* 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭ* ಮಿಲಿಯನ್‌ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ನೂರು ಕೋಟಿ ಕ್ಲಬ್ ಸೇರಿದ್ದಾರೆ ಐವರು ಕ್ರಿಕೆಟಿಗರು* ಈ ಪಟ್ಟಿಯಲ್ಲಿ ಆರ್‌ಸಿಬಿಯ ಇಬ್ಬರು ಆಟಗಾರರಿಗೆ ಸ್ಥಾನ

ಬೆಂಗಳೂರು(ಮಾ.26): ಪುನೀತ್ ರಾಜ್ ಕುಮಾರ್ ನಟನೆಯ ಕೊನೆ ಸಿನಿಮಾ ಜೇಮ್ಸ್, ಸೆಂಚುರಿ ಕ್ಲಬ್​ಗೆ ಸೇರಿದೆ. ಅಂದರೆ ನೂರು ಕೋಟಿ ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ನೂರು ಕೋಟಿ ಕ್ಲಬ್​ಗೆ ಐಪಿಎಲ್​ನಲ್ಲಿ ಐವರು ಆಟಗಾರರು ಸೇರಿದ್ದಾರೆ. ಅಂದರೆ ಐಪಿಎಲ್ (IPL)​ ಮೂಲಕವೇ ನೂರು ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಅದರಲ್ಲಿ ನಾಲ್ವರು ಭಾರತೀಯರು ಹಾಗೂ ಒಬ್ಬ ವಿದೇಶಿ ಆಟಗಾರ ಎನ್ನುವುದು ವಿಶೇಷ. 

1. ಮಹೇಂದ್ರ ಸಿಂಗ್ ಧೋನಿ, ಸಂಪಾಧನೆ 164.8 ಕೋಟಿ ರೂ.

2008ರಿಂದಲೂ IPL ಆಡುತ್ತಿರುವ ಎಂಎಸ್ ಧೋನಿ(MS Dhoni), ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ರೂ 15ನೇ ಸೀಸನ್ ಆಡಲು ರೆಡಿಯಾಗಿದ್ದಾರೆ. ಐಪಿಎಲ್ ಇತಿಹಾಸದ ಅತಿಹೆಚ್ಚು ಹಣ ಗಳಿಸಿರುವ ಕ್ರಿಕೆಟಿಗ ಅಂದರೆ ಅದು ಕೂಲ್‌ ಕ್ಯಾಪ್ಟನ್‌. ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಮತ್ತು ರೈಸಿಂಗ್ ಪುಣೆ ಜೈಂಟ್ಸ್(Rising Pune Supergiant)​ ತಂಡದ ಪರ ಆಡಿರುವ ಮಹಿ, ಸಿಎಸ್​ಕೆಗೆ 4 ಬಾರಿ IPL ಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಧೋನಿ ವೇತನ ರೂಪದಲ್ಲಿ IPLನಲ್ಲಿ 164.8 ಕೋಟಿ ರುಪಾಯಿ ಪಡೆದಿದ್ದಾರೆ. ಇಂಟರ್​ ನ್ಯಾಷನಲ್ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ರೂ, 40+ ವಯಸ್ಸಾದ್ರೂ IPL​​​​ಗೆ ಮಾತ್ರ ಧೋನಿಯೇ ಕಿಂಗ್​.

2. ರೋಹಿತ್ ಶರ್ಮಾ, ಸಂಪಾದನೆ 162.6 ಕೋಟಿ ರೂ.

ಸದ್ಯ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ(Rohit Sharma), IPL ಇತಿಹಾಸದಲ್ಲೇ ಅತ್ಯಂತ ಯಶಸ್ವಿ ನಾಯಕ ಕೂಡ. ಅವರ ಕ್ಯಾಪ್ಟನ್ಸಿಯಲ್ಲಿ ಮುಂಬೈ ಇಂಡಿಯನ್ಸ್(Mumbai Indians) ಐದು ಬಾರಿ IPL ಟ್ರೋಫಿ ಗೆದ್ದಿದೆ. 2008ರಿಂದ IPL ಆಡುತ್ತಿದ್ದರೂ, ಮೊದಲ ಮೂರು ವರ್ಷ ಡೆಕ್ಕನ್ ಚಾರ್ಜರ್ಸ್(Deccan Chargers) ಪರ ಆಡಿದ್ದರು. ಡೆಕ್ಕನ್ ಚಾರ್ಜರ್ಸ್ ಸಹ 2009ರಲ್ಲಿ ಚಾಂಪಿಯನ್ ಆಗಿತ್ತು. ಅಲ್ಲಿಗೆ ರೋಹಿತ್​ 14ರಲ್ಲಿ 6 IPL ಟ್ರೋಫಿ ಗೆದ್ದ ತಂಡದ ಮೆಂಬರ್ ಆಗಿದ್ದಾರೆ. ಈಗ ಅವರೇ IPL ಇತಿಹಾಸದಲ್ಲಿ ಗರಿಷ್ಠ ಹಣ ಗಳಿಸಿದ 2ನೇ ಆಟಗಾರ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 162.6 ಕೋಟಿ ರೂ. ವೇತನ ಪಡೆದಿದ್ದಾರೆ.

3 ವಿರಾಟ್ ಕೊಹ್ಲಿ, ಸಂಪಾದನೆ: 158.2 ಕೋಟಿ ರೂ.

IPL ಆರಂಭವಾದಾಗಿನಿಂದ ಇಲ್ಲಿಯವರೆಗೆ ಒಂದೇ ತಂಡದ ಪರ ಆಡುತ್ತಿರುವ ಏಕೈಕ ಆಟಗಾರ ಅಂದ್ರೆ ಅದು ವಿರಾಟ್ ಕೊಹ್ಲಿ(Virat Kohli) ಮಾತ್ರ. 2008ರಲ್ಲಿ ಆರ್​ಸಿಬಿ(RCB) ತಂಡ ಸೇರಿಕೊಂಡ ಕಿಂಗ್ ಕೊಹ್ಲಿ, ಈಗಲೂ ಬೆಂಗಳೂರು ಪರವೇ ಬ್ಯಾಟ್ ಬೀಸಲಿದ್ದಾರೆ. 2013ರಿಂದ 2021ರವರೆಗೆ ಕ್ಯಾಪ್ಟನ್ ಆಗಿದ್ದ ಕೊಹ್ಲಿ, ಈ ಸಲ ಕೇವಲ ಪ್ಲೇಯರ್​. 15 ಸೀಸನ್​ನಿಂದ ಕೊಹ್ಲಿ ಖಾತೆಗೆ 158.2 ಕೋಟಿ ರೂ ವೇತನ ರೂಪದಲ್ಲಿ ಬಂದಿದೆ. ಈ ವರ್ಷ ಆರ್‌ಸಿಬಿ ತಂಡ ಕಿಂಗ್‌ ಕೊಹ್ಲಿ ಖಾತೆಗೆ ಬರೋಬ್ಬರಿ 15 ಕೋಟಿ ರುಪಾಯಿ ಹಾಕಿದೆ. ಇನ್ನು 2018-21ರವರೆಗೆ ಕೊಹ್ಲಿ ಪ್ರತಿ ವರ್ಷ 17 ಕೋಟಿ ರೂ. ವೇತನ ಪಡೆದಿದ್ದಾರೆ.

4. ಸುರೇಶ್ ರೈನಾ, ಸಂಪಾದನೆ 110.7 ಕೋಟಿ ರೂ.

ಮಿಸ್ಟರ್ IPL ಎಂದೇ ಖ್ಯಾತರಾಗಿರೋ ಸುರೇಶ್ ರೈನಾ(Suresh Raina), ಈ ಸಲದ ಬಿಡ್​ನಲ್ಲಿ ಆನ್ ಸೋಲ್ಡ್ ಆಗಿದ್ರು. ಹಾಗಾಗಿ ಈ ಸಲ ಅವರು ಕಾಮೆಂಟ್ರಿಯಾಗಿ IPLಗೆ ರೀ ಎಂಟ್ರಿ ಕೊಡ್ತಿದ್ದಾರೆ. 14 ವರ್ಷಗಳ ಕಾಲ IPL ಆಡಿರೋ ರೈನಾ, 110.7 ಕೋಟಿ ರೂಗಳನ್ನ ವೇತನ ರೂಪದಲ್ಲಿ ಪಡೆದಿದ್ದಾರೆ. 

5. ಎಬಿ ಡಿವಿಲಿಯರ್ಸ್‌, ಸಂಪಾದನೆ: 102.5 ಕೋಟಿ ರೂ.

IPL​ನಲ್ಲಿ ನೂರಕ್ಕೂ ಅಧಿಕ ಕೋಟಿ ರೂ. ಸಂಪಾದಿಸಿರುವ ಟಾಪ್​-5 ಆಟಗಾರರಲ್ಲಿ ಇರೋದು ಒಬ್ಬೇ ಒಬ್ಬ ವಿದೇಶಿ ಆಟಗಾರ. ಆತನೇ ಎಬಿ ಡಿವಿಲಿಯರ್ಸ್(Ab de Villiers). ಎಬಿಡಿ 102.5 ಕೋಟಿಗಳನ್ನ ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಆದರೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಎಲ್ಲಾ ಮಾದರಿ ಕ್ರಿಕೆಟ್​ಗೆ ಗುಡ್ ಬೈ ಹೇಳಿರೋದ್ರಿಂದ ಈ ಸಲ ಎಬಿಡಿ ಐಪಿಎಲ್ ಆಡ್ತಿಲ್ಲ. ಈ ಐವರೇ ಐಪಿಎಲ್​ನ ನೂರು ಕೋಟಿ ಕ್ಲಬ್ ವೀರರು.