* ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕಿಂದು ಡೆಲ್ಲಿ ಕ್ಯಾಪಿಟಲ್ಸ್ ಸವಾಲು* ಎರಡೂ ತಂಡಗಳಿಗೂ ಇಂದಿನ ಪಂದ್ಯ ಸಾಕಷ್ಟು ಮಹತ್ವದ್ದಾಗಿದೆ* 9 ವರ್ಷಗಳ ಬಳಿಕ ಸನ್‌ರೈಸರ್ಸ್ ವಿರುದ್ದ ಕಣಕ್ಕಿಳಿಯಲು ಸಜ್ಜಾದ ಡೇವಿಡ್ ವಾರ್ನರ್

ಮುಂಬೈ(ಮೇ.05): ಐಪಿಎಲ್‌ 15ನೇ ಆವೃತ್ತಿಯ (Indian Premier League) ಪ್ಲೇ-ಆಫ್‌ ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗುತ್ತಿದ್ದು, ರೇಸ್‌ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡಗಳು ಗುರುವಾರ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ರೇಸ್‌ನಲ್ಲಿ ಉಳಿಯಲು ಎರಡೂ ತಂಡಗಳಿಗೆ ಗೆಲುವು ಅನಿವಾರ್ಯವೆನಿಸಿದ್ದು, ಭಾರೀ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.

ಮೊದಲ 2 ಪಂದ್ಯಗಳಲ್ಲಿ ಸೋತಿದ್ದ ಸನ್‌ರೈಸ​ರ್ಸ್‌ ಬಳಿಕ ಸತತ 5 ಪಂದ್ಯಗಳಲ್ಲಿ ಜಯಿಸಿತ್ತು. ಆ ನಂತರ ಮತ್ತೆ 2 ಪಂದ್ಯಗಳಲ್ಲಿ ಸೋತಿದೆ. ಇನ್ನು ಡೆಲ್ಲಿ 9ರಲ್ಲಿ 4 ಪಂದ್ಯಗಳನ್ನು ಗೆದ್ದಿದ್ದು ಒಮ್ಮೆಯೂ ಸತತ 2 ಪಂದ್ಯಗಳಲ್ಲಿ ಜಯಿಸಿಲ್ಲ. ಎರಡೂ ತಂಡಗಳು ಉತ್ತಮ ನೆಟ್‌ ರನ್‌ರೇಟ್‌ ಹೊಂದಿದ್ದು, ಅದನ್ನು ಉಳಿಸಿಕೊಳ್ಳಲು ಸಹ ಹೋರಾಟ ನಡೆಸಲಿವೆ. ಗಾಯಾಳುಗಳಾದ ವಾಷಿಂಗ್ಟನ್‌ ಸುಂದರ್‌ ಹಾಗೂ ಟಿ.ನಟರಾಜನ್‌ ಸೇವೆ ಸನ್‌ರೈಸ​ರ್ಸ್‌ಗೆ ಅಲಭ್ಯವಾಗುವ ಸಾಧ್ಯತೆ ಇದೆ.

ವಾರ್ನರ್‌ vs ಸನ್‌ರೈಸ​ರ್ಸ್‌!

ಸನ್‌ರೈಸ​ರ್ಸ್‌ ತಂಡದ ಮಾಜಿ ನಾಯಕ, ತಂಡದ ಪರ 4,000ಕ್ಕೂ ಹೆಚ್ಚು ರನ್‌ ಗಳಿಸಿದ್ದ ಡೇವಿಡ್‌ ವಾರ್ನರ್‌ (David Warner) ಗುರುವಾರ ತಮ್ಮ ಮಾಜಿ ತಂಡದ ವಿರುದ್ಧ ಆಡಲಿದ್ದಾರೆ. ತಂಡದ ಆಡಳಿತದೊಂದಿಗೆ ಮನಸ್ತಾಪಕ್ಕೊಳಗಾಗಿದ್ದ ವಾರ್ನರ್‌ರನ್ನು ಕಳೆದ ಆವೃತ್ತಿ ವೇಳೆ ಹೊರಗಿಡಲಾಗಿತ್ತು. ಪಂದ್ಯವೊಂದರಲ್ಲಿ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತು ಆಟ ವೀಕ್ಷಿಸಿದ್ದರು. ತಮ್ಮನ್ನು ಸನ್‌ರೈಸ​ರ್ಸ್‌ ನಡೆಸಿಕೊಂಡ ರೀತಿ ಬಗ್ಗೆ ವಾರ್ನರ್‌ ಬೇಸರ ಸಹ ವ್ಯಕ್ತಪಡಿಸಿದ್ದರು. ಇದೀಗ 9 ವರ್ಷಗಳ ಬಳಿಕ ಡೇವಿಡ್‌ ವಾರ್ನರ್‌, ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಎದುರು ಡೇವಿಡ್ ವಾರ್ನರ್ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಡೆಲ್ಲಿ ತಂಡವು ಬ್ಯಾಟಿಂಗ್‌ನಲ್ಲಿ ಪೃಥ್ವಿ ಶಾ, ವಾರ್ನರ್, ಪಂತ್, ಪೋವೆಲ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಇನ್ನು ಸನ್‌ರೈಸರ್ಸ್ ಗೆಲುವಿನ ಹಳಿಗೆ ಮರಳ ಬೇಕಿದ್ದರೆ ನಾಯಕ ಕೇನ್ ವಿಲಿಯಮ್ಸನ್, ರಾಹುಲ್ ತ್ರಿಪಾಠಿ ಜತೆಗೆ ಮಾರ್ಕ್‌ರಮ್ ಹಾಗೂ ನಿಕೋಲಸ್ ಪೂರನ್ ಕೂಡಾ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಇನ್ನು ಮಾರಕ ಬೌಲಿಂಗ್ ಮೂಲಕ ಡೆಲ್ಲಿ ಬ್ಯಾಟರ್‌ಗಳನ್ನು ಕಾಡಲು ಯುವ ವೇಗಿ ಉಮ್ರಾನ್ ಮಲಿಕ್ ಸಜ್ಜಾಗಿದ್ದಾರೆ. 

IPL 2022 ಆರ್ ಸಿಬಿ-ಚೆನ್ನೈ ಮ್ಯಾಚ್ ನಡುವೆ ಹುಡುಗಿಯಿಂದಲೇ ಹುಡುಗನಿಗೆ ಪ್ರಪೋಸ್!

ಐಪಿಎಲ್ ಇತಿಹಾಸದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇದುವರೆಗೂ ಒಟ್ಟು 20 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಡೆಲ್ಲಿ ಎದುರು ಸನ್‌ರೈಸರ್ಸ್ ಹೈದರಾಬಾದ್ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 20 ಪಂದ್ಯಗಳ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 12 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, 8 ಪಂದ್ಯಗಳಲ್ಲಿ ಮಾತ್ರ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಗೆಲುವಿನ ನಗೆ ಬೀರಿದೆ.

ಸಂಭವನೀಯ ಆಟಗಾರರ ಪಟ್ಟಿ

ಸನ್‌ರೈಸ​ರ್ಸ್‌ ಹೈದರಾಬಾದ್: ಕೇನ್ ವಿಲಿಯಮ್ಸನ್‌(ನಾಯಕ), ಅಭಿಷೇಕ್ ಶರ್ಮಾ‌, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್‌, ನಿಕೋಲಸ್ ಪೂರನ್‌, ಶಶಾಂಕ್ ಶರ್ಮಾ‌, ಜಗದೀಶ ಸುಚಿತ್‌, ಭುವನೇಶ್ವರ್ ಕುಮಾರ್‌, ಮಾರ್ಕೊ ಯಾನ್ಸನ್‌, ಉಮ್ರಾನ್ ಮಲಿಕ್‌, ಕಾರ್ತಿಕ್ ತ್ಯಾಗಿ.

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್‌, ಮಿಚೆಲ್ ಮಾರ್ಷ್‍, ರಿಷಭ್‌ ಪಂತ್‌(ನಾಯಕ), ಲಲಿತ್ ಪೊವೆಲ್‌‌, ರೋಮನ್ ಪೋವೆಲ್‌, ಅಕ್ಷರ್‌ ಪಟೇಲ್‌, ಶಾರ್ದೂಲ್ ಠಾಕೂರ್‌, ಕುಲ್ದೀಪ್ ಯಾದವ್‌, ಮುಸ್ತಾಫಿಜುರ್ ರೆಹಮಾನ್‌, ಚೇತನ್‌ ಸಕಾರಿಯಾ.

ಸ್ಥಳ: ಮುಂಬೈ, ಬ್ರೆಬೋರ್ನ್‌ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್