ಅರ್ಜುನ್ ತೆಂಡೂಲ್ಕರ್ ಐಪಿಎಲ್ ಟೂರ್ನಿಯಲ್ಲಿ ಮೊದಲ ವಿಕೆಟ್ ಸಂಭ್ರಮ ಆಚರಿಸಿದ್ದಾರೆ. ಇತ್ತ ಮುಂಬೈ ಇಂಡಿಯನ್ಸ್ ಇದೇ ವಿಕೆಟ್ ಸಂಭ್ರಮದ ಜೊತೆ ಗೆಲುವಿನ ಸಂಭ್ರಮ ಆಚರಿಸಿದೆ.  ಹೈದರಾಬಾದ್ ತಂಡವನ್ನು ಮುಂಬೈ 14 ರನ್‌ಗಳಿಂದ ಮಣಿಸಿದೆ.  

ಹೈದರಾಬಾದ್(ಏ.18): ಐಪಿಎಲ್ 2023 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಆರಂಭಿಕ 2 ಪಂದ್ಯ ಸೋತು ನಿರಾಸೆ ಅನುಭವಿಸಿದ್ದ ಮುಂಬೈ ಇಂಡಿಯನ್ಸ್ ಬಳಿಕ ಸತತವಾಗಿ ಪಂದ್ಯ ಗೆದ್ದುಕೊಳ್ಳುತ್ತಿದೆ. ಇದೀಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ 14 ರನ್ ಗೆಲುವು ದಾಖಲಿಸಿದೆ. ಅರ್ಜುನ್ ತೆಂಡುಲ್ಕರ್ ಎಸೆತದಲ್ಲಿ ಭುವನೇಶ್ವರ್ ಕುಮಾರ್ ವಿಕೆಟ್ ಕೈಚೆಲ್ಲಿದರು. ಇದರೊಂದಿಗೆ ಹೈದರಾಬಾದ್ 178 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಅಂಕಪಟ್ಟಿಯಲ್ಲಿ 8ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಜಿಗಿದಿದೆ.

193 ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ಆರಂಭದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ವಿಕೆಟ್ ಪತನಗೊಂಡಿದೆ. ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ ಬ್ರೂಕ್ ಈ ಪಂದ್ಯದಲ್ಲಿ 9 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಮಾಯಾಂಕ್ ಅಗರ್ವಾಲ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಇತ್ತ ರಾಹುಲ್ ತ್ರಿಪಾಠಿ ಅಬ್ಬರಿಸಲಿಲ್ಲ. ತ್ರಿಪಾಠಿ ಕೇವಲ 7 ರನ್ ಸಿಡಿಸಿ ಔಟಾದರು.

ನಾಯಕ ಆ್ಯಡಿನ್ ಮರ್ಕ್ರಮ್ ಹಾಗೂ ಮಯಾಂಗ್ ಅಗರ್ವಾಲ್ ಜೊತೆಯಾಟದಿಂದ ಹೈದರಾಬಾದ್ ಚೇತರಿಸಿಕೊಂಡಿತು. ಆದರೆ ಮರ್ಕ್ರಮ್ 22 ರನ್ ಸಿಡಿಸಿ ಔಟಾದರು. ಇತ್ತ ಅಭಿಷೇಕ್ ಶರ್ಮಾ ಕೇವಲ 1 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಹೆನ್ರಿಚ್ ಕಾಲ್ಸೀನ್ ಹಾಗೂ ಅಗರ್ವಾಲ್ ಹೋರಾಟದಿಂದ ಸನ್‌‌ರೈಸರ್ಸ್ ಹೈದರಾಬಾದ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಬೌಂಡರಿ ಸಿಕ್ಸರ್ ಮೂಲಕ ಅಬ್ಬರಿಸಿ ಕಾಲ್ಸೀನ್ ಕೇವಲ 16 ಎಸೆತದಲ್ಲಿ 36 ರನ್ ಸಿಡಿಸಿ ಔಟಾದರು. 

ಮಯಾಂಕ್ ಅಗರ್ವಾಲ್ 48 ರನ್ ಸಿಡಿಸಿ ಔಟಾದರು. ಮಾರ್ಕೋ ಜಾನ್ಸೀನ್ 13 ರನ್ ಸಿಡಿಸಿದರೆ, ವಾಶಿಂಗ್ಟನ್ ಸುಂದರ್ 10 ರನ್ ಕಾಣಿಕೆ ನೀಡಿದರು. ಅಬ್ದುಲ್ ಸಮಾದ್ ಮೇಲೆ ಒತ್ತಡ ಹೆಚ್ಚಾಯಿತು. ಸನ್‌ರೈಸರ್ಸ್ ಗೆಲುವಿಗೆ ಅಂತಿಮ 10 ಎಸೆತ 22 ರನ್ ಅವಶ್ಯಕತೆ ಇತ್ತು. ಸಮಾದ್ 9 ರನ್ ಸಿಡಿಸಿ ಔಟಾದರು. ಇತ್ತ ಭುವನೇಶ್ವರ್ ಕುಮಾರ್ ವಿಕೆಟ್ ಕಬಳಿಸಿದ ಅರ್ಜುನ್ ತೆಂಡುಲ್ಕರ್ ಹೈದರಾಬಾದ್ ತಂಡವನ್ನು ಆಲೌಟ್ ಮಾಡಿದರು. ಹೈದರಾಬಾದ್ 19.5 ಓವರ್‌ಗಳಲ್ಲಿ 178 ರನ್ ಸಿಡಿಸಿ ಆಲೌಟ್ ಆಯಿತು. ಮುಂಬೈ 14 ರನ್ ಗೆಲುವು ದಾಖಲಿಸಿತು. 

ಮುಂಬೈ ಇನ್ನಿಂಗ್ಸ್: ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 192 ರನ್ ಸಿಡಿಸಿತು.