ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ರೋಚಕ ಗೆಲುವು ಕಂಡ ಸಂಭ್ರಮದಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಇಂದು ತವರಿನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋಲು ಕಂಡಿರುವ ಸನ್‌ರೈಸರ್ಸ್‌ ಕೂಡ ಗೆಲುವಿನ ಇರಾದೆಯಲ್ಲಿದೆ. 

ಚೆನ್ನೈ (ಏ.21): ಆರ್‌ಸಿಬಿ ವಿರುದ್ಧ ಕಳೆದ ಪಂದ್ಯದಲ್ಲಿ ಸೋಲು ಹಾದಿಯಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್‌, ಕೊನೇ ಹಂತದಲ್ಲಿ ಭರ್ಜರಿಯಾಗಿ ತಿರುಗೇಟು ನೀಡುವ ಮೂಲಕ 8 ರನ್‌ಗಳಿಂದ ಗೆಲುವು ಸಾಧಿಸಿದ ಸಂಭ್ರಮದಲ್ಲಿದೆ. ಇದೇ ಆಟವನ್ನು ಮುಂದುವರಿಸುವ ಗುರಿಯಲ್ಲಿರುವ ಎಂಎಸ್‌ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್‌ ಶುಕ್ರವಾರದ ಮಹತ್ವದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸಲಿದೆ, ಚೆಪಾಕ್‌ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟಾಸ್‌ ಗೆಲುವು ಸಾಧಿಸಿದ ಚೆನ್ನೈ ತಂಡದ ನಾಯಕ ಎಂಎಸ್‌ ಧೋನಿ ಮೊದಲು ಬೌಲಿಂಗ್‌ ಮಾಡುವ ತೀರ್ಮಾನ ಮಾಡಿದ್ದಾರೆ. ಸನ್‌ರೈಸರ್ಸ್‌ ಮೂರನೇ ಜಯದ ನಿರೀಕ್ಷೆಯಲ್ಲಿದ್ದರೆ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ನಾಲ್ಕನೇ ಗೆಲುವಿನ ಗುರಿಯಲ್ಲಿದೆ. ಚೆನ್ನೈ ತಂಡ ಚೆಪಾಕ್‌ ಮೈದಾನದಲ್ಲಿ ಆಡಿದ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೋಲು ಕಂಡಿತ್ತು. ಸಾಮಾನ್ಯವಾಗಿ ಚೆನ್ನೈ ತಂಡ ತವರಿನ ಮೈದಾನದಲ್ಲಿ ಸೋಲು ಕಾಣುವುದು ಬಹಳ ಕಡಿಮೆ. ಅಂಕಪಟ್ಟಿಯಲ್ಲಿ ಸನ್‌ರೈಸರ್ಸ್‌ ತಂಡ 9ನೇ ಸ್ಥಾನದಲ್ಲಿದ್ದರೆ, ಚೆನ್ನೈ ಮೂರನೇ ಸ್ಥಾನದಲ್ಲಿದೆ. 

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಶಿವಂ ದುಬೆ, ಅಂಬಟಿ ರಾಯುಡು, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ(ವಿ.ಕೀ), ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಮತೀಶ ಪಥಿರಣ.

ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್(ನಾಯಕ), ಹೆನ್ರಿಚ್ ಕ್ಲಾಸೆನ್(ವಿ.ಕೀ), ಅಭಿಷೇಕ್ ಶರ್ಮಾ, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಉಮ್ರಾನ್ ಮಲಿಕ್