರ್‌ಸಿಬಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರತಿಭಾನ್ವಿತ ಯುವ ಬ್ಯಾಟರ್ ಆಗಿರುವ ಪಾಟೀದಾರ್ ಬೆಂಗಳೂರು ತಂಡದ ನಾಯಕರಾಗಿ ನೇಮಕವಾಗಿದ್ದಾರೆ.
ಕಳೆದ 17 ಆವೃತ್ತಿಗಳಿಂದಲೂ ಐಪಿಎಲ್ ಆಡುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇದುವರೆಗೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ್ದೇ ಆರ್‌ಸಿಬಿ ತಂಡದ ಇದುವರೆಗಿನ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ.
ಈ ಹಿಂದಿನ ಆರ್‌ಸಿಬಿ ನಾಯಕರು ಯಾರ್ಯಾರು?
2008- ರಾಹುಲ್ ದ್ರಾವಿಡ್
2009- ಕೆವಿನ್ ಪೀಟರ್‌ಸನ್
2009-10- ಅನಿಲ್ ಕುಂಬ್ಳೆ
2011-12- ಡೇನಿಯಲ್ ವೆಟೋರಿ
2017- ಶೇನ್ ವಾಟ್ಸನ್(ಹಂಗಾಮಿ)
2013-21- ವಿರಾಟ್ ಕೊಹ್ಲಿ
2022-24- ಫಾಫ್ ಡು ಪ್ಲೆಸಿಸ್
2025- ರಜತ್ ಪಾಟೀದಾರ್
