* ಮುಂಬೈ ಇಂಡಿಯನ್ಸ್‌ ಎದುರು ಸೋಲು ಕಂಡ ಡೆಲ್ಲಿ ಕ್ಯಾಪಿಟಲ್ಸ್‌* ಡೆಲ್ಲಿ ಸೋಲುತ್ತಿದ್ದಂತೆಯೇ ಪ್ಲೇ ಆಫ್‌ ಸ್ಥಾನ ಖಚಿತಪಡಿಸಿಕೊಂಡ ಆರ್‌ಸಿಬಿ* ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳು ವೈರಲ್

ಮುಂಬೈ(ಮೇ.22): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಬಹುನಿರೀಕ್ಷಿತ ಲೀಗ್ ಹಂತದ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಾಣುತ್ತಿದ್ದಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಮೂರನೇ ಬಾರಿಗೆ ಪ್ಲೇ ಆಫ್‌ಗೇರುವಲ್ಲಿ ಯಶಸ್ವಿಯಾಗಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆಯಲು ಮುಂಬೈ ವೇಗಿಗಳು ಅವಕಾಶ ನೀಡಲಿಲ್ಲ. ಡೇವಿಡ್ ವಾರ್ನರ್‌ 5 ರನ್ ಬಾರಿಸಿ ಡೇನಿಯಲ್ ಸ್ಯಾಮ್ಸ್‌ಗೆ ವಿಕೆಟ್ ಒಪ್ಪಿಸಿದರೆ, ಪೃಥ್ವಿ ಶಾ(24) ಹಾಗೂ ಮಿಚೆಲ್ ಮಾರ್ಷ್ ಶೂನ್ಯ ಸುತ್ತಿ ಜಸ್ಪ್ರೀತ್‌ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಇನ್ನು ಸರ್ಫರಾಜ್ ಖಾನ್ ಬ್ಯಾಟಿಂಗ್ ಕೇವಲ 10 ರನ್‌ಗಳಿಗೆ ಸೀಮಿತವಾಯಿತು. ಸಾದಾರಣ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಡೆಲ್ಲಿ ತಂಡಕ್ಕೆ ನಾಯಕ ರಿಷಭ್ ಪಂತ್(39) ಹಾಗೂ ರೋಮನ್ ಪೊವೆಲ್(43) ಆಸರೆಯಾದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತ್ತು.

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಆರಂಭದಲ್ಲೇ ತನ್ನ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತಾದರೂ, ಇದಾದ ಬಳಿಕ ಇಶಾನ್ ಕಿಶನ್(48), ಡೆವಾಲ್ಡ್‌ ಬ್ರೆವೀಸ್(37) ಹಾಗೂ ಟಿಮ್ ಡೇವಿಡ್ (34 ರನ್ 11 ಎಸೆತ) ಸ್ಪೋಟಕ ಬ್ಯಾಟಿಂಗ್ ಮೂಲಕ ಇನ್ನೂ 5 ಎಸೆತಗಳು ಭಾಕಿ ಇರುವಂತೆಯೇ ಮುಂಬೈ ಇಂಡಿಯನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. 

2018ರ ಸೇಡು ತೀರಿಸಿಕೊಂಡ ಮುಂಬೈ: ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ ಮುಂಬೈ ಇಂಡಿಯನ್ಸ್‌ ಎದುರು ಗೆಲುವು ಸಾಧಿಸುವುದು ಅನಿವಾರ್ಯವಾಗಿತ್ತು. ಆದರೆ ಮುಂಬೈ ಎದುರು ಸೋಲು ಕಾಣುವ ಮೂಲಕ ಡೆಲ್ಲಿ ಪ್ಲೇ ಆಫ್‌ ಕನಸು ಭಗ್ನವಾಗಿದೆ. 2018ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಪ್ಲೇ ಆಫ್‌ಗೇರಲು ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಗೆಲ್ಲುವ ಅನಿವಾರ್ಯತೆಗೆ ಸಿಲುಕಿತ್ತು. ಆದರೆ ಡೆಲ್ಲಿ ಎದುರು ಸೋತು ಮುಂಬೈ ಇಂಡಿಯನ್ಸ್ ಪ್ಲೇ ಆಫ್‌ನಿಂದ ಹೊರಬಿದ್ದಿತ್ತು. ಆದರೆ ಇದೀಗ ಮುಂಬೈ ಎದುರು ಡೆಲ್ಲಿ ಸೋಲು ಕಾಣುವ ಮೂಲಕ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಈ ಮೂಲಕ 2018ರ ಸೋಲಿಗೆ ಮುಂಬೈ ಇಂಡಿಯನ್ಸ್ ಸೇಡು ತೀರಿಸಿಕೊಂಡಿದೆ. 

ಇನ್ನು ಡೆಲ್ಲಿ ಸೋಲುತ್ತಿದ್ದಂತೆಯೇ, ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಮೂರನೇ ಬಾರಿಗೆ ಪ್ಲೇ ಆಫ್‌ಗೆ ಅರ್ಹತೆಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆರ್‌ಸಿಬಿ ತಂಡವು ಪ್ಲೇ ಆಫ್‌ಗೇರುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳು ವೈರಲ್ ಆಗಿವೆ.

Scroll to load tweet…
Scroll to load tweet…
Scroll to load tweet…
View post on Instagram
View post on Instagram
View post on Instagram