ಐಪಿಎಲ್ 2024ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮಳೆ ಅಡ್ಡಿಯಾದರೆ ಪಂಜಾಬ್ ಫೈನಲ್‌ಗೆ ಅರ್ಹತೆ ಪಡೆಯಲಿದೆ.

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕ್ವಾಲಿಫೈಯರ್-2 ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡವು ಜೂನ್ 03ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜತೆ ಕಾದಾಡಲಿದೆ.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದಿದ್ದ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ಆರ್‌ಸಿಬಿ, ಪಂಜಾಬ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ್ದಲ್ಲದೇ ಇನ್ನೂ 10 ಓವರ್ ಬಾಕಿ ಇರುವಂತೆಯೇ 8 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನೊಂದೆಡೆ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಹೈಸ್ಕೋರಿಂಗ್ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ 20 ರನ್ ರೋಚಕ ಗೆಲುವು ಸಾಧಿಸಿದ್ದು, ಇದೀಗ ಎರಡನೇ ಕ್ವಾಲಿಫೈಯರ್ ಕದನಕ್ಕೆ ರೆಡಿಯಾಗಿದೆ. ಇಂದು ಗೆಲ್ಲುವ ತಂಡ ಫೈನಲ್‌ಗೇರಿದರೆ, ಸೋಲುವ ತಂಡ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಲಿದೆ.

ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ:

ಐಪಿಎಲ್ ಕ್ವಾಲಿಫೈಯರ್ 2 ಪಂದ್ಯವು ಇಂದು ಸಂಜೆ 7.30ರಿಂದ ಆರಂಭವಾಗಲಿದೆ. ಇನ್ನು 7 ಗಂಟೆಗೆ ಪಂದ್ಯದ ಟಾಸ್ ನಡೆಯಲಿದೆ. ಈ ಮಹತ್ವದ ಪಂದ್ಯಕ್ಕೆ ಮಳೆರಾಯ ಕೊಂಚ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆಕ್ಯೂವೆದರ್ ರಿಪೋರ್ಟ್ ಪ್ರಕಾರ, ಜೂನ್ 01ರ ಸಂಜೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸಮೀಪ ಶೇ 40% ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಉಭಯ ತಂಡಗಳ ಪಾಲಿಗೆ ಈ ಪಂದ್ಯವು ಸಾಕಷ್ಟು ಮಹತ್ವದ್ದೆನಿಸಿರುವುದರಿಂದ ಶತಾಯಗತಾಯ ಈ ಪಂದ್ಯವನ್ನು ಪೂರ್ಣಗೊಳಿಸಲು ಮ್ಯಾಚ್ ಅಫೀಶಿಯಲ್ಸ್ ಹಾಗೂ ಅಂಪೈರ್ಸ್ ಪ್ರಯತ್ನ ಮಾಡುತ್ತಾರೆ. ಇದೆಲ್ಲದರ ಹೊರತಾಗಿಯೂ ಸುಸೂತ್ರವಾಗಿ ಪಂದ್ಯ ಆಯೋಜನೆ ಮಾಡಲು ಸಾಧ್ಯವಾಗದಿದ್ದರೇ, ಪಂದ್ಯವನ್ನು ರದ್ದು ಮಾಡಲಾಗಿದೆ ಎಂದು ಘೋಷಿಸಲಾಗುತ್ತದೆ.

View post on Instagram

ಮ್ಯಾಚ್ ರದ್ದಾದ್ರೇ ಪಂಜಾಬ್ ಫೈನಲ್‌ಗೆ, ಮುಂಬೈ ಮನೆಗೆ!

ಹೌದು, ಈ ಬಾರಿಯ ಐಪಿಎಲ್ ಕ್ವಾಲಿಫೈಯರ್ ಪಂದ್ಯಗಳಿಗೆ ಯಾವುದೇ ಮೀಸಲು ದಿನವಿಲ್ಲ ಎನ್ನುವುದನ್ನು ಐಪಿಎಲ್ ಆರ್ಗನೈಸಿಂಗ್ ಕಮಿಟಿ ಖಚಿತಪಡಿಸಿದೆ. ಹೀಗಾಗಿ ಇಂದಿನ ಪಂದ್ಯ ರದ್ದಾದ್ರೆ, ಲೀಗ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ತಂಡವು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ. ಹೀಗಾದ ಪಕ್ಷದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಫೈನಲ್‌ಗೆ ತಮ್ಮ ಟಿಕೆಟ್ ಕನ್ಫರ್ಮ್ ಮಾಡಿಕೊಳ್ಳಲಿದೆ. ಯಾಕೆಂದರೆ ಪಂಜಾಬ್ ಕಿಂಗ್ಸ್ ತಂಡವು ಲೀಗ್ ಹಂತದ ಅಂತ್ಯದ ವೇಳೆಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿತ್ತು. ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ನಾಲ್ಕನೇ ಸ್ಥಾನ ಪಡೆದಿತ್ತು.

ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಜಾನಿ ಬೇರ್‌ಸ್ಟೋವ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ನಮನ್ ಧಿರ್, ರಾಜ್ ಭಾವಾ, ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ರಿಚರ್ಡ್ ಗ್ಲೀಸನ್.

ಪಂಜಾಬ್ ಕಿಂಗ್ಸ್: ಪ್ರಭ್‌ಸಿಮ್ರನ್ ಸಿಂಗ್, ಪ್ರಿಯಾನ್ಶ್ ಆರ್ಯ, ಶ್ರೇಯಸ್ ಅಯ್ಯರ್(ನಾಯಕ), ಜೋಶ್ ಇಂಗ್ಲಿಶ್(ವಿಕೆಟ್ ಕೀಪರ್), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್, ಅಝ್ಮತುಲ್ಲಾ ಓಮರ್‌ಝೈ, ಹರ್ಪ್ರೀತ್ ಬ್ರಾರ್, ಅರ್ಶದೀಪ್ ಸಿಂಗ್, ಕೈಲ್ ಜೇಮಿಸನ್, ವಿಜಯ್‌ಕುಮಾರ್ ವೈಶಾಕ್.