ಐಪಿಎಲ್ 2025ರ ಫೈನಲ್‌ನಲ್ಲಿ ಆರ್‌ಸಿಬಿ ಎದುರಾಳಿ ಯಾರೆಂಬುದು ಭಾನುವಾರ ನಿರ್ಧಾರವಾಗಲಿದೆ. ಕ್ವಾಲಿಫೈಯರ್ -2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಮುಖಾಮುಖಿಯಾಗಲಿವೆ. ಗೆದ್ದ ತಂಡ ಜೂನ್ 3 ರಂದು ಆರ್‌ಸಿಬಿ ವಿರುದ್ಧ ಫೈನಲ್‌ನಲ್ಲಿ ಸೆಣಸಲಿದೆ.

ಅಹಮದಾಬಾದ್: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆರ್‌ಸಿಬಿ ಫೈನಲ್ ಪ್ರವೇಶಿಸಿ 3 ದಿನಗಳಾಗಿವೆ. ಪ್ರಶಸ್ತಿ ಕದನದಲ್ಲಿ ಆರ್‌ಸಿಬಿಗೆ ಎದುರಾಳಿ ಯಾರಾಗಲಿದ್ದಾರೆ ಎಂಬ ತೆರೆ ಕುತೂಹಲಕ್ಕೆ ಭಾನುವಾರ ಬೀಳಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ -2 ಪಂದ್ಯದಲ್ಲಿ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಮೊದಲ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಪಂಜಾಬ್ ಮುಖಾಮುಖಿಯಾಗಲಿವೆ.

ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ ಪ್ರವೇಶಿಸಲಿದ್ದು, ಜೂನ್‌ 3ರಂದು ಆರ್‌ಸಿಬಿ ವಿರುದ್ಧ ಅಹಮದಾಬಾದ್ ಕ್ರೀಡಾಂಗಣದಲ್ಲೇ ಟ್ರೋಫಿಗಾಗಿ ಸೆಣಸಾಡಲಿದೆ. ಸೋತ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ತಂಡ ಗುಂಪು ಹಂತದಲ್ಲಿ ಅಗ್ರಸ್ಥಾನಿಯಾಗಿ, ಕ್ವಾಲಿಫೈಯರ್-1 ಪ್ರವೇಶಿಸಿತ್ತು. ಆದರೆ ತಂಡಕ್ಕೆ ಆರ್‌ಸಿಬಿ ವಿರುದ್ಧ ಸೋಲು ಎದುರಾಗಿದ್ದರಿಂದ ಫೈನಲ್‌ಗೇರಲು ಕ್ವಾಲಿಫೈಯರ್‍‌-2ರಲ್ಲಿ ಆಡಲಿದೆ. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಸಾರಥ್ಯದ ಮುಂಬೈ ಗುಂಪು ಹಂತದಲ್ಲಿ 4ನೇ ಸ್ಥಾನಿಯಾಗಿದ್ದು, ಶುಕ್ರವಾರ ಎಲಿಮಿನೇಟರ್‌ನಲ್ಲಿ ಗುಜರಾತ್ ಟೈಟಾನ್ಸ್‌ನ ಮಣಿಸಿ ಕ್ವಾಲಿಫೈಯರ್ 2 ಪ್ರವೇಶಿಸಿದೆ.

ಆತ್ಮವಿಶ್ವಾಸದಲ್ಲಿ ಮುಂಬೈ: ಹಲವು ನಾಯಕರು, ಹಿರಿಯ ಹಾಗೂ ಅನುಭವಿ ಆಟಗಾರರು, ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಕ್ಷಣದಲ್ಲಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಆಟಗಾರರನ್ನೊಳಗೊಂಡಿರುವ ಮುಂಬೈ ಇಂಡಿಯನ್ಸ್ ತುಂಬು ಆತ್ಮವಿಶ್ವಾಸದಲ್ಲಿದೆ. ಗುಜರಾತ್ ವಿರುದ್ಧದ ಮುಂಬೈನ ಪ್ರದರ್ಶನ ಪಂಜಾಬ್ ಪಾಳಯದಲ್ಲಿ ಭೀತಿ ಹುಟ್ಟಿಸಿದ್ದು ಸುಳ್ಳಲ್ಲ. ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಅಬ್ಬರಿಸುತ್ತಿದ್ದಾರೆ. ಜಸ್‌ಪ್ರೀತ್ ಬುಮ್ರಾ ಪ್ರಚಂಡ ದಾಳಿಯನ್ನು ಎದುರಿಸಲು ಪಂಜಾಬ್ ಬ್ಯಾಟರ್ಸ್ ಪಟ್ಟು ಹೆಚ್ಚು ಪರಿಶ್ರಮಪಡಬೇಕಿದೆ. ಬದಲಿ ಆಟಗಾರರಾಗಿ ತಂಡಕ್ಕೆ ಸೇರ್ಪಡೆಗೊಂಡಿರುವ ಜಾನಿ ಬೇರ್‌ಸ್ಟೋವ್‌ ಹಾಗೂ ವೇಗಿ ರಿಚರ್ಡ್ ಗ್ರೀಸನ್ ಕೂಡಾ ಗುಜರಾತ್ ವಿರುದ್ಧ ಅತ್ಯುತ್ತಮ ಪ್ರದರ್ಶನ ತೋರಿದ್ದು, ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಪುಟಿದೇಳುತ್ತಾ ಪಂಜಾಬ್?: ಲೀಗ್ ಹಂತದಲ್ಲಿ ಇತ್ತೀಚೆಗಷ್ಟೇ ಮುಂಬೈನ ಸೋಲಿಸಿದ್ದರೂ ತಂಡದ ಈಗಿನ ಪರಿಸ್ಥಿತಿ ಪಂಜಾಬ್‌ನ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿದೆ. ತಾರಾ ಆಲ್ರೌಂಡರ್ ಯಾನ್ಸನ್ ಅಲಭ್ಯತೆ, ಸ್ಪಿನ್ನರ್ ಚಹಲ್ ಗಾಯ ತಂಡವನ್ನು ಕುಗ್ಗಿಸಿದೆ. ಹೀಗಾಗಿ ಬೌಲಿಂಗ್ ವಿಭಾಗದ ದುರ್ಬಲವಾಗಿ ತೋರುತ್ತಿದೆ. ಬ್ಯಾಟರ್ಸ್‌ಗೆ ನೆರವಾಗುವ ಪಿಚ್‌ನಲ್ಲಿ ಅರ್ಶ್‌ದೀಪ್‌ಗೆ ಇತರ ಬೌಲರ್‌ಗಳು ಎಷ್ಟರ ಮಟ್ಟಿಗೆ ಬೆಂಬಲ ನೀಡಲಿದ್ದಾರೆ ಎಂಬುದರ ಮೇಲೆ ಪ್ರದರ್ಶನ ನಿರ್ಧಾರವಾಗಲಿದೆ. ಬ್ಯಾಟಿಂಗ್‌ನಲ್ಲಿ ಪ್ರಬ್‌ಸಿಮ್ರನ್, ಪ್ರಿಯಾನ್ ಆರ್ಯ, ನಾಯಕ ಶ್ರೇಯಸ್, ಜೋಶ್ ಇಂಗ್ಲಿಸ್ ಅಬ್ಬರಿಸಬೇಕಿದ್ದು, ಸ್ಟಾರ್ ಆಲ್ರೌಂಡರ್ ಮಾರ್ಕಸ್ ಸ್ಟೋನ್ನಿಸ್ ಆಟ ಕೂಡ ತಂಡಕ್ಕೆ ನಿರ್ಣಾಯಕ. ಎಲ್ಲಾ ವಿಭಾಗದಲ್ಲೂ ಸುಧಾರಿತ ಆಟವಾಡಿದರೆ ಮಾತ್ರ ಮುಂಬೈನ ಸೋಲಿಸಿ ಫೈನಲ್‌ಗೇರಬಹುದು.

ಪಂಜಾಬ್‌ಗೆ 2ನೇ, ಮುಂಬೈಗೆ ಏಳನೇ ಫೈನಲ್ ಮೇಲೆ ಕಣ್ಣು

ಮುಂಬೈ ತಂಡ 11ನೇ ಬಾರಿ ಪ್ಲೇ-ಆಫ್ ಆಡುತ್ತಿದ್ದು, 7ನೇ ಬಾರಿ ಫೈನಲ್‌ಗೇರುವ ತವಕದಲ್ಲಿದೆ. ತಂಡ ಈ ಮೊದಲು 2010ರಲ್ಲಿ ರನ್ನರ್ -ಅಪ್ ಆಗಿದ್ದರೆ, 2013, 2015, 2017, 2019 ಹಾಗೂ 2020ರಲ್ಲಿ ಟ್ರೋಫಿ ಗೆದ್ದಿದೆ. ಪಂಜಾಬ್ 2ನೇ ಬಾರಿ ಫೈನಲ್ ಗೇರುವ ಗುರಿ ಇಟ್ಟುಕೊಂಡಿದೆ. 2014ರಲ್ಲಿ ಫೈನಲ್‌ಗೇರಿದ್ದ ತಂಡ ಸೋಲನುಭವಿಸಿತ್ತು.