IPL 2024 ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ರೋಚಕ ಹೋರಾಟ, ಆರ್‌ಸಿಬಿಗೆ 177 ರನ್ ಟಾರ್ಗೆಟ್!
ತವರಿನ ಅಭಿಮಾನಿಗಳ ಬೆಂಬಲ, ಹೆಜ್ಜೆ ಹೆಜ್ಜೆಗೂ ಆರ್‌ಸಿಬಿ ಪರ ಘೋಷಣೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರೋಚಕ ಪಂದ್ಯದಲ್ಲಿ ಪಂಜಾಬ್ ತಂಡ 176 ರನ್ ಸಿಡಿಸಿದೆ.
ಬೆಂಗಳೂರು(ಮಾ.25) ಐಪಿಎಲ್ ಟೂರ್ನಿ 2024ರ ಮೊದಲ ಬೆಂಗಳೂರು ಪಂದ್ಯ ರೋಚಕತೆ ಹೆಚ್ಚಿಸಿದೆ. ಅಬ್ಬರಿಸಲು ಮುಂದಾದ ಪಂಜಾಬ್ ಕಿಂಗ್ಸ್ ತಂಡಕ್ಕೆ ಬ್ರೇಕ್ ಹಾಕಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ರನ್ ಟಾರ್ಗೆಟ್ ಪಡೆದಿದೆ. ನಾಯಕ ಶಿಖರ್ ಧವನ್, ಪ್ರಭಸಿಮ್ರನ್ ಸಿಂಗ್, ಜಿತೇಶ್ ಶರ್ಮಾ, ಸ್ಯಾಮ್ ಕುರನ್ ಸೇರಿದಂತೆ ಪಂಜಾಬ್ ಬ್ಯಾಟರ್ ಅಬ್ಬರಿಸುವ ಪ್ರಯತ್ನ ಮಾಡಿದರು. ಆದರೆ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಆರ್‌ಸಿಬಿ ಅಂತಿಮ ಹಂತದಲ್ಲಿ ರನ್ ಬಿಟ್ಟುಕೊಟ್ಟಿತು. ಈ ಮೂಲಕ ಪಂಜಾಬ್ 176 ರನ್ ಸಿಡಿಸಿತು.
ತವರಿನಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ಕಿಂಗ್ಸ್‌ಗೆ ಮೊಹಮ್ಮದ್ ಸಿರಾಜ್ ಆಘಾತ ನೀಡಿದರು. 2 ಬೌಂಂಡರಿ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದ ಜಾನಿ ಬೈರ್‌ಸ್ಟೋ 8 ರನ್ ಸಿಡಿಸಿ ನಿರ್ಗಮಿಸಿದರು. ಆರ್‌ಸಿಬಿ ಮೊದಲ ವಿಕೆಟ್ ಸಂಭ್ರಮದ ಬಳಿಕ ಬೌಲಿಂಗ್ ಕೊಂಚ ಸಡಿಲಗೊಂಡಿತು. ಹೀಗಾಗಿ ಶಿಖರ್ ಧವನ್ ಹಾಗೂ ಪ್ರಭಸಿಮ್ರನ್ ಸಿಂಗ್ ಜೊತೆಯಾಟದಿಂದ ರನ್ ರೇಟ್ ಹೆಚ್ಚಾಯಿತು.
ಪ್ರಭ್‌ಸಿಮ್ರನ್ ಸಿಂಗ್ 25 ರನ್ ಸಿಡಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಲಿಯಾಮ್ ಲಿವಿಂಗ್‌ಸ್ಟೋನ್ 17 ರನ್ ಸಿಡಿಸಿ ಔಟಾದರು. ನಾಯಕ ಶಿಖರ್ ಧವನ್ 37 ಎಸೆತದಲ್ಲಿ 45 ರನ್ ಸಿಡಿಸಿ ಔಟಾದರು. ಧವನ್ ವಿಕೆಟ್ ಪತನದ ಬಳಿಕ ಸ್ಯಾಮ್ ಕುರನ್ ಹಾಗೂ ಜಿತೇಶ್ ಶರ್ಮಾ ಜೊತಯಾಟದಿಂದ ಪಂಜಾಬ್ ಚೇತರಿಸಿಕೊಂಡಿತು.
ಸ್ಯಾಮ್ ಕುರನ್ 23 ರನ್ ಸಿಡಿಸಿ ಔಟಾದರು. ಕುರನ್ ಬೆನ್ನಲ್ಲೇ 27 ರನ್ ಸಿಡಿಸಿದ ಜಿತೇಶ್ ಶರ್ಮಾ ವಿಕೆಟ್ ಪತನಗೊಂಡಿತು. ಶಶಾಂಕ್ ಸಿಂಗ್ 8 ಎಸೆತದಲ್ಲಿ 21 ರನ್ ಸಡಿಸಿ ಅಬ್ಬರಿಸಿದರು. ಇತ್ತ ಹರ್ಪ್ರೀತ್ ಬ್ರಾರ್ 2 ರನ್ ಕಾಣಿಕೆ ನೀಡಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಕಣಕ್ಕಿಳಿದ ತಂಡವನ್ನೇ ಇಂದು ಕಣಕ್ಕಿಳಿಸಲಾಗಿದೆ. ನಾಯಕ ಫಾಫ್ ಡುಪ್ಲೆಸಿಸ್ ತಂಡದಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್, ಅನೂತ್ ರಾವತ್, ಅಲ್ಜಾರಿ ಜೊಸೆಫ್, ಮಯಾಂಕ್ ಡಗಾರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್ ಸ್ಥಾನ ಪಡೆದಿದ್ದಾರೆ.