* ಆರ್‌ಸಿಬಿ ವರ್ಸಸ್‌ ರಾಯಲ್ಸ್ ನಡುವಿನ ಪೈಪೋಟಿಗೆ ಕ್ಷಣಗಣನೆ* ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ ಎರಡನೇ ಕ್ವಾಲಿಫೈಯರ್ ಮ್ಯಾಚ್‌* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳು

ಅಹಮದಾಬಾದ್​(ಮೇ.27): 15ನೇ ಸೀಸನ್ IPL ಮುಗಿಯೋಕೆ ಇನ್ನೆರಡು ಪಂದ್ಯ ಮಾತ್ರ ಬಾಕಿ. ಫೈನಲ್​ಗೂ ಮುನ್ನ ಇಂದು ಸೆಕೆಂಡ್ ಕ್ವಾಲಿಫೈಯರ್ ಮ್ಯಾಚ್ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗ್ತಿವೆ. ಗೆದ್ದರೆ ಫೈನಲ್​ಗೆ ಸೋತರೆ ಮನೆ ಕಡೆಗೆ ಅನ್ನೋ ಸ್ಥಿತಿ ಎರಡು ತಂಡಕ್ಕೂ ಇದ್ದು, ಡು ಆರ್ ಡೈ ಮ್ಯಾಚ್​​ನಲ್ಲಿ ಗೆಲ್ಲಲು ಎರಡು ಟೀಮ್ಸ್ ಎದುರು ನೋಡ್ತಿವೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ

IPL ಈಗ ಅಹಮದಾಬಾದ್​​ಗೆ ಶಿಫ್ಟ್ ಆಗಿದೆ. ಮಹಾರಾಷ್ಟ್ರದಲ್ಲಿ ಲೀಗ್​, ಕೋಲ್ಕತ್ತಾದಲ್ಲಿ ಕ್ವಾಲಿಫೈಯರ್​-1 ಮತ್ತು ಎಲಿಮಿನೇಟರ್ ಪಂದ್ಯ ನಡೆದಿದ್ದವು. ಈಗ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕ್ವಾಲಿಫೈಯರ್-2 ಹಾಗೂ ಫೈನಲ್ ಫೈಟ್ ನಡೆಯಲಿದೆ. ಅಲ್ಲಿಗೆ ಬರೋಬ್ಬರಿ ಒಂದು ಲಕ್ಷ ಪ್ರೇಕ್ಷಕರ ಎದುರು ಈ ಎರಡು ಮಹತ್ವದ ಪಂದ್ಯಗಳು ನಡೆಯಲಿವೆ. ಲೀಗ್​ನಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದ RCB ಮತ್ತು ರಾಜಸ್ಥಾನ ತಲಾ ಒಂದು ಗೆದ್ದು ಒಂದನ್ನು ಸೋತಿದ್ದವು. ಆ ಎರಡು ಮ್ಯಾಚಲ್ಲೂ ಅಷ್ಟಾಗಿ ರನ್ ಬಂದಿರಲಿಲ್ಲ. ಆದ್ರೆ ಇಂದು ಮೋದಿ ಸ್ಟೇಡಿಯಂನಲ್ಲಿ ರನ್ ಹೊಳೆಯೇ ಹರಿಯಲಿದೆ. 

4ನೇ ಬಾರಿ ಫೈನಲ್ ಪ್ರವೇಶಿಸುತ್ತಾ RCB: 

RCB ಹಾಗೂ ರಾಜಸ್ದಾನ 14 ವರ್ಷಗಳಿಂದ ವನವಾಸ ಅನುಭವಿಸುತ್ತಿವೆ. 2008ರ ಚೊಚ್ಚಲ IPL ಟ್ರೋಫಿ ಗೆದ್ದ ನಂತರ ರಾಜಸ್ಥಾನ ಮತ್ತೊಂದು ಕಪ್ ಗೆದ್ದಿಲ್ಲ. ಕಪ್ ಯಾಕೆ ಫೈನಲ್ ಸಹ ಪ್ರವೇಶಿಸಿಲ್ಲ. ಈಗ 14 ವರ್ಷಗಳ ನಂತರ ಫೈನಲ್ ಪ್ರವೇಶಿಸಲು ಪಿಂಕ್ ಆರ್ಮಿ ಎದುರು ನೋಡ್ತಿದೆ. ಇನ್ನು RCB 14 ವರ್ಷಗಳಿಂದ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಇಂದು ಗೆದ್ದು 4ನೇ ಬಾರಿಗೆ ಫೈನಲ್ ಪ್ರವೇಶಿಸಲು ಪ್ಲಾನ್ ಮಾಡಿದೆ. ಸತತ ಎರಡು ಜಯಗಳಿಸಿ, ಕ್ವಾಲಿಫೈಯರ್​​-2ಗೆ ಬಂದಿರೋ ರೆಡ್ ಆರ್ಮಿ ಪಡೆ, ಮತ್ತೆರಡು ಜಯ ದಾಖಲಿಸಿ, 14 ವರ್ಷಗಳ ಕಪ್ ಬರ ನೀಗಿಸಿಕೊಳ್ಳಲೂ ರೆಡಿಯಾಗಿದೆ.

ಸದ್ಯ RCB ಕಂಟ್ರೋಲ್ ಮಾಡೋದು ಕಷ್ಟ ಕಷ್ಟ:

ಲೀಗ್ ಹಂತದ 14 ಪಂದ್ಯಗಳಲ್ಲಿ 8 ಗೆದ್ದು ಆರನ್ನ ಸೋತು ಪ್ಲೇ ಆಫ್​​ಗೆ ಬಂದಿರುವ ರೆಡ್ ಆರ್ಮಿ ಪಡೆಗೆ ಆಟದ ಜೊತೆ ಅದೃಷ್ಟವೂ ಇದೆ. ಡೆಲ್ಲಿ ವಿರುದ್ಧ ಮುಂಬೈ ಗೆದ್ದಿದ್ದರಿಂದಲೇ ಬೆಂಗಳೂರು ಟೀಮ್​ ಪ್ಲೇ ಆಫ್​ಗೆ ಬಂದಿದ್ದು. ಕೋಲ್ಕತ್ತಾದಲ್ಲಿ ಒಂದು ವಾರದಿಂದ ಮಳೆ ಬರುತ್ತಿದೆ. ಮೊನ್ನೆಯೂ ಮಳೆ ಬಂದಿದ್ದರಿಂದ ಪಂದ್ಯ ಅರ್ಧಗಂಟೆ ಲೇಟಾಗಿ ಸ್ಟಾರ್ಟ್​ ಆಯ್ತು. ಆದ್ರೆ RCB ಅದೃಷ್ಟ ಚೆನ್ನಾಗಿತ್ತು. ಮಳೆ ನಿಂತಿತು. ಬಳಿಕ RCB ರನ್ ಮಳೆ ಸುರಿಸಿ, ಲಖನೌ ವಿರುದ್ಧ ಗೆದ್ದಿತು.

IPL 2022: ಇಂದು ಆರ್‌ಸಿಬಿ vs ರಾಜಸ್ಥಾನ ಸೆಮೀಸ್‌ ಫೈಟ್‌

ಸದ್ಯ RCB ಪ್ಲೇಯರ್ಸ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಪ್ಲೇಯಿಂಗ್-11 ಚೇಂಜ್ ಆಗೋ ಮಾತೇ ಇಲ್ಲ. ನಾಯಕ ಡು ಪ್ಲೆಸಿಸ್, ಕೊಹ್ಲಿ ಮತ್ತು ಮ್ಯಾಕ್ಸ್​​ವೆಲ್ ಕ್ವಾಲಿಫೈಯರ್-1ರಲ್ಲಿ ವಿಫಲರಾದ್ರೂ 207 ರನ್ ಬಾರಿಸಿತು ಅಂದ್ರೆ, ಅದರಲ್ಲೇ ಗೊತ್ತಾಗುತ್ತೆ ಆರ್​ಸಿಬಿ ತಾಕತ್ತು. ಬೌಲಿಂಗ್​ ಸಹ ಸ್ಟ್ರಾಂಗ್ ಆಗಿ ಇರೋದ್ರಿಂದ ಇಂದು ಈಸಿಯಾಗಿ ರೆಡ್ ಆರ್ಮಿಯನ್ನ ಸೋಲಿಸಲಾಗಲ್ಲ. ಪರ್ಪಲ್ ಕ್ಯಾಪ್ ಗೆಲ್ಲಲು ಹಸರಂಗ ಮತ್ತು ಚಹಲ್ ನಡುವೆ ಫೈಟ್ ಬೇರೆ ಬಿದ್ದಿದೆ.

RCB ಮಾಜಿ ಪ್ಲೇಯರ್ಸ್​ RCBಗೆ ಕಂಟಕರಾಗ್ತಾರಾ:

ಗರಿಷ್ಠ ರನ್ ಸರದಾರ ಜೋಸ್ ಬಟ್ಲರ್, ಆರೆಂಜ್ ಕ್ಯಾಪ್ ಗೆಲ್ಲೋದು ಗ್ಯಾರಂಟಿ. RCBಗೆ ಅವರೇ ಕಂಟಕವಾದ್ರೂ ಆಶ್ಚರ್ಯವಿಲ್ಲ. ಬಟ್ಲರ್ ಮಾತ್ರವಲ್ಲ, ಈ ಹಿಂದೆ RCB ಪರ ಆಡಿ ಈಗ ರಾಜಸ್ಥಾನ ತಂಡದಲ್ಲಿರುವ ದೇವದತ್​ ಪಡಿಕ್ಕಲ್, ಶಿಮ್ರೊನ್ ಹೆಟ್ಮೆಯರ್​, ಯುಜುವೇಂದ್ರ ಚಹಲ್ ಸಹ RCBಗೆ ಭಯ ಹುಟ್ಟಿಸಿದ್ದಾರೆ. ಕರ್ನಾಟಕದ ಪಡಿಕ್ಕಲ್, ಕರುಣ್ ನಾಯರ್​, ಪ್ರಸಿದ್ದ್ ಕೃಷ್ಣ ಸಹ ರಾಯಲ್ಸ್ ಟೀಮ್​ನಲ್ಲಿದ್ದು ಅವರು ಬೆಂಗಳೂರಿಗೆ ಆಘಾತ ನೀಡಲು ಎದುರು ನೋಡ್ತಿದ್ದಾರೆ. ಒಟ್ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಬಿಗ್ ಫೈಟ್ ನಡೆಯೋದು ಗ್ಯಾರಂಟಿ.