ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟ ರವೀಂದ್ರ ಜಡೇಜಾರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದ ವೇಳೆ ಜಡ್ಡು ಹೊಸ ದಾಖಲೆಕ್ರಿಕೆಟ್‌ ದಿಗ್ಗಜರ ಸಾಲಿಗೆ ರವೀಂದ್ರ ಜಡೇಜಾ ಸೇರ್ಪಡೆ

ಚೆನ್ನೈ(ಏ.13): ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ರಾಜಸ್ಥಾನ ರಾಯಲ್ಸ್ ಎದುರು ಬುಧವಾರ ನಡೆದ ಪಂದ್ಯದಲ್ಲಿ ಟಿ20 ಕ್ರಿಕೆಟ್ ವೃತ್ತಿಜೀವನದಲ್ಲಿ 200 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಇಲ್ಲಿನ ಚೆಪಾಕ್‌ ಮೈದಾನದಲ್ಲಿ ನಡೆದ ರಾಯಲ್ಸ್ ಎದುರಿನ ಹೈವೋಲ್ಟೇಜ್ ಪಂದ್ಯದಲ್ಲಿ ಜಡೇಜಾ ಮತ್ತೊಮ್ಮೆ ಶಿಸ್ತುಬದ್ದ ದಾಳಿ ನಡೆಸುವ ಮೂಲಕ ಗಮನ ಸೆಳೆದರು.

ಹೌದು, ರಾಜಸ್ಥಾನ ರಾಯಲ್ಸ್‌ ಎದುರಿನ ಪಂದ್ಯದಲ್ಲಿ ರವೀಂದ್ರ ಜಡೇಜಾ, 4 ಓವರ್ ಬೌಲಿಂಗ್ ಮಾಡಿ ಕೇವಲ 5.20 ಎಕಾನಮಿಯಲ್ಲಿ 21 ರನ್ ನೀಡಿ ಎರಡು ಪ್ರಮುಖ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರವೀಂದ್ರ ಜಡೇಜಾ 6 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರವೀಂದ್ರ ಜಡೇಜಾ, ಸದ್ಯ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ತುಷಾರ್ ದೇಶ್‌ಪಾಂಡೆ(7 ವಿಕೆಟ್‌) ಬಳಿಕ ಗರಿಷ್ಠ ವಿಕೆಟ್ ಕಬಳಿಸಿದ ಎರಡನೇ ಬೌಲರ್‌ ಎನಿಸಿಕೊಂಡಿದ್ದಾರೆ. ಇನ್ನು ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಜಡ್ಡು 5ನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ ರಾಯಲ್ಸ್‌ನ ಯುಜುವೇಂದ್ರ ಚಹಲ್ 10 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಲಖನೌ ಸೂಪರ್‌ ಜೈಂಟ್ಸ್‌ ತಂಡದ ವೇಗಿ ಮಾರ್ಕ್‌ ವುಡ್‌ 9 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಗುಜರಾತ್ ಟೈಟಾನ್ಸ್‌ನ ರಶೀದ್‌ ಖಾನ್ 8 ವಿಕೆಟ್‌ಗಳೊಂದಿಗೆ ಮೂರನೇ ಹಾಗೂ ತುಷಾರ್ ದೇಶ್‌ಪಾಂಡೆ 7 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಇನ್ನು ರವೀಂದ್ರ ಜಡೇಜಾ, ಒಟ್ಟು 296 ಟಿ20 ಪಂದ್ಯಗಳನ್ನಾಡಿ 30.25ರ ಸರಾಸರಿಯಲ್ಲಿ 7.54ರ ಎಕಾನಮಿಯಲ್ಲಿ 200 ವಿಕೆಟ್‌ ಕಬಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 16 ರನ್ ನೀಡಿ 5 ವಿಕೆಟ್ ಕಬಳಿಸಿರುವುದು ರವೀಂದ್ರ ಜಡೇಜಾ ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಎನಿಸಿಕೊಂಡಿದೆ. ರವೀಂದ್ರ ಜಡೇಜಾ, ಭಾರತ ಪರ 64 ಟಿ20 ಪಂದ್ಯಗಳನ್ನಾಡಿ 28.49ರ ಸರಾಸರಿಯಲ್ಲಿ 7.04ರ ಎಕಾನಮಿಯಲ್ಲಿ 51 ವಿಕೆಟ್‌ ಕಬಳಿಸಿದ್ದಾರೆ.

IPL 2023: ಸಿಎಸ್‌ಕೆ ಸೋಲಿಗೆ ಬ್ಯಾಟರ್‌ಗಳೇ ಕಾರಣ: ಕ್ಯಾಪ್ಟನ್ ಕೂಲ್ ಧೋನಿ ಗರಂ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ದಾಖಲೆ ಬಾಂಗ್ಲಾದೇಶದ ಸ್ಪಿನ್ನರ್ ಶಕೀಬ್ ಅಲ್ ಹಸನ್ ಹೆಸರಿನಲ್ಲಿದೆ. ಶಕೀಬ್‌ 136 ವಿಕೆಟ್ ಕಬಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಅನುಭವಿ ವೇಗಿ ಟಿಮ್ ಸೌಥಿ 134 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಆಫ್ಘಾನಿಸ್ತಾನದ ರಶೀದ್ ಖಾನ್‌(129), ನ್ಯೂಜಿಲೆಂಡ್‌ನ ಇಶ್ ಸೋಧಿ(115) ಹಾಗೂ ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ(107) ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಭಾರತ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಕಬಳಿಸಿದ ದಾಖಲೆ(91) ಯುಜುವೇಂದ್ರ ಚಹಲ್ ಹೆಸರಿನಲ್ಲಿದೆ.

ಇನ್ನು 15 ವರ್ಷಗಳ ಸುದೀರ್ಘ ಐಪಿಎಲ್ ವೃತ್ತಜೀವನದಲ್ಲಿ ರವೀಂದ್ರ ಜಡೇಜಾ, ರಾಜಸ್ಥಾನ ರಾಯಲ್ಸ್, ಚೆನ್ನೈ ಸೂಪರ್‌ ಕಿಂಗ್ಸ್‌, ಗುಜರಾತ್ ಲಯನ್ಸ್‌ ಹಾಗೂ ಕೊಚ್ಚಿ ಟಸ್ಕರ್ಸ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೂ ಒಟ್ಟು 214 ಪಂದ್ಯಗಳನ್ನಾಡಿರುವ ಜಡ್ಡು 30.05ರ ಸರಾಸರಿಯಲ್ಲಿ 138 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಡ್ವೇನ್ ಬ್ರಾವೋ, ಲಸಿತ್ ಮಾಲಿಂಗ ಅವರ ಸಾಲಿಗೆ ಎಡಗೈ ಸ್ಪಿನ್ನರ್ ಸೇರ್ಪಡೆಯಾಗಿದ್ದಾರೆ. 

ಇನ್ನು ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ದಾಖಲೆ ವೆಸ್ಟ್‌ ಇಂಡೀಸ್‌ ಮಾಜಿ ವೇಗಿ ಡ್ವೇನ್ ಬ್ರಾವೋ ಹೆಸರಿನಲ್ಲಿದೆ. ಬ್ರಾವೋ(183 ವಿಕೆಟ್‌) ಮೊದಲ ಸ್ಥಾನದಲ್ಲಿದ್ದರೆ, ಯುಜುವೇಂದ್ರ ಚಹಲ್(176), ಲಸಿತ್ ಮಾಲಿಂಗ(170), ಅಮಿತ್ ಮಿಶ್ರಾ(169) ಹಾಗೂ ರವಿಚಂದ್ರನ್ ಅಶ್ವಿನ್ 163 ವಿಕೆಟ್ ಕಬಳಿಸುವ ಮೂಲಕ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.