ಐಪಿಎಲ್‌ನ 18ನೇ ಆವೃತ್ತಿಯ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ. ಕ್ವಾಲಿಫೈಯರ್ -2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಪಂಜಾಬ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಅಹಮದಾಬಾದ್: 18ನೇ ಆವೃತ್ತಿ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಎದುರಾಳಿ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಭಾನುವಾರ ಕ್ವಾಲಿಫೈಯರ್ -2 ಪಂದ್ಯದಲ್ಲಿ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 5 ವಿಕೆಟ್‌ಗಳಿಂದ ಸೋಲಿಸಿದ ಪಂಜಾಬ್ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತು. ಇದರೊಂದಿಗೆ ಮುಂಬೈ ತಂಡದ 7ನೇ ಬಾರಿ ಫೈನಲ್‌ಗೇರುವ ಕನಸು ಭಗ್ನಗೊಂಡಿತು. ಪಂಜಾಬ್ 2ನೇ ಬಾರಿ ಫೈನಲ್ ತಲುಪಿತು.
ಮಳೆ ಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 6 ವಿಕೆಟ್‌ಗೆ 203 ರನ್ ಕಲೆ ಹಾಕಿತು.ಪ್ಲೇ-ಆಫ್‌ನಂತಹ ಒತ್ತಡದ ಪಂದ್ಯದಲ್ಲಿ ಇದು ಬೃಹತ್ ಮೊತ್ತ. ಆದರೆ ಅತ್ಯಾಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಪಂಜಾಬ್ 19 ಓವರ್ ಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು.
ಪ್ರಭ್‌ಸಿಮ್ರನ್ (6), ಪ್ರಿಯಾನ್ಸ್ ಆರ್ಯ(20) ಮಿಂಚಲಿಲ್ಲ. ಬುಮ್ರಾರ ಮೊದಲ ಓವರ್‌ನಲ್ಲಿ 20 ರನ್ ಚಚ್ಚಿದ ಜೋಶ್ ಇಂಗ್ಲಿಸ್ 21 ಎಸೆತಕ್ಕೆ 38 ರನ್ ಗಳಿಸಿ ಔಟಾದರು. ಬಳಿಕ ಇನ್ನಿಂಗ್ಸ್ ಕಟ್ಟಿದ್ದು ಶ್ರೇಯಸ್ ಹಾಗೂ ನೇಹಲ್ ವಧೇರಾ, ರೀಸ್ ಟಾಪ್ಲಿ ಎಸೆದ 13ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಶ್ರೇಯಸ್, ಪಂದ್ಯದಗತಿ ಬದಲಿಸಿದರು. ನೇಹಲ್ ವಧೇರಾ(29 ಎಸೆತಕ್ಕೆ 48) ಔಟಾದ ಬಳಿಕ, ಶ್ರೇಯಸ್ (41 ಎಸೆತಕ್ಕೆ 87) ತಂಡವನ್ನು ಗೆಲ್ಲಿಸಿದರು. 19ನೇ ಓವರ್‌ನಲ್ಲಿ 4 ಸಿಕ್ಸರ್ ಬಾರಿಸಿ ತಂಡವನ್ನು ಫೈನಲ್‌ಗೇರಿಸಿದರು.
ಉತ್ತಮ ಬ್ಯಾಟಿಂಗ್: ಇದಕ್ಕೂ ಮುನ್ನ ಮುಂಬೈ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ತಂಡದ ಯಾರೊಬ್ಬರೂ ಅರ್ಧಶತಕ ಬಾರಿಸದಿದ್ದರೂ, 200ರ ಗಡಿ ದಾಟಿತು. ಸೂರ್ಯಕುಮಾರ್ 26 ಎಸೆತಕ್ಕೆ 44, ತಿಲಕ್ ವರ್ಮಾ 29 ಎಸೆತಕ್ಕೆ 44, ಬೇರ್‌ಸ್ಟೋವ್ 24 ಎಸೆತಕ್ಕೆ 38, ನಮನ್ 18 ಎಸೆತಕ್ಕೆ 37 ರನ್ ಸಿಡಿಸಿದರು.
ಸ್ಕೋರ್ :
ಮುಂಬೈ 20 ಓವರಲ್ಲಿ 203/6 (ಸೂರ್ಯ 44, ತಿಲಕ್ 44, ಅತುಲ್ಲಾ 2-43)
ಪಂಜಾಬ್ 19 ಓವರಲ್ಲಿ 207/5 (ಶ್ರೇಯಸ್ 87, ನೇಹಲ್ 48, ಅಶ್ವನಿ 2-55)
11 ವರ್ಷಗಳ ಬಳಿಕ ಪಂಜಾಬ್‌ಗೆ ಫೈನಲ್‌ಗೆ
ಪಂಜಾಬ್ ಐಪಿಎಲ್‌ನಲ್ಲಿ 11 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿತು. ತಂಡಕ್ಕಿದು ಒಟ್ಟಾರೆ 2ನೇ ಫೈನಲ್.2014ರಲ್ಲಿ ಫೈನಲ್‌ಗೇರಿದ್ದ ತಂಡ ಕೋಲ್ಕತಾ ವಿರುದ್ಧ ಸೋತು ರನ್ನರ್-ಅಪ್ ಆಗಿತ್ತು.
ಈ ಸಲ ಐಪಿಎಲ್‌ನಲ್ಲಿ ಹೊಸ ಚಾಂಪಿಯನ್!
ಈ ಬಾರಿ ಐಪಿಎಲ್‌ನಲ್ಲಿ ಹೊಸ ಚಾಂಪಿಯನ್ ತಂಡದ ಉದಯವಾಗಲಿದೆ. ಫೈನಲ್‌ನಲ್ಲಿ ಆರ್ ಸಿಬಿ ಹಾಗೂ ಪಂಜಾಬ್ ಸೆಣಸಾಡಲಿದ್ದು, ಯಾರೇ ಗೆದ್ದರೂ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಆರ್‌ಸಿಬಿ ಈ ಮೊದಲು 3 ಬಾರಿ ಫೈನಲ್‌ನಲ್ಲಿ ಸೋತಿದ್ದರೆ, ಪಂಜಾಬ್ ಒಂದು ಬಾರಿ ಫೈನಲ್ ಆಡಿ ಸೋಲನುಭವಿಸಿತ್ತು.
200+ ರನ್ ಗುರಿ ನೀಡಿ ಸೋತಿದ್ದು ಇದೇ ಫಸ್ಟ್!
ಮುಂಬೈ ತಂಡ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿ 200+ ರನ್ ರಕ್ಷಿಸಲು ವಿಫಲವಾಗಿದೆ. ಈ ವರೆಗೂ ತಂಡ 19 ಬಾರಿ ಎದುರಾಳಿಗೆ 200+ ರನ್ ಗುರಿ ನೀಡಿದೆ. ಪಂಜಾಬ್ ವಿರುದ್ಧ ಸೋತಿದ್ದರೆ, ಉಳಿದ 18 ಪಂದ್ಯಗಳಲ್ಲಿ ಗೆದ್ದಿದೆ.
ಆರ್‌ಸಿಬಿ- ಪಂಜಾಬ್ ನಾಳೆ ಫೈನಲ್ ಫೈಟ್
ಈ ಬಾರಿ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಮಂಗಳವಾರ ಆರ್‌ಸಿಬಿ ಹಾಗೂ ಪಂಜಾಬ್ ಸೆಣಸಾಡಲಿವೆ. ಆರ್‌ಸಿಬಿ 4ನೇ ಬಾರಿ ಫೈನಲ್ ಗೇರಿದ್ದು, ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಪಂಜಾಬ್ 2ನೇ ಸಲ ಫೈನಲ್ ಆಡಲಿದ್ದು, ಮೊದಲ ಟ್ರೋಫಿ ಗೆಲ್ಲುವ ಕಾತರದಲ್ಲಿದೆ.
