ಐಪಿಎಲ್ 2025ರ ಎರಡನೇ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಫೈನಲ್ ಪ್ರವೇಶಕ್ಕಾಗಿ ಹಣಾಹಣಿ ನಡೆಸಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟಾಸ್ ಮಹತ್ವದ ಪಾತ್ರ ವಹಿಸಲಿದೆ.
ಅಹಮದಾಬಾದ್: ಐಪಿಎಲ್ 2025ರ ಎರಡನೇ ಕ್ವಾಲಿಫೈಯರ್ ಪಂದ್ಯ ಇಂದು ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೈನಲ್‌ಗೆ ತಲುಪಲು ಇದು ಎರಡೂ ತಂಡಗಳಿಗೆ ಕೊನೆಯ ಅವಕಾಶ. ಗೆದ್ದ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಸೋತ ತಂಡದ ಪಯಣ ಇಲ್ಲಿಗೆ ಮುಕ್ತಾಯವಾಗಲಿದೆ. ಪಂಜಾಬ್ ಕಿಂಗ್ಸ್ ತನ್ನ ಮೊದಲ ಟ್ರೋಫಿ ಗೆಲ್ಲುವತ್ತ ಒಂದು ಹೆಜ್ಜೆ ಮುಂದಿಡಲು ಉತ್ಸುಕವಾಗಿದ್ದರೆ, ಮುಂಬೈ ತನ್ನ ಆರನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆಲ್ಲುವುದು ಬಹಳ ಮುಖ್ಯ. ಇಲ್ಲಿ ಟಾಸ್ ಗೆದ್ದೋರೇ ಬಾಸ್ ಆಗುವ ಸಾಧ್ಯತೆ ಬಹುತೇಕ ಹೆಚ್ಚಿದೆ.
ಅಹಮದಾಬಾದ್‌ನಲ್ಲಿ ಟಾಸ್ ಮಹತ್ವದ ಪಾತ್ರ ವಹಿಸಲಿದೆ
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ 2025ರಲ್ಲಿ ಈವರೆಗೆ 7 ಪಂದ್ಯಗಳು ನಡೆದಿದ್ದು, ಚೇಸಿಂಗ್ ಮಾಡುವ ಬದಲು ಮೊದಲು ಬ್ಯಾಟಿಂಗ್ ಮಾಡಿದ ತಂಡಗಳಿಗೆ ಹೆಚ್ಚಿನ ಯಶಸ್ಸು ದೊರೆತಿದೆ. ಈ ಹಿಂದೆ ಇಲ್ಲಿ ಚೇಸಿಂಗ್ ಸುಲಭ ಎನಿಸಿದ್ದರೂ, ಈ ಬಾರಿ ಚಿತ್ರಣ ಬದಲಾಗಿದೆ. 7 ಪಂದ್ಯಗಳಲ್ಲಿ 6ರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದಿವೆ. ಚೇಸಿಂಗ್ ಮಾಡಿ ಗೆದ್ದ ಏಕೈಕ ಪಂದ್ಯ ಹಗಲಿನಲ್ಲಿ ನಡೆದಿತ್ತು. ಹೀಗಾಗಿ ಟಾಸ್ ಗೆಲ್ಲುವುದು ಎರಡೂ ತಂಡಗಳಿಗೆ ಮುಖ್ಯವಾಗಿದೆ.
ಪಂಜಾಬ್ ಕಿಂಗ್ಸ್ ಕಿಂಗ್ಸ್ ತಂಡವು 2014ರ ಬಳಿಕ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಲು ಕನಸು ಕಾಣುತ್ತಿದೆ. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ 2020ರ ಬಳಿಕ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡಲು ಎದುರು ನೋಡುತ್ತಿದೆ.
ಐಪಿಎಲ್‌ನಲ್ಲಿ ಪಂಜಾಬ್ ಮತ್ತು ಮುಂಬೈ ಎರಡನೇ ಬಾರಿ ಮುಖಾಮುಖಿ
ಐಪಿಎಲ್‌ನ 18ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಎರಡನೇ ಬಾರಿ ಮುಖಾಮುಖಿಯಾಗುತ್ತಿವೆ. ಲೀಗ್ ಹಂತದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಂಜಾಬ್ ಗೆದ್ದಿತ್ತು. ಆದರೆ, ಆಗಲೇ ಎರಡೂ ತಂಡಗಳು ಟಾಪ್ 4ರಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದವು. ಆ ಗೆಲುವಿನ ನಂತರ ಪಂಜಾಬ್ ಟಾಪ್ 2ರಲ್ಲಿ ಸ್ಥಾನ ಪಡೆದು ಕ್ವಾಲಿಫೈಯರ್ 1ರಲ್ಲಿ ಆಡಿತ್ತು. ಆದರೆ, ಆರ್‌ಸಿಬಿ ವಿರುದ್ಧ ಸೋಲು ಕಂಡಿತ್ತು. ಮುಂಬೈ ನಾಲ್ಕನೇ ಸ್ಥಾನ ಪಡೆದು ಎಲಿಮಿನೇಟರ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿತ್ತು.
ಐಪಿಎಲ್‌ನಲ್ಲಿ ಪಂಜಾಬ್-ಮುಂಬೈ ಹೆಡ್-ಟು-ಹೆಡ್ ದಾಖಲೆ
ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಒಟ್ಟು 33 ಐಪಿಎಲ್ ಪಂದ್ಯಗಳು ನಡೆದಿದ್ದು, ಮುಂಬೈ ಇಂಡಿಯನ್ಸ್ 17 ಪಂದ್ಯಗಳಲ್ಲಿ ಮತ್ತು ಪಂಜಾಬ್ 16 ಪಂದ್ಯಗಳಲ್ಲಿ ಗೆದ್ದಿದೆ. ಈ ವರ್ಷ ನಡೆದ ಪಂದ್ಯದಲ್ಲಿ ಪಂಜಾಬ್ ಗೆದ್ದಿತ್ತು. ಈಗ ಫೈನಲ್‌ಗೆ ಯಾವ ತಂಡ ಪ್ರವೇಶ ಪಡೆಯಲಿದೆ ಎಂದು ಕಾದು ನೋಡಬೇಕು.
ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಜಾನಿ ಬೇರ್‌ಸ್ಟೋವ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ನಮನ್ ಧಿರ್, ರಾಜ್ ಭಾವಾ, ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ರಿಚರ್ಡ್ ಗ್ಲೀಸನ್.
ಪಂಜಾಬ್ ಕಿಂಗ್ಸ್: ಪ್ರಭ್‌ಸಿಮ್ರನ್ ಸಿಂಗ್, ಪ್ರಿಯಾನ್ಶ್ ಆರ್ಯ, ಶ್ರೇಯಸ್ ಅಯ್ಯರ್(ನಾಯಕ), ಜೋಶ್ ಇಂಗ್ಲಿಶ್(ವಿಕೆಟ್ ಕೀಪರ್), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್, ಅಝ್ಮತುಲ್ಲಾ ಓಮರ್‌ಝೈ, ಹರ್ಪ್ರೀತ್ ಬ್ರಾರ್, ಅರ್ಶದೀಪ್ ಸಿಂಗ್, ಕೈಲ್ ಜೇಮಿಸನ್, ವಿಜಯ್‌ಕುಮಾರ್ ವೈಶಾಕ್.
