ಬೆಂಗಳೂರಿನಲ್ಲಿಂದು ಲಖನೌ-ಆರ್‌ಸಿಬಿ ನಡುವೆ ಬಿಗ್‌ ಫೈಟ್‌ಕೆ ಎಲ್ ರಾಹುಲ್ ಭೀತಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರುರಾಹುಲ್ ಅಬ್ಬರಿಸಬಹುದು ಎಚ್ಚರಿಕೆಯಿಂದಿರಿ ಎಂದ ರವಿಶಾಸ್ತ್ರಿ

ಬೆಂಗಳೂರು(ಏ.10): 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ 15ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್‌ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಮೈದಾನ ಆತಿಥ್ಯವನ್ನು ವಹಿಸಿದೆ. ಆರ್‌ಸಿಬಿ ಎದುರು ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್ ದೊಡ್ಡ ಇನಿಂಗ್ಸ್ ಆಡುವ ಸಾಧ್ಯತೆಯಿದ್ದು, ಎಚ್ಚರಿಕೆಯಿಂದಿರಿ ಎಂದು ಬೆಂಗಳೂರು ತಂಡಕ್ಕೆ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಕಿವಿಮಾತು ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್‌ ತಂಡಗಳ ನಡುವಿನ ಪಂದ್ಯದ ಬಗ್ಗೆ ಮಾತನಾಡಿದ ರವಿಶಾಸ್ತ್ರಿ, "ನನ್ನ ಪ್ರಕಾರ ಕೆ ಎಲ್ ರಾಹುಲ್, ಆರ್‌ಸಿಬಿ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ದೊಡ್ಡ ಇನಿಂಗ್ಸ್‌ ಆಡುವ ಸಾಧ್ಯತೆಯಿದೆ. ತಂಡದಲ್ಲಿ ಕೈಲ್ ಮೇಯರ್ಸ್‌, ಮಾರ್ಕಸ್ ಸ್ಟೋನಿಸ್, ಹಾಗೂ ಕ್ವಿಂಟನ್ ಡಿ ಕಾಕ್ ಅವರಂತಹ ಬ್ಯಾಟರ್‌ಗಳಿರುವುದರಿಂದ ಕೆ ಎಲ್ ರಾಹುಲ್ ನಿರ್ಭಯವಾಗಿ ಬ್ಯಾಟ್ ಬೀಸುವ ಸಾಧ್ಯತೆಯಿದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೆ ಎಲ್ ರಾಹುಲ್ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಮೊದಲ ಮೂರು ಪಂದ್ಯಗಳಲ್ಲಿ ಲಖನೌ ತಂಡದ ನಾಯಕ ಕೆ ಎಲ್ ರಾಹುಲ್ ಕೇವಲ 63 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನೊಂದೆಡೆ ಮತ್ತೊಂದು ತುದಿಯಲ್ಲಿ ಕೈಲ್ ಮೇಯರ್ಸ್‌ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಲಖನೌ ತಂಡವು ಬೃಹತ್ ಮೊತ್ತ ಕಲೆಹಾಕಲು ನೆರವಾಗುತ್ತಿದ್ದಾರೆ. ಮೇಯರ್ಸ್‌ ಕಳೆದೆರಡು ಪಂದ್ಯಗಳಲ್ಲಿ ಸತತ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

IPL 2023: ಲಖನೌ ಸೂಪರ್‌ಜೈಂಟ್ಸ್‌ ಸವಾಲಿಗೆ ಸಜ್ಜಾದ ಆರ್‌ಸಿಬಿ

" ನಾನು ಕೆ ಎಲ್ ರಾಹುಲ್ ಬ್ಯಾಟಿಂಗ್ ಮಾಡುವುದನ್ನು ಎಂಜಾಯ್ ಮಾಡುತ್ತೇನೆ. ಅವರೊಬ್ಬ ವಿದ್ವಂಸಕ ಬ್ಯಾಟರ್‌ ಆಗಿದ್ದು, ಒಳ್ಳೆಯ ಬ್ಯಾಟಿಂಗ್ ಕಂಡೀಷನ್‌ ಇದ್ದರೆ, ಐದರಿಂದ ಆರು ಓವರ್‌ಗಳಲ್ಲಿ ರಾಹುಲ್‌ ಒಂದೊಳ್ಳೆಯ ಭದ್ರಬುನಾದಿ ಹಾಕಿ ಕೊಡುವ ಕ್ಷಮತೆ ಹೊಂದಿದ್ದಾರೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ರಾಹುಲ್ ಆರ್‌ಸಿಬಿ ಎದುರು ಅಬ್ಬರಿಸಬಹುದು ಎಂದು ರವಿಶಾಸ್ತ್ರಿ ಹೇಳಲು ಕಾರಣವೂ ಇದೆ. ಹೌದು, ಆರ್‌ಸಿಬಿ ಎದುರು ಕನ್ನಡಿಗ ಕೆ ಎಲ್ ರಾಹುಲ್‌, ಅದ್ಬುತ ಟ್ರ್ಯಾಕ್ ರೆಕಾರ್ಡ್‌ ಹೊಂದಿದ್ದಾರೆ. ಆರ್‌ಸಿಬಿ ಎದುರು 13 ಪಂದ್ಯಗಳನ್ನಾಡಿರುವ ಕೆ ಎಲ್ ರಾಹುಲ್, 35 ಸಿಕ್ಸರ್ ಹಾಗೂ 45 ಬೌಂಡರಿ ಸಹಿತ 147.7ರ ಸ್ಟ್ರೈಕ್‌ರೇಟ್‌ನಲ್ಲಿ 610 ರನ್ ಸಿಡಿಸಿದ್ದಾರೆ.

ಒಂದು ಕಡೆ ಲಖನೌ ಸೂಪರ್ ಜೈಂಟ್ಸ್‌ ತಂಡವು ಟೂರ್ನಿಯಲ್ಲಿ ಮೂರನೇ ಗೆಲುವಿನ ನಿರೀಕ್ಷೆಯಲ್ಲಿದ್ದರೇ, ಫಾಫ್‌ ಡು ಪ್ಲೆಸಿಸ್‌ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ.