* ಸೂಪರ್ ಸಂಡೆಯ ಎರಡನೇ ಪಂದ್ಯದಲ್ಲಿ ಅರ್‌ಸಿಬಿ-ಪಂಜಾಜ್ ಫೈಟ್* ಹೈವೋಲ್ಟೇಜ್ ಪಂದ್ಯಕ್ಕೆ ಡಿವೈ ಪಾಟೀಲ್ ಮೈದಾನ ಆತಿಥ್ಯ* ಗೆಲುವಿನ ಖಾತೆ ತೆರೆಯಲು ಸಜ್ಜಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಬೆಂಗಳೂರು(ಮಾ.27): 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯ ಮೂರನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಪಂಜಾಬ್ ಕಿಂಗ್ಸ್‌ (Punjab Kings) ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಎರಡು ಬಲಾಢ್ಯ ತಂಡಗಳ ನಡುವಿನ ಕಾದಾಟಕ್ಕೆ ನವಿ ಮುಂಬೈನ ಡಿವೈ ಪಾಟೀಲ್ ಮೈದಾನ ಆತಿಥ್ಯವನ್ನು ವಹಿಸಿದೆ.

ಉಭಯ ತಂಡಗಳು ಇದುವರೆಗೂ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಲು ಸಾಧ್ಯವಾಗಿಲ್ಲ. ಚೊಚ್ಚಲ ಆವೃತ್ತಿಯಿಂದಲೇ ಐಪಿಎಲ್‌ ಟೂರ್ನಿಯಲ್ಲಿ ಈ ಎರಡು ತಂಡಗಳು ಪಾಲ್ಗೊಳ್ಳುತ್ತಿವೆಯಾದರೂ, ಸತತ 14 ವರ್ಷಗಳಿಂದ ಪ್ರಶಸ್ತಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. ಹೀಗಾಗಿ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಉಭಯ ತಂಡಗಳು ಹೊಸ ಹುರುಪಿನೊಂದಿಗೆ ಸಜ್ಜಾಗಿದೆ. ಉಭಯ ತಂಡಗಳು ಈ ಬಾರಿ ಹೊಸ ನಾಯಕನೊಂದಿಗೆ ಐಪಿಎಲ್‌ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿವೆ. ಪಂಜಾಬ್ ಕಿಂಗ್ಸ್‌ ತಂಡವನ್ನು ಕನ್ನಡಿಗ ಮಯಾಂಕ್ ಅಗರ್‌ವಾಲ್ (Mayank Agarwal) ಮುನ್ನಡೆಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕನಾಗಿ ಫಾಫ್ ಡು ಪ್ಲೆಸಿಸ್‌(Faf du Plessis) ಮುನ್ನಡೆಸಲಿದ್ದಾರೆ.

15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಎಬಿ ಡಿವಿಲಿಯರ್ಸ್‌ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದರಿಂದ ಆರ್‌ಸಿಬಿ ಫ್ರಾಂಚೈಸಿಯು ಐಪಿಎಲ್ ಆಟಗಾರರ ಹರಾಜಿನಲ್ಲಿ ಸಾಕಷ್ಟು ಅಳೆದು-ತೂಗಿ ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. 

Scroll to load tweet…

ಪಿಚ್ ರಿಪೋರ್ಟ್‌: 

ನವಿ ಮುಂಬೈನಲ್ಲಿರುವ ಡಿವೈ ಪಾಟೀಲ್ ಮೈದಾನವು ಬ್ಯಾಟರ್ ಹಾಗೂ ಬೌಲರ್‌ಗಳಿಗೆ ಸಮಾನವಾಗಿ ನೆರವಾಗಬಲ್ಲ ಸ್ಪರ್ಧಾತ್ಮಕ ಪಿಚ್ ನಿರೀಕ್ಷಿಸಲಾಗಿದೆ. ಇಲ್ಲಿಯವರೆಗೆ ಈ ಮೈದಾನದಲ್ಲಿ ಆಡಿರುವ ಎಲ್ಲಾ ಪಂದ್ಯಗಳು ಸಾಕಷ್ಟು ರೋಚಕತೆಗೆ ಸಾಕ್ಷಿಯಾಗಿವೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಕೂಡಾ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ. ಟಾಸ್ ಗೆದ್ದ ನಾಯಕ ಯಾವುದೇ ಅಳುಕಿಲ್ಲದೇ ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು. 

IPL 2022: ಕಪ್ ಗೆಲ್ಲುವ ಕನಸಿನೊಂದಿಗೆ ಆರ್‌ಸಿಬಿ ಕಣಕ್ಕೆ..!

ಆರ್‌ಸಿಬಿ ಗೆಲ್ಲುವ ಫೇವರೇಟ್‌: ಎರಡೂ ತಂಡಗಳು ಬಲಿಷ್ಠವಾಗಿ ಗುರುತಿಸಿಕೊಂಡಿದ್ದರೂ ಸಹಾ, ಅನನುಭವಿ ನಾಯಕ ಮಯಾಂಕ್ ಅಗರ್‌ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್‌ ಎದುರು ಆರ್‌ಸಿಬಿ ಗೆಲ್ಲುವ ಸಾಧ್ಯತೆ ಹೆಚ್ಚು. ಆರ್‌ಸಿಬಿ ತಂಡವು, ಪಂಜಾಬ್‌ಗೆ ಹೋಲಿಸಿದರೆ, ಬ್ಯಾಟಿಂಗ್, ಬೌಲಿಂಗ್ ಹಾಗೂ ಆಲ್ರೌಂಡ್ ವಿಭಾಗದಲ್ಲಿ ಸಾಕಷ್ಟು ಬಲಿಷ್ಠವಾಗಿದೆ. ಹೀಗಾಗಿ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಗೆಲುವ ಸಾಧಿಸುವ ಸಾಧ್ಯತೆ ಹೆಚ್ಚು.

ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್‌ ತಂಡಗಳು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಪಂಜಾಬ್ ತಂಡವು ಕೊಂಚ ಮೇಲುಗೈ ಸಾಧಿಸಿದೆ. 28 ಪಂದ್ಯಗಳ ಪೈಕಿ ಪಂಜಾಬ್ ಕಿಂಗ್ಸ್ ತಂಡವು 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಆರ್‌ಸಿಬಿ ತಂಡವು 13 ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿದೆ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ಅನುಜ್‌ ರಾವತ್‌, ವಿರಾಟ್‌ ಕೊಹ್ಲಿ, ಮಹಿಪಾಲ್‌ ಲೊಮ್ರಾರ್‌, ರುಥರ್‌ಫೋರ್ಡ್‌, ದಿನೇಶ್ ಕಾರ್ತಿಕ್‌, ವನಿಂದು ಹಸರಂಗ, ಡೇವಿಡ್‌ ವಿಲ್ಲಿ, ಹರ್ಷಲ್ ಪಟೇಲ್‌‌, ಶಾಬಾಜ್ ಅಹಮದ್‌, ಮೊಹಮ್ಮದ್ ಸಿರಾಜ್‌.

ಪಂಜಾಬ್‌ ಕಿಂಗ್ಸ್: ಶಿಖರ್ ಧವನ್‌, ಮಯಾಂಕ್ ಅಗರ್‌ವಾಲ್‌(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್‌, ಭನುಕ ರಾಜಪಕ್ಸ, ಶಾರುಖ್‌ ಖಾನ್‌, ಜಿತೇಶ್‌ ಶರ್ಮಾ, ಒಡೆಯನ್‌ ಸ್ಮಿತ್‌, ಸಂದೀಪ್ ಶರ್ಮಾ‌, ನೇಥನ್ ಎಲ್ಲೀಸ್‌, ರಾಹುಲ್‌ ಚಹರ್‌, ಅಶ್‌ರ್‍ದೀಪ್ ಸಿಂಗ್‌.

ಸ್ಥಳ: ನವಿ ಮುಂಬೈ ಡಿ.ವೈ.ಪಾಟೀಲ್‌ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್