IPL 2022 ಟಿವಾಟಿಯಾ ಅಬ್ಬರ, ಲಖನೌ ವಿರುದ್ಧ ಗುಜರಾತ್ ಟೈಟಾನ್ಸ್ ಗೆಲುವು!
- ಲಖನೌ ಸೂಪರ್‌ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ
- ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಹೊಸ ತಂಡ ಗುಜರಾತ್
- ಕೆಎಲ್ ರಾಹುಲ್ ಪಡೆಯನ್ನು ಮಣಿಸಿದ ಪಾಂಡ್ಯ ಪಡೆ
ಮುಂಬೈ(ಮಾ.28): ರಾಹುಲ್ ಟಿವಾಟಿಯಾ ಸ್ಫೋಟಕ ಬ್ಯಾಟಿಂಗ್, ಅಭಿನವ್ ಮನೋಹರ್ ಅತ್ಯುತ್ತಮ ಸಾಥ್‌ನಿಂದ ಲಖನೌ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ರೋಚಕ ಗೆಲುವು ಸಾಧಿಸಿದೆ. ಅಂತಿಮ ಹಂತದಲ್ಲಿ ಗುಜರಾತ್ ಟೈಟಾನ್ಸ್ ಗೇರ್ ಬದಲಾಯಿಸಿ ಮತ್ತಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಹೀಗಾಗಿ 5 ವಿಕೆಟ್ ಗೆಲುವು ಕಂಡಿದೆ.
159 ರನ್ ಟಾರ್ಗೆಟ್ ಪಡೆದ ಗುಜರಾತ್ ಟೈಟಾನ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಡಕೌಟ್ ಆದರು. ಆದರೆ ಮ್ಯಾಥ್ಯೂ ವೇಟ್ ಹೋರಾಟ ನೀಡಿದರು. ಇತ್ತ ವಿಜಯ್ ಶಂಕರ್ 4 ರನ್ ಸಿಡಿಸಿ ಔಟಾದರು. ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಮ್ಯಾಥ್ಯೂ ವೇಡ್ ಜೊತೆಯಾಟ ತಂಡಕ್ಕೆ ನೆರವಾಯಿತು.
ಹಾರ್ದಿಕ್ ಪಾಂಡ್ಯ 28 ಎಸೆತದಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 33 ರನ್ ಸಿಡಿಸಿ ಔಟಾದರು. ಇತ್ತ ವೇಡ್ 29 ಎಸೆತದಲ್ಲಿ 4 ಬೌಂಡರಿ ಮೂಲಕ 30 ರನ್ ಸಿಡಿಸಿದರು. ಪಾಂಡ್ಯ ಹಾಗೂ ವೇಡ್ ವಿಕೆಟ್ ಪತನ ಗಜರಾತ್ ಟೈಟಾನ್ಸ್ ತಂಡಕ್ಕೆ ಹಿನ್ನಡೆ ತಂದಿತು.
ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ಟಿವಾಟಿಯಾ ಅಬ್ಬರ ಆರಂಭಗೊಂಡಿತು. ಮಿಲ್ಲರ್ ಕೇವಲ 21 ಎಸೆತದಲ್ಲಿ 30 ರನ್ ಸಿಡಿಸಿ ಔಟಾದರು. ಬಳಿಕ ಟಿವಾಟಿಯಾ ಹಾಗೂ ಅಭಿನವ್ ಮನೋಹರ್ ಜೊತೆಯಾಟ ಗುಜರಾತ್ ಟೈಟಾನ್ಸ್ ತಂಡದ ಲಕ್ ಬದಲಿಸಿತು. 19.4 ಓವರ್‌ಗಳಲ್ಲಿ ಗುಜರಾತ್ 5 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
ರಾಹುಲ್ ಟಿವಾಟಿಯಾ 24 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಅಜೇಯ 40 ರನ್ ಸಿಡಿಸಿದರು. ಇನ್ನು ಅಭಿನವ್ ಮನೋಹರ್ 7 ಎಸೆತದಲ್ಲಿ 3 ಬೌಂಡರಿ ಮೂಲಕ ಅಜೇಯ 15 ರನ್ ಸಿಡಿಸಿದರು. ಗುಜರಾತ್ ಅಂತಿಮ ಹಂತದಲ್ಲಿ ಮಿಲ್ಲರ್, ಟಿವಾಟಿಯಾ ಹಾಗೂ ಮನೋಹರ್ ಜೊತೆಯಾಟದಿಂದ ಪಂದ್ಯ ಗೆದ್ದುಕೊಂಡಿತು.
ಲಖನೌ ಸೂಪರ್‌ಜೈಂಟ್ಸ್ ಇನ್ನಿಂಗ್ಸ್
ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್‌ಜೈಂಟ್ಸ್ ತಂಡಕ್ಕೆ ದೀಪಕ್ ಹೂಡ ಹಾಗೂ ಆಯುಷ್ ಬದೋನಿ ಬ್ಯಾಟಿಂಗ್ ನೆರವು ಸಿಕ್ಕಿತು. ಆರಂಭಿಕರು ದಿಢೀರ್ ವಿಕೆಟ್ ಕೈಚೆಲ್ಲಿದರೂ, ದಿಟ್ಟ ಹೋರಾಟ ನೀಡಿದ ಹೂಡ ಹಾಗೂ ಬದೋನಿ ಆಕರ್ಷಖ ಹಾಫ್ ಸೆಂಚುರಿ ಸಿಡಿಸಿದರು. ಇದರಿಂದ ಲಖನೌ ಸೂಪರ್‌ಜೈಂಟ್ಸ್ 6 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿ ಔಟಾದರು.
ಕೆಎಲ್ ರಾಹುಲ್ ಡಕೌಟ್ ಆದರೆ, ಕ್ವಿಂಟನ್ ಡಿಕಾಕ್ 7 ರನ್ ಸಿಡಿಸಿ ಔಟಾದರು. ಇವಿನ್ ಲಿವಿಸ್ 10 ರನ್ ಸಿಡಿಸಿ ನಿರ್ಗಮಿಸಿದರು. ಇನ್ನು ಮನೀಶ್ ಪಾಂಡೆ 6 ರನ್ ಸಿಡಿಸಿ ಔಟಾದರು. 29 ರನ್‌ಗೆ 4 ವಿಕೆಟ್ ಕಳೆದುಕೊಂಡ ಲಖನೌ ಸೂಪರ್‌ಜೈಂಟ್ಸ್ ತಂಡಕ್ಕೆ ಹೂಡ ಹಾಗೂ ಬದೋನಿ ನೆರವಾದರು. ಹೂಡ 55 ರನ್ ಸಿಡಿಸಿದರೆ, ಬಜೋನಿ 54 ರನ್ ಸಿಡಿಸಿದರು. ಕ್ರುನಾಲ್ ಪಾಂಡ್ಯ ಅಜೇಯ 21 ರನ್ ಸಿಡಿಸಿದರು.