ವಿರಾಟ್‌ ಕೊಹ್ಲಿ ಬಾರಿಸಿದ 46ನೇ ಅರ್ಧಶತಕ, ಫಾಫ್‌ ಡು ಪ್ಲೆಸಿಸ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಸ್ಫೋಟಕ ಇನ್ನಿಂಗ್ಸ್‌ ನೆರವಿನಿಂದ ಆರ್‌ಸಿಬಿ ತಂಡ ಲಖನೌ ಸೂಪರ್‌ ಜೈಂಟ್ಸ್‌ ತಂಡದ ಗೆಲುವಿಗೆ ದೊಡ್ಡ ಮೊತ್ತದ ಗುರಿ ನೀಡಿದೆ.

ಬೆಂಗಳೂರು (ಏ.10): ಬ್ಯಾಟಿಂಗ್‌ ಸ್ವರ್ಗ ಚಿನ್ನಸ್ವಾಮಿ ಮೈದಾನದಲ್ಲಿ ಮತ್ತೆ ಸೂಪರ್‌ ಸ್ಟಾರ್‌ ವಿರಾಟ್‌ ಕೊಹ್ಲಿಯ ಮಿಂಚಿನ ಬ್ಯಾಟಿಂಗ್‌. ನಾಯಕ ಫಾಫ್‌ ಡು ಪ್ಲೆಸಿಸ್‌ ಅವರ ಸ್ಪೋಟಕ ಬ್ಯಾಟಿಂಗ್‌, ಕೊನೆಯಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಮಂತ್ರಮುಗ್ಧಗೊಳಿಸುವ ಇನ್ನಿಂಗ್ಸ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ 2023ಯ ತನ್ನ ಮೂರನೇ ಪಂದ್ಯದಲ್ಲಿ ಬೃಹತ್‌ ಮೊತ್ತ ದಾಖಲು ಮಾಡಿದೆ. ಲಖನೌ ಸೂಪರ್‌ ಜೈಂಟ್ಸ್‌ ತಂಡದ ಲೆಗ್‌ಸ್ಪಿನ್ನರ್‌ಗಳನ್ನೇ ಗುರಿಯಾಗಿಸಿಕೊಂಡು ಗ್ಲೆನ್‌ ಮ್ಯಾಕ್ಸ್‌ವೆಲ್ ಹಾಗೂ ಫಾಫ್‌ ಡು ಪ್ಲೆಸಿಸ್‌ ಅಬ್ಬರಿಸಿದ್ದರಿಂದ ಆರ್‌ಸಿಬಿ ತಂಡ ಕೊನೇ 60 ಎಸೆತಗಳಲ್ಲಿ 125 ರನ್‌ ಕಲೆಹಾಕಿತು. ಮೊದಲ 10 ಓವರ್‌ಗಳ ಆಟದಲ್ಲಿ ವಿಕೆಟ್‌ ನಷ್ಟವಿಲ್ಲದೆ 87 ರನ್‌ ಬಾರಿಸಿದ್ದ ಆರ್‌ಸಿಬಿ ನಂತರದ ಆಟದಲ್ಲಿ ತನ್ನ ಪ್ರಚಂಡ ಬ್ಯಾಟಿಂಗ್‌ ಶಕ್ತಿಯನ್ನು ಚಿನ್ನಸ್ವಾಮಿ ಮೈದಾನದಲ್ಲಿ ಜಗಜ್ಜಾಹೀರು ಮಾಡಿತು. ಮೊದಲ ವಿಕೆಟ್‌ಗೆ ಫಾಫ್‌ ಡು ಪ್ಲೆಸಿಸ್‌ ಹಾಗೂ ವಿರಾಟ್‌ ಕೊಹ್ಲಿ 69 ಎಸೆತಗಳಲ್ಲಿ 96 ರನ್‌ ಜೊತೆಯಾಟವಾಡಿದರೆ, ನಂತರ ಮ್ಯಾಕ್ಸ್‌ವೆಲ್‌ ಹಾಗೂ ಪ್ಲೆಸಿಸ್‌ ಬರೀ 44 ಎಸೆತಗಳಲ್ಲಿ ಶತಕದ ಜೊತೆಯಾಟವಾಡಿ ಅಬ್ಬರಿಸಿದರು. ಇದರಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 2 ವಿಕೆಟ್‌ಗೆ 212 ರನ್‌ ಕಲೆಹಾಕುವ ಮೂಲಕ ಲಖನೌ ತಂಡದ ಗೆಲುವಿಗೆ ಅಸಾಧ್ಯ ಸವಾಲು ನಿಗದಿ ಮಾಡಿದೆ.

Amul Vs Nandini: ಅಮುಲ್‌ಗೆ ಬಿಟ್ಟಿ ಬಿಲ್ಡಪ್‌ ಕೊಟ್ಟು, ಕೆಎಂಎಫ್‌ನ ಶ್ರೇಷ್ಠತೆ, ಮೌಲ್ಯವನ್ಯಾಕೆ ಕಳೆಯುತ್ತಿದ್ದೀರಿ?

ಚೇಸಿಂಗ್‌ಗೂ ದೊಡ್ಡ ರೀತಿಯಲ್ಲಿ ಸಹಾಯ ಮಾಡುವ ಪಿಚ್‌ನಲ್ಲಿ ಟಾಸ್‌ ಗೆದ್ದ ಲಖನೌ ತಂಡದ ನಾಯಕ ಕೆಎಲ್‌ ರಾಹುಲ್‌ ಬೌಲಿಂಗ್‌ ಆಯ್ದುಕೊಂಡಿದ್ದರು. ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ, ವಿರಾಟ್‌ ಕೊಹ್ಲಿ (61ರನ್‌, 44 ಎಸೆತ, 4 ಬೌಂಡರಿ, 4 ಸಿಕ್ಸರ್‌), ಫಾಫ್‌ ಡು ಪ್ಲೆಸಿಸ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಡಿದ ರಣಚಂಡಿ ಇನ್ನಿಂಗ್ಸ್‌ ಮೂಲಕ ದೊಡ್ಡ ಮೊತ್ತ ದಾಖಲು ಮಾಡಿತು. ಐಪಿಎಲ್‌ನಲ್ಲಿ ತಂಡವೊಂದರ ಮೊದಲ ಮೂರು ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಬಾರಿಸಿದ್ದು ಇದು ಐದನೇ ಬಾರಿಯಾಗಿದ್ದರೆ, ಹಾಲಿ ವರ್ಷದಲ್ಲಿ ಇದು 2ನೇ ಬಾರಿಯಾಗಿದೆ.