* ಲಖನೌ ಸೂಪರ್ ಜೈಂಟ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿ* ಲಖನೌ ಎದುರು 18 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು* ಪಂದ್ಯಕ್ಕೂ ಮುನ್ನ ಆರ್‌ಸಿಬಿ ಕಾಲೆಳೆದಿದ್ದ ಲಖನೌಗೆ ಖಡಕ್ ತಿರುಗೇಟು ನೀಡಿದ ಆರ್‌ಸಿಬಿ
ಬೆಂಗಳೂರು(ಏ.20): 15ನೇ ಅವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ಭರ್ಜರಿಯಾಗಿಯೇ ಸಾಗುತ್ತಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಐಪಿಎಲ್ ಫ್ರಾಂಚೈಸಿಗಳ ನಡುವಿನ ಕುಚೋದ್ಯ ಕೂಡಾ ಹೊಸತೇನಲ್ಲ. ಸಾಮಾನ್ಯವಾಗಿ ಐಪಿಎಲ್ ಹರಾಜಿನ ವೇಳೆ, ಪಂದ್ಯಾವಳಿಗಳು ನಡೆಯುವ ವೇಳೆ ಒಂದು ಫ್ರಾಂಚೈಸಿಯು ಮತ್ತೊಂದು ಫ್ರಾಂಚೈಸಿಯನ್ನು ಕಾಲೆಳೆಯುವುದು ಹೊಸತೇನಲ್ಲ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತದೆ.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಲಖನೌ ಸೂಪರ್ ಜೈಂಟ್ಸ್ (Lucknow Super Giants) ತಂಡಗಳ ನಡುವಿನ ಪಂದ್ಯದ ವೇಳೆ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ಅಧಿಕೃತ ಟ್ವಿಟರ್ ಖಾತೆಯಿಂದ, 'ಮಗಾ ಆರ್‌ಸಿಬಿ, ನಿನ್ನಿಂದ ಇದು ಸಾಧ್ಯವಿಲ್ಲ' ಎಂದು ಟ್ವೀಟ್ ಮಾಡುವ ಮೂಲಕ ಆರ್‌ಸಿಬಿ ಫ್ರಾಂಚೈಸಿಯ ಕಾಲೆಳೆದಿತ್ತು. ಆದರೆ ಪಂದ್ಯ ಮುಗಿದ ಬಳಿಕ ಆದದ್ದೇ ಬೇರೆ. ಫಾಫ್ ಡು ಪ್ಲೆಸಿಸ್ ಬಾರಿಸಿದ ಆಕರ್ಷಕ ಶತಕ ವಂಚಿತ ಬ್ಯಾಟಿಂಗ್(96) ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತ್ತು. ಗೆಲ್ಲಲು 182 ರನ್‌ಗಳ ಸವಾಲಿನ ಗುರಿ ಪಡೆದ ಕೆ.ಎಲ್. ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು, ಜೋಶ್ ಹೇಜಲ್‌ವುಡ್ ಮಾರಕ ದಾಳಿಗೆ ತತ್ತರಿಸಿ 8 ವಿಕೆಟ್ ಕಳೆದುಕೊಂಡು 163 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಆರ್‌ಸಿಬಿ ತಂಡವು 18 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡವು ಟೂರ್ನಿಯಲ್ಲಿ ಐದನೇ ಗೆಲುವು ದಾಖಲಿಸಿ ಬೀಗಿತು.
ಲಖನೌ ಸೂಪರ್ ಜೈಂಟ್ಸ್‌ಗೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ಕೊಟ್ಟ ಆರ್‌ಸಿಬಿ..!
ಹೌದು, ಪಂದ್ಯ ಮುಗಿಯುವವರೆಗೂ ಸುಮ್ಮನಿದ್ದ ಆರ್‌ಸಿಬಿ ಸೋಷಿಯಲ್ ಮೀಡಿಯಾ ಅಡ್ಮಿನ್, ಪಂದ್ಯದಲ್ಲಿ ಗೆಲುವು ದಾಖಲಿಸುತ್ತಿದ್ದಂತೆಯೇ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಖ್ಯಾತ ಸಿನಿಮಾ ಕೆಜಿಎಫ್‌ನ ಪ್ರಖ್ಯಾತ ಡೈಲಾಗ್ ಮೂಲಕ ಲಖನೌ ತಂಡಕ್ಕೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದೆ. ಜಿಫ್ ಮೂಲಕ ಕೆಜಿಎಫ್‌ನ ಡೈಲಾಗ್ “If you think you are bad, I am your dad,” ಎನ್ನುವ ಡೈಲಾಗ್ ಪೋಸ್ಟ್ ಮಾಡಿ ಖಡಕ್ ರಿಪ್ಲೇ ನೀಡಿದೆ.
IPL 2022: ಆರ್‌ಸಿಬಿ vs ಲಖನೌ ಪಂದ್ಯದಲ್ಲಿ ವೈರಲ್ ಆದ ಟಾಪ್ 10 ಮೀಮ್ಸ್‌ಗಳಿವು..!
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೇ, ಆರ್‌ಸಿಬಿ ಎದುರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಲಖನೌ ಸೂಪರ್ ಜೈಂಟ್ಸ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ಓವರ್‌ನಲ್ಲೇ ಅನೂಜ್ ರಾವತ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸುವಲ್ಲಿ ವೇಗಿ ದುಸ್ಮಂತಾ ಚಮೀರಾ ಯಶಸ್ವಿಯಾದರು. ಇದರ ಹೊರತಾಗಿಯೂ ಫಾಫ್ ಡು ಪ್ಲೆಸಿಸ್ ಬಾರಿಸಿದ ಸಮಯೋಚಿತ ಅರ್ಧಶತಕ(96)ದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತ್ತು. ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್ ತಂಡವು ನಿರಂತರವಾಗಿ ವೇಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಪರಿಣಾಮ ಲಖನೌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 163 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಆರ್‌ಸಿಬಿ 18 ರನ್‌ಗಳ ಅಂತರದ ರೋಚಕ ಜಯ ಸಾಧಿಸಿತು. ಆರ್‌ಸಿಬಿ ವೇಗಿ ಜೋಶ್ ಹೇಜಲ್‌ವುಡ್ 4 ವಿಕೆಟ್ ಕಬಳಿಸಿದರು. ಇನ್ನು ಕೇವಲ 4 ರನ್ ಅಂತರದಲ್ಲಿ ಶತಕ ವಂಚಿತರಾದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
