IPL 2022 ಕೊನೆಗೂ ಗೆಲುವಿನ ದಡ ಸೇರಿದ ಮುಂಬೈ, ಚೆನ್ನೈ ಅಧಿಕೃತವಾಗಿ ಟೂರ್ನಿಯಿಂದ ಔಟ್!
- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದ ಮುಂಬೈ
- ತಿಲಕ್ ವರ್ಮಾ ಹೋರಾಟದಿಂದ ಮುಂಬೈಗೆ ಗೆಲುವು
- ಅಧಿಕೃತವಾಗಿ ಪ್ಲೇ ಆಫ್ ರೇಸ್‌ನಿಂದ ಚೆನ್ನೇ ಹೊರಕ್ಕೆ
ಮುಂಬೈ(ಮೇ.12): ಗೆಲುವಿಗೆ ಸುಲಭ ಟಾರ್ಗೆಟ್ ಪಡೆದರೂ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿದ ಮುಂಬೈ ಇಂಡಿಯನ್ಸ್ ಕೊನೆಗೂ ಗೆಲುವಿನ ದಡ ಸೇರಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್ ಗೆಲುವು ದಾಖಲಿಸಿದೆ. ಆದರೆ ಮುಗ್ಗರಿಸಿದ ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತವಾಗಿ ಐಪಿಎಲ್ 2022 ಟೂರ್ನಿಯಿಂದ ಹೊರಬಿದ್ದಿದೆ.
ಗೆಲುವಿಗೆ 98 ರನ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್ ಸುಲಭವಾಗಿ ರನ್ ಚೇಸ್ ಮಾಡಲಿದೆ ಅನ್ನೋದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ಲೆಕ್ಕಾಚಾರಾ ಉಲ್ಟಾ ಆಯಿತು. ಆರಂಭದಲ್ಲೇ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡಿತು. ಕಿಶನ್ 6 ರನ್ ಸಿಡಿಸಿ ಔಟಾದರು. ನಾಯಕ ರೋಹಿತ್ ಶರ್ಮಾ ಕೆಲ ಹೊತ್ತು ಬ್ಯಾಟ್ ಬೀಸಿ 18 ರನ್ ಸಿಡಿಸಿ ಔಟಾದರು. 30 ರನ್‌ಗಳಿಗೆ ಮುಂಬೈ ಇಂಡಿಯನ್ಸ್ 2 ವಿಕೆಟ್ ಕಳೆದುಕೊಂಡಿತು.
ಆರಂಭಿಕರ ಪತನದ ಬೆನ್ನಲ್ಲೇ ಡೆನಿಯಲ್ ಸ್ಯಾಮ್ಸ್ ಕೇವಲ 1 ರನ್ ಸಿಡಿಸಿ ಔಟಾದರು. ಇತ್ತ ತ್ರಿಸ್ಟಾನ್ ಸ್ಬಬ್ಸ್ ಡಕೌಟ್ ಆದರು. ಸುಲಭ ಟಾರ್ಗೆಟ್ ಮುಂಬೈಗೆ ಕಠಿಣವಾಗ ತೊಡಗಿತು. ಆದರೆ ತಿಲಕ್ ವರ್ಮಾ ಹಾಗೂ ಹೃತಿಕ್ ಶೋಕಿನ್ ಜೊತೆಯಾಟದಿಂದ ಮುಂಬೈ ಚೇತರಿಸಿಕೊಂಡಿತು. ಇನ್ನೇನು ಗೆಲುವಿನ ಆತ್ಮವಿಶ್ವಾಸ ಹೆಚ್ಚಾಗುತ್ತಿದ್ದಂತೆ ಹೃತಿಕ್ ಶೋಕೀನ್ 18 ರನ್ ಸಿಡಿಸಿ ಔಟಾದರು. ಮುಂಬೈ ಪಾಳಯದಲ್ಲಿ ಮತ್ತೆ ಆತಂಕ ಆವರಿಸಿಕೊಂಡಿತು.
ತಿಲಕ್ ವರ್ಮಾ ಹಾಗೂ ಟಿಮ್ ಡೇವಿಡ್ ಹೋರಾಟದಿಂದ ಮುಂಬೈ ಇಂಡಿಯನ್ಸ್ ನಿಟ್ಟುಸಿರುಬಿಟ್ಟಿತು. ತಿಲಕ್ ವರ್ಮಾ ಅಜೇಯ 34 ರನ್ ಸಿಡಿಸಿದರೆ, ಟಿಮ್ ಡೇವಿಡ್ ಅಜೇಯ 16 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 14.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಮುಂಬೈ ಇಂಡಿಯನ್ಸ್ 12 ಪಂದ್ಯದಲ್ಲಿ 3 ಗೆಲುವು ದಾಖಲಿಸಿಕೊಂಡಿತು. ಈ ಮೂಲಕ ಸೋಲಿನ ಅಂತ ಕಡಿಮೆ ಮಾಡಿಕೊಂಡಿತು. ಇತ್ತ ಚೆನ್ನೈ ಅಧಿಕೃತವಾಗಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿತು.