* ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆದ್ದು ಬೀಗಿದ ಪಂಜಾಬ್ ಕಿಂಗ್ಸ್* ಸಿಎಸ್‌ಕೆ ಎದುರು ಫೇಸ್ ಶೀಲ್ಡ್ ಧರಿಸಿ ಕಣಕ್ಕಿಳಿದ ರಿಷಿ ಧವನ್* ರಿಷಿ ಧವನ್ ಪಂಜಾಬ್ ಕಿಂಗ್ಸ್ ತಂಡದ ಆಲ್ರೌಂಡರ್

ಮುಂಬೈ(ಏ.26): ಪಂಜಾಬ್ ಕಿಂಗ್ಸ್ ತಂಡದ ಆಲ್ರೌಂಡರ್‌ ರಿಷಿ ಧವನ್ (Rishi Dhawan), ಚೆನ್ನೈ ಸೂಪರ್‌ ಕಿಂಗ್ಸ್ (Chennai Super Kings) ತಂಡದ ವಿರುದ್ದ ಆಕರ್ಷಕ ಬೌಲಿಂಗ್ ಮಾಡಿ ಗಮನ ಸೆಳೆದರು. ದೇಸಿ ಕ್ರಿಕೆಟ್‌ನಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ತಂಡದ ನಾಯಕರಾಗಿರುವ ರಿಷಿ ಧವನ್ , ಸಿಎಸ್‌ಕೆ ಎದುರಿನ ಪಂದ್ಯದಲ್ಲಿ ವಿನೂತನವಾದ ಫೇಸ್ ಶೀಲ್ಡ್‌ ಧರಿಸಿ ಮೈದಾನಕ್ಕಿಳಿಯುವ ಮೂಲಕ ಗಮನ ಸೆಳೆದರು. ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ರಿಷಿ ಧವನ್ ವಿಭಿನ್ನವಾಗಿ ಕಾಣಿಸಿಕೊಂಡರು. ರಿಷಿ ಧವನ್ ಫೇಸ್ ಶೀಲ್ಡ್ ಧರಿಸಿ ಕಣಕ್ಕಿಳಿದಿದ್ದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಹಾನಿಯಿದೆ.

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 38ನೇ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡದ ಆಲ್ರೌಂಡರ್‌ ರಿಷಿ ಧವನ್ ತಮ್ಮ ಬೌಲಿಂಗ್ ಪ್ರದರ್ಶನದ ಜತೆಗೆ ಫೇಸ್ ಶೀಲ್ಡ್‌ ಮೂಲಕವೂ ಗಮನ ಸೆಳೆದರು. ಐಪಿಎಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಆಟಗಾರನೊಬ್ಬ ವಿನೂತನವಾಗಿ ಫೇಸ್ ಶೀಲ್ಡ್ ಧರಿಸಿ ಕಣಕ್ಕಿಳಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ರಿಷಿ ಧವನ್ ಮುಖ ಕವಚ(ಫೇಸ್ ಶೀಲ್ಡ್‌) ಹಾಕಿದ್ದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಹಾನಿಯಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ವಿಜಯ್ ಹಜಾರೆ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ರಿಷಿ ಧವನ್ ತಮ್ಮ ಅಮೋಘ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಹಿಮಾಚಲ ಪ್ರದೇಶ ತಂಡವು ಚೊಚ್ಚಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಇದರ ಬೆನ್ನಲ್ಲೇ ಐಪಿಎಲ್ ಆಟಗಾರರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು 55 ಲಕ್ಷ ರುಪಾಯಿ ನೀಡಿ ರಿಷಿ ಧವನ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು. 

Scroll to load tweet…

IPL 2022 ಫಿನಿಶರ್ ಧೋನಿಗೆ ಚಮಕ್ ನೀಡಿದ ಆರ್ಶ್ ದೀಪ್, ಪಂಜಾಬ್ ಗೆ ಸೂಪರ್ ಗೆಲುವು!

ಆದರೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ನಡೆದ ರಣಜಿ ಟ್ರೋಫಿ ಟೂರ್ನಿಯ ಎರಡನೇ ಸುತ್ತಿನ ಪಂದ್ಯಾವಳಿಯ ವೇಳೆ ರಿಷಿ ಧವನ್‌ಗೆ ಚೆಂಡೊಂದು ಮುಖಕ್ಕೆ ಬಲವಾಗಿ ಅಪ್ಪಳಿಸಿತ್ತು. ಹೀಗಾಗಿ ರಿಷಿ ಧವನ್‌ ಮೂಗಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಪರಿಣಾಮ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಮೊದಲ ನಾಲ್ಕು ಪಂದ್ಯಗಳಿಗೆ ಆಯ್ಕೆಗೆ ಅಲಭ್ಯರಾಗಿದ್ದರು. ಇದೀಗ ಮೂಗಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ರಿಷಿ ಧವನ್ ಫೇಸ್ ಶೀಲ್ಡ್ ಧರಿಸಿದ್ದಾರೆ. 

ಸಿಎಸ್‌ಕೆ ಎದುರಿನ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ನಾನು ನಾಲ್ಕು ವರ್ಷಗಳ ಬಳಿಕ ಐಪಿಎಲ್‌ಗೆ ಕಮ್‌ಬ್ಯಾಕ್ ಮಾಡಿದ್ದೇನೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ನಾನು ಗಾಯಗೊಂಡಿದ್ದು ಸಾಕಷ್ಟು ಬೇಸರವನ್ನು ಮೂಡಿಸಿತ್ತು. ನಾನು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರಿಂದಾಗಿ ಐಪಿಎಲ್‌ ಆರಂಭಿಕ ನಾಲ್ಕು ಪಂದ್ಯಗಳಿಂದ ಹೊರಗುಳಿಯಬೇಕಾಗಿ ಬಂದಿತು. ಆದರೆ ನಾನೀಗ ಸಂಪೂರ್ಣ ಫಿಟ್ ಆಗಿದ್ದು, ಆಯ್ಕೆಗೆ ಲಭ್ಯರಾಗಿದ್ದೇನೆ. ಇದಕ್ಕಾಗಿ ಕಠಿಣ ಅಭ್ಯಾಸ ಮಾಡುತ್ತಿದ್ದು, ಬಲಿಷ್ಠವಾಗಿ ಐಪಿಎಲ್‌ಗೆ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದೇನೆ ಎಂದು ರಿಷಿ ಧವನ್ ಹೇಳಿದ್ದರು.

Scroll to load tweet…

2016ರ ಬಳಿಕ ಮೊದಲ ಪಂದ್ಯವನ್ನಾಡಿದ ರಿಷಿ ಧವನ್: ರಿಷಿ ಧವನ್ 2016ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಐದು ಆವೃತ್ತಿಯ ಬಳಿಕ ಮತ್ತೊಮ್ಮೆ ಐಪಿಎಲ್‌ಗೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಐಪಿಎಲ್‌ಗೆ ಕಣಕ್ಕಿಳಿದ ರಿಷಿ ಧವನ್ 4 ಓವರ್ ಬೌಲಿಂಗ್ ಮಾಡಿ 39 ರನ್ ನೀಡಿ 2 ಪ್ರಮುಖ ವಿಕೆಟ್ ಕಬಳಿಸುವ ಮೂಲಕ ಪಂಜಾಬ್ ಕಿಂಗ್ಸ್ ರೋಚಕ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.