* ಐಪಿಎಲ್ ಟೂರ್ನಿಯಲ್ಲಿ 5ನೇ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್‌* ರವೀಂದ್ರ ಜಡೇಜಾ ನಾಯಕತ್ವದ ಕುರಿತಂತೆ ಮೈಕೆಲ್ ವಾನ್ ಅಸಮಾಧಾನ* ಧೋನಿಯೇ ನಾಯಕನಾಗಿದ್ದರೆ, ಸಿಎಸ್‌ಕೆ ಈ ರೀತಿ ಸೋಲು ಕಾಣುತ್ತಿರಲಿಲ್ಲ

ಮುಂಬೈ(ಏ.19): ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಆಘಾತಕಾರಿ ಸೋಲು ಕಂಡಿದೆ. ಇದರೊಂದಿಗೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆಡಿದ ಆರು ಪಂದ್ಯಗಳ ಪೈಕಿ 5ನೇ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನ ಪಡೆದಿದೆ. ಇದರ ಬೆನ್ನಲ್ಲೇ ರವೀಂದ್ರ ಜಡೇಜಾ ನಾಯಕತ್ವದ ಕುರಿತಂತೆ ಪ್ರಶ್ನೆಗಳು ಏಳಲಾರಂಭಿಸಿವೆ. 47 ವರ್ಷದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್, ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ತಂಡವು ಇಷ್ಟೆಲ್ಲಾ ಸೋಲು ಕಂಡಿರಲಿಲ್ಲ ಎಂದಿದ್ದಾರೆ.

ಗುಜರಾತ್ ಟೈಟಾನ್ಸ್ ವಿರುದ್ದ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 169 ರನ್ ಗಳಿಸುವ ಮೂಲಕ ಟೈಟಾನ್ಸ್‌ಗೆ ಸವಾಲಿನ ಗುರಿ ನೀಡಿತ್ತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಜರಾತ್ ತಂಡಕ್ಕೆ ಸಿಎಸ್‌ಕೆ ಬೌಲರ್‌ಗಳು ಆರಂಭದಲ್ಲೇ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮ ಮೊದಲ 8 ಓವರ್ ಮುಕ್ತಾಯದ ವೇಳೆಗೆ ಗುಜರಾತ್ ತಂಡವು 4 ವಿಕೆಟ್ ಕಳೆದುಕೊಂಡು ಕೇವಲ 48 ರನ್ ಬಾರಿಸಿತ್ತು. ಆದರೆ ಆ ಬಳಿಕ ಡೇವಿಡ್ ಮಿಲ್ಲರ್ ಹಾಗೂ ರಶೀದ್ ಖಾನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು 3 ವಿಕೆಟ್‌ಗಳ ಜಯ ಸಾಧಿಸಿತ್ತು. ಗುಜರಾತ್ ಟೈಟಾನ್ಸ್ ಪರ ಹಂಗಾಮಿ ನಾಯಕ ರಶೀದ್ ಖಾನ್ 40 ರನ್ ಬಾರಿಸಿದರೆ, ಡೇವಿಡ್ ಮಿಲ್ಲರ್ ಅಜೇಯ 94 ರನ್ ಚಚ್ಚಿದ್ದರು. 

ಧೋನಿಯೇ ನಾಯಕನಾಗಿದ್ದರೆ, ಗುಜರಾತ್ ಟೈಟಾನ್ಸ್‌ಗೆ ಕಮ್‌ಬ್ಯಾಕ್ ಮಾಡಲು ಅವಕಾಶ ಕೊಡುತ್ತಿರಲಿಲ್ಲ: ಖ್ಯಾತ ಕ್ರಿಕೆಟ್ ವೆಬ್‌ಸೈಟ್‌ ಕ್ರಿಕ್‌ಬಜ್‌ ಜತೆ ಮಾತನಾಡಿದ ಮೈಕೆಲ್ ವಾನ್, ಅಂತಹ ಪರಿಸ್ಥಿತಿಯಲ್ಲಿ ಮಹೇಂದ್ರ ಸಿಂಗ್ ಧೋನಿಯೇ ನಾಯಕನಾಗಿದ್ದರೆ, ಎದುರಾಳಿ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಅವಕಾಶವನ್ನೇ ನೀಡುತ್ತಿರಲಿಲ್ಲ. ಅವರು ತಂತ್ರಗಾರಿಯಲ್ಲಿ ಫೀಲ್ಡಿಂಗ್ ಸೆಟ್‌ ಮಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಿದ್ದರು ಎಂದು ಇಂಗ್ಲೆಂಡ್ ಮಾಜಿ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಹೊಸ ನಾಯಕರಾದ ಮೇಲೆ ಇಂತಹ ಪೈಪೋಟಿಯಿಂದ ಕೂಡಿರುವ ಪಂದ್ಯವನ್ನು ಗೆಲ್ಲಬೇಕು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸೋಲುಂಡ ಆ ಪಂದ್ಯವು ಅಷ್ಟೊಂದು ಟೈಟ್ ಇರಲಿಲ್ಲ. ಅವರು ಏನಿಲ್ಲಾವೆಂದರೂ ಕನಿಷ್ಟ 10 ರಿಂದ 15 ರನ್‌ಗಳ ಅಂತರದಲ್ಲಿ ಆ ಪಂದ್ಯವನ್ನು ಗೆಲ್ಲಬಹುದಿತ್ತು. ಈ ರೀತಿಯ ಪಂದ್ಯವನ್ನು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಸೋತಿದ್ದನ್ನು ಹೆಚ್ಚು ನೋಡಿಲ್ಲ ಎಂದು ಮೈಕೆಲ್ ವಾನ್ ಹೇಳಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅವರೊಬ್ಬ ಕುಶಲ ನಾಯಕರಾಗಿದ್ದರು. ರವೀಂದ್ರ ಜಡೇಜಾ ಕೂಡಾ ಉತ್ತಮ ಆಟಗಾರ, ಒಳ್ಳೆಯ ಕ್ಷೇತ್ರರಕ್ಷಕ. ನೀವು ಈಗ ನಾಯಕನಾಗಿ ಪ್ರಾಥಮಿಕ ಹಂತದಲ್ಲಿರುವುದರಿಂದ ಇಂತಹ ಟೈಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ನಾಯಕತ್ವದ ಮೇಲೆ ಹಿಡಿತ ಸಾಧಿಸಬೇಕು ಎಂದು ರವೀಂದ್ರ ಜಡೇಜಾಗೆ ಕಿವಿ ಮಾತು ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈಗಾಗಲೇ ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದ್ದು, ತನ್ನ ಮುಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ವಿರುದ್ದ ಸೆಣಸಾಡಲಿದೆ. ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಇದುವರೆಗೂ 6 ಪಂದ್ಯಗಳನ್ನಾಡಿ ಒಮ್ಮೆಯೂ ಗೆಲುವಿನ ನಗೆ ಬೀರಿಲ್ಲ. ಒಂದು ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಎದುರು ರೋಹಿತ್ ಪಡೆ ಮುಗ್ಗರಿಸಿದರೆ, ಐಪಿಎಲ್‌ನಲ್ಲಿ ಮೊದಲ ಏಳು ಪಂದ್ಯಗಳನ್ನು ಸೋತ ಮೊದಲ ತಂಡ ಎನ್ನುವ ಕುಖ್ಯಾತಿಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಲಿದೆ.