ಗುಜರಾತ್‌ ಟೈಟಾನ್ಸ್‌ ತಂಡದ ಶಿಸ್ತಿನ ದಾಳಿಯ ಮುಂದೆ ಪರದಾಡಿದ ಪಂಜಾಬ್‌ ಕಿಂಗ್ಸ್‌ ತಂಡ ಐಪಿಎಲ್‌ನ ತನ್ನ 4ನೇ ಪಂದ್ಯದಲ್ಲಿ ಸಾಧಾರಣ ಮೊತ್ತ ಕಲೆಹಾಕಿದೆ. ಮೊಹಾಲಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ, ಗುಜರಾತ್‌ ಟೈಟಾನ್ಸ್‌ ಗೆಲುವಿಗೆ 154 ರನ್‌ ಗುರಿ ನೀಡಿದೆ. 

ಮೊಹಾಲಿ (ಏ.13): ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡ ಐಪಿಎಲ್‌ 2023ರ ಗುರುವಾರದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟುಹಾಕಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಆರಂಭದಿಂದಲೂ ಗುಜರಾತ್‌ ತಂಡದ ಬೌಲರ್‌ಗಳ ಪ್ರಹಾರ ನೀಡಲು ಆರಂಭಿಸಿದರು. ಇನ್ನಿಂಗ್ಸ್‌ನ 2ನೇ ಎಸೆತದಲ್ಲಿಯೇ ಆರಂಭಿಕ ಪ್ರಭ್‌ಸಿಮ್ರನ್‌ ಸಿಂಗ್‌ ವಿಕೆಟ್‌ ಕಳೆದುಕೊಂಡ ಪಂಜಾಬ್‌ ತಂಡಕ್ಕೆ ನಂತರದ ಇಡೀ ಇನ್ನಿಂಗ್ಸ್‌ ಪೂರ್ತಿ ಎಲ್ಲೂ ಅಬ್ಬರದ ಆಟವಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಪಂಜಾಬ್‌ ಕಿಂಗ್ಸ್‌ 8 ವಿಕೆಟ್‌ಗೆ 153 ರನ್‌ ಬಾರಿಸಿದ್ದು, ಗುಜರಾತ್‌ ಟೈಟಾನ್ಸ್‌ ಗೆಲುವಿಗೆ 154 ರನ್‌ ಸವಾಲು ನಿಗದಿ ಮಾಡಿದೆ. ಪಂಜಾಬ್ ಕಿಂಗ್ಸ್‌ ಪರವಾಗಿ ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ಶಾರ್ಟ್‌, ಭಾನುಕ ರಾಜಪಕ್ಷ, ಜಿತೇಶ್‌ ಶರ್ಮ, ಸ್ಯಾಮ್‌ ಕರ್ರನ್‌ ಹಾಗೂ ಶಾರುಖ್‌ ಖಾನ್‌ ಅವರ ಉಪಯುಕ್ತ ಕಾಣಿಕೆಗಳು ತಂಡದ ಮೊತ್ತ 150 ರನ್‌ ಗಡಿ ದಾಟಲು ನೆರವಾಯಿತು. ಅದರಲ್ಲೂ ಶಾರುಖ್‌ ಖಾನ್‌ ಕೊನೆಯ ಹಂತದಲ್ಲಿ 9 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 1 ಬೌಂಡರಿಯೊಂದಿಗೆ ಬಾರಿಸಿದ 22 ರನ್‌ಗಳು ಪಂಜಾಬ್‌ ತಂಡದ ಪಾಲಿಗೆ ಬಹಳ ಉಪಯುಕ್ತ ಎನಿಸಿದವು. ಪಂಜಾಬ್‌ ತಂಡ ಇಡೀ ಇನ್ನಿಂಗ್ಸ್‌ನಲ್ಲಿ 56 ಡಾಟ್‌ ಬಾಲ್‌ಗಳನ್ನು ಆಡಿತು.