IPL 2024 ಕೊಹ್ಲಿ ಸೆಂಚುರಿ ಆಟಕ್ಕೆ ಸೃಷ್ಟಿಯಾಯ್ತು ದಾಖಲೆ, ರಾಜಸ್ಥಾನಕ್ಕೆ 184 ರನ್ ಟಾರ್ಗೆಟ್!
ಐಪಿಎಲ್ 2024ರಲ್ಲಿ ಆರ್‌ಸಿಬಿ ಮತ್ತೆ ಅಬ್ಬರಿಸಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಹಾಗೂ ನಾಯಕ ಪಾಫ್ ಹೋರಾಟದಿಂದ 183 ರನ್ ಸಿಡಿಸಿದೆ. ಈ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಸೂಚನೆ ನೀಡಿದೆ.
ಜೈಪುರ(ಏ.06) ಸೋಲಿನಿಂದ ಕಂಗೆಟ್ಟಿದ್ದ ಆರ್‌ಸಿಬಿ ಇದೀಗ ರಾಜಸ್ಥಾನ ರಾಯಲ್ಸ್ ವಿರುದ್ಧ ದಿಟ್ಟ ಹೋರಾಟ ನೀಡಿದೆ. ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲಸಿಸ್ ಹೋರಾಟದಿಂದ ಆರ್‌ಸಿಬಿ 3 ವಿಕೆಟ್ ನಷ್ಟಕ್ಕೆ 183 ರನ್ ಸಿಡಿಸಿದೆ. ವಿರಾಟ್ ಕೊಹ್ಲಿ ಸ್ಫೋಟಕ ಸೆಂಚುರಿ ಆರ್‌ಸಿಬಿಯ ಬೃಹತ್ ಮೊತ್ತಕ್ಕೆ ನೆರವಾಯಿತು. ಇದೀಗ ರಾಜಸ್ಥಾನ ರಾಯಲ್ಸ್ ಚೇಸಿಂಗ್ ಮಾಡಲು ರೆಡೆಯಾಗಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್‌ಸಿಬಿಗೆ ಕೊಹ್ಲಿ ಹಾಗೂ ಡುಪ್ಲಸಿಸ್ ಬ್ಯಾಟಿಂಗ್ ನೆರವಾಯಿತು. ಸ್ಫೋಟಕ ಬ್ಯಾಟಿಂಗ್ ಮೂಲಕ ಆರಂಭದಲ್ಲೇ ರಾಜಸ್ಥಾನ ರಾಯಲ್ಸ್‌ಗೆ ಶಾಕ್ ನೀಡಿದರು. ಈ ಸರಣಿಯಲ್ಲಿ ರಾಜಸ್ಥಾನ ರಾಯಲ್ಸ್ ಚೇಸಿಂಗ್‌ನಲ್ಲಿ ಅತ್ಯುತ್ತಮ ತಂಡ ಎನಿಸಕೊಂಡಿದೆ. ಹೀಗಾಗಿ ಆರ್‌ಸಿಬಿ ಗರಿಷ್ಠ ಮೊತ್ತ ಸಿಡಿಸಿ ರಾಜಸ್ಥಾನಕ್ಕೆ ಒತ್ತಡ ಹೇರಲು ಮುಂದಾಗಿದೆ.
ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲಿಸ್ ಮೊದಲ ವಿಕೆಟ್‌ಗೆ 125 ರನ್ ಜೊತೆಯಾಟ ನೀಡಿದರು. ಇದು ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ದಾಖಲಾದ ಆರಂಭಿಕರ ಎರಡನೇ ಗರಿಷ್ಠ ಜೊತೆಯಾಟ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆರ್‌ಸಿಬಿ ಪರ ದಾಖಲಾದ ಆರಂಭಿಕರ ಗರಿಷ್ಠ ಜೊತೆಯಾಟ ದಾಖಲೆ
ವಿರಾಟ್ ಕೊಹ್ಲಿ-ದೇವದತ್ ಪಡಿಕ್ಕಲ್: 181* ರನ್ (2021)
ವಿರಾಟ್ ಕೊಹ್ಲಿ-ಫಾಫ್ ಡುಪ್ಲಸಿಸ್:125 ರನ್ (2024)
ಗ್ರೇಮ್ ಸ್ಮಿತ್ - ಸ್ವಪ್ನಿಲ್ ಅಸ್ನೋಡ್ಕರ್: 109 ರನ್ (2008)
ಡುಪ್ಲೆಸಿಸ್ ವಿಕೆಟ್ ಪತನದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಕಣಕ್ಕಳಿದು ನಿರಾಸೆ ಮೂಡಿಸಿದರು. ಮ್ಯಾಕ್ಸ್‌ವೆಲ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಕೊಹ್ಲಿ ಹೋರಾಟ ಮುಂದುವರಿದಿರೆ, ಮತ್ತೊಂದೆಡೆಯಿಂದ ವಿಕೆಟ್ ಪತನಗೊಂಡಿತು. ಸೌರವ್ ಚವ್ಹಾಣ್ 9 ರನ್ ಸಿಡಿಸಿ ಔಟಾದರು. ಇತ್ತ ಅಬ್ಬರಿಸಿದ ವಿರಾಟ್ ಕೊಹ್ಲಿ ಶತಕ ಸಿಡಿಸಿದರು. ಈ ಐಪಿಎಲ್ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿದ ಸಾಧನೆ ಕೊಹ್ಲಿ ಪಾಲಾಯಿತು. ಜೊತೆಗೆ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ 8ನೇ ಶತಕ ದಾಖಲಿಸಿದರು.
ಆದರೆ 19ನೇ ಓವರ್‌ನಲ್ಲಿ ಆರ್‌ಸಿಬಿ ಕೇವಲ 4 ರನ್ ಮಾತ್ರ ಗಳಿಸಿತು. ಅಂತಿಮ ಓವರ್‌ನಲ್ಲಿ ಕೊಹ್ಲಿ ಸಿಡಿಸಿದ 3 ಬೌಂಡರಿಯಿಂದ ಆರ್‌ಸಿಬಿ 3 ವಿಕೆಟ್ ನಷ್ಟಕ್ಕೆ 183 ರನ್ ಸಿಡಿಸಿತು.