* ಚೆನ್ನೈ ಸೂಪರ್ ಕಿಂಗ್ಸ್‌ ಪರ ಮಿಂಚುತ್ತಿರುವ ಮಹೀಶ್ ತೀಕ್ಷಣ* ಆರ್‌ಸಿಬಿ ಎದುರಿನ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ತೀಕ್ಷಣ

ಮುಂಬೈ(ಏ.15) : ಮಹೀಶ್ ತೀಕ್ಷಣ. ಈ ಶ್ರೀಲಂಕಾ ಸ್ಪಿನ್ನರ್​ ಜಸ್ಟ್ ಎರಡು ತಿಂಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ವಿಲನ್ ಆಗಿ ಕಾಡಿದ್ದ. 70 ಲಕ್ಷ ಕೊಟ್ಟು ಈ ಮಹೀಶ್​​​ನನ್ನ ಯಾಕಾದ್ರೂ ಖರೀದಿಸಿದ್ವಿ ಅಂತ ಸಿಎಸ್​ಕೆ ಫ್ರಾಂಚೈಸಿಗಳು ತಲೆ ಮೇಲೆ ಕೈ ಹೊತ್ತು ಕೂತಿದ್ದರು. ಆದರೆ ಜಸ್ಟ್​ ಎರಡು ತಿಂಗಳ ನಂತರ ಈಗ ಇದೇ ತೀಕ್ಷಣ, CSK ಪಾಲಿಗೆ ಹೀರೋ ಆಗಿದ್ದಾನೆ. ಸತತ 4 ಸೋಲು ಕಂಡಿದ್ದ CSKಗೆ ಮೊದಲ ಜಯ ತಂದುಕೊಟ್ಟಿದ್ದೇ ಈ ಆಫ್ ಸ್ಪಿನ್ನರ್.

ಮಹೀಶ್ ತೀಕ್ಷಣ ಯಾಕೆ ವಿವಾದಕ್ಕೀಡಾಗಿದ್ದ ಅನ್ನೋದನ್ನ ಹೇಳೋದಕ್ಕೂ ಮುನ್ನ ಆರ್​ಸಿಬಿ ವಿರುದ್ಧ ಅವರ ಬೌಲಿಂಗ್ ಮ್ಯಾಜಿಕ್ ಹೇಗಿತ್ತು ಅಂತ ಹೇಳ್ತಿವಿ ನೋಡಿ. ಆರ್​​ಸಿಬಿ ವಿರುದ್ಧ ಮಹೀಶ್ 4 ಪ್ರಮುಖ ವಿಕೆಟ್ ಪಡೆಯೋ ಮೂಲಕ CSK, 23 ರನ್​ಗಳಿಂದ ಪಂದ್ಯ ಗೆದ್ದು ಗೆಲುವಿನ ಖಾತೆ ತೆರೆದಿದೆ. 4 ವಿಕೆಟ್ ಪಡೆದು ಆರ್​ಸಿಬಿಯ ಬ್ಯಾಟಿಂಗ್ ಲೈನ್ ಅಪ್​ಗೆ ಭಾರಿ ಹೊಡೆತ ನೀಡಿದ್ರು. ಎರಡು ತಿಂಗಳ ಹಿಂದೆ ಟ್ರೋಲ್ ಮಾಡಿದ್ದ CSK ಅಭಿಮಾನಿಗಳೇ ಮೊನ್ನೆ ತೀಕ್ಷಣನನ್ನ ಹಾಡಿ ಹೊಗಳಿ ಅಟ್ಟಕ್ಕೇರಿಸಿದ್ರು.

ಮಹೀಶ್ ತೀಕ್ಷಣ ವಿವಾದಕ್ಕೀಡಾಗಿದ್ದೇಕೆ..?:

ಈ ಬಾರಿಯ ಹರಾಜಿನಲ್ಲಿ CSK ಫ್ರಾಂಚೈಸಿ, ಮಹೀಶ್ ತೀಕ್ಷಣ ಅವರನ್ನು 70 ಲಕ್ಷಗೆ ಖರೀದಿಸಿತ್ತು. ಮಹೀಶ್​ನ್ನ ಬಿಡ್ ಮಾಡಿದ CSK, ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುತ್ತಿದ್ದಂತೆ ಆ ಪೋಸ್ಟಿಗೆ ಹಲವಾರು ತಮಿಳಿಗರು ವಿರೋಧವನ್ನು ವ್ಯಕ್ತಪಡಿಸಿದ್ರು. ಕೂಡಲೇ ತೀಕ್ಷಣ ಅವರನ್ನು ತಂಡದಿಂದ ಡ್ರಾಪ್ ಮಾಡಿ. ಇಲ್ಲದಿದ್ದರೆ ನಿಮ್ಮ ತಂಡವನ್ನು ಬಹಿಷ್ಕರಿಸುತ್ತೇವೆ ಎಂದು CSK ವಿರುದ್ಧ ಆಕ್ರೋಶ ಹೊರಹಾಕಿದ್ದರು. ಯಾಕಂದರೆ 2009ರಲ್ಲಿ LTTE ಉಗ್ರರ ವಿರುದ್ಧ ಲಂಕಾದಲ್ಲಿ ಶ್ರೀಲಂಕಾ ಮಿಲಿಟರಿ ಪಡೆ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಅಲ್ಲಿನ ತಮಿಳು ಜನರನ್ನು ಕ್ರೂರವಾಗಿ ಹಿಂಸಿಸಿತ್ತು ಹಾಗೂ ಹಲವಾರು ತಮಿಳಿಗರ ಜೀವನವನ್ನೇ ಹಾಳು ಮಾಡಿತ್ತು ಎಂಬ ಆರೋಪವಿದೆ. ಹೀಗೆ ತಮ್ಮ ರಾಜ್ಯದ ಜನರ ಜೀವನವನ್ನು ಹಾಳು ಮಾಡಿದಂತಹ ದೇಶದ ಆಟಗಾರನಿಗೆ CSK ಖರೀದಿಸಿರುವುದು ನೀಚ ಕೆಲಸ ಎಂದು ತಮಿಳುನಾಡು ಜನತೆ, ಫ್ರಾಂಚೈಸಿಯ ವಿರುದ್ಧ ತಿರುಗಿ ಬಿದ್ದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಟ್ ಚೆನ್ನೈ ಸೂಪರ್‌ ಕಿಂಗ್ಸ್ ಎಂದು ಟ್ರೆಂಡ್ ಮಾಡಿದ್ದರು.

ಅಂದು ​​ತಲೆ ಬಾಗದ ಸಿಎಸ್​ಕೆ.. ಇಂದು ತಲೆ ಎತ್ತಿ ನಿಂತಿದ್ದೇಗೆ..?:

ಐಪಿಎಲ್​ನಲ್ಲಿ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ತಂಡ ಚೆನ್ನೈ ಸೂಪರ್ ಕಿಂಗ್ಸ್. ವಿಶ್ವಾದ್ಯಂತ CSKಗೆ ಫ್ಯಾನ್ಸ್​ ಇದ್ದಾರೆ. ಅದಕ್ಕೂ ಮಿಗಿಲಾಗಿ ಪ್ರತಿಯೊಬ್ಬ ತಮಿಳ್ ತಲೈವಾ ಸಹ CSK ತಂಡವನ್ನ ಫಾಲೋ ಮಾಡ್ತಾನೆ. ಫ್ರಾಂಚೈಸಿ ತಂಡವಾದ್ರೂ ತಮಿಳುನಾಡಿನ ತಂಡ ಅಂದುಕೊಂಡಿದ್ದಾರೆ ಆ ರಾಜ್ಯದ ಜನ. CSK ಜೊತೆ ಅವಿನಾಭ ಸಂಬಂಧ ಹೊಂದಿರುವ ಜನರೇ, ತಂಡವನ್ನ ಬಾಯ್ಕಟ್ ಮಾಡಿ ಅಂದ್ರೆ ಅವರಿಗೆಷ್ಟು ಸಿಟ್ಟು ಬಂದಿರಬೇಡ ಹೇಳಿ. ತೀಕ್ಷಣ ಅವರನ್ನ CSK ಡ್ರಾಪ್ ಮಾಡುತ್ತೆ ಅನ್ನಲಾಗಿತ್ತು. ಆದ್ರೆ CSK ಇದಕ್ಕೆಲ್ಲಾ ಸೊಪ್ಪು ಹಾಕಲಿಲ್ಲ. ತೀಕ್ಷಣನನ್ನ ಕೈ ಬಿಡಲಿಲ್ಲ. ಈಗ ಆತನೇ CSK ತಂಡವನ್ನ ಕೈ ಹಿಡಿದಿದ್ದಾನೆ. ಮೊದಲ ಜಯಕ್ಕೆ ಕಾರಣನಾಗಿದ್ದಾನೆ.

105 ಕೆಜಿ ತೂಕವನ್ನ 78 ಕೆಜಿಗೆ ಇಳಿಸಿದ್ದೇಗೆ..?:

2018ರ ಅಂಡರ್-19 ವಿಶ್ವಕಪ್​ ತಂಡದಿಂದ ಮಹೀಶ್ ತೀಕ್ಷಣ ಅವರನ್ನ ಡ್ರಾಪ್ ಮಾಡಲಾಗಿತ್ತು. ಅದ್ಭುತ ಬೌಲರ್ ಆದ್ರೂ 105 ಕೆಜಿ ತೂಕವಿದ್ದ ಕಾರಣಕ್ಕೆ ಫಿಟ್ನೆಸ್​ ಕಾರಣ ನೀಡಿ ತೀಕ್ಷಣರನ್ನು ಲಂಕಾ ಜೂನಿಯರ್ ತಂಡದಿಂದ ಕೈಬಿಡಲಾಗಿತ್ತು. ಆದರೆ ಇದನ್ನೇ ಸವಾಲಾಗಿ ಸ್ವೀಕರಿಸಿದ ಯುವ ಮಿಸ್ಟರಿ ಸ್ಪಿನ್ನರ್,​ ಮೂರು ವರ್ಷಗಳ ಬಳಿಕ ಅಂದರೆ 2021ರ ಟಿ20 ವಿಶ್ವಕಪ್ ಆಡಿದ ಲಂಕಾ ತಂಡದಲ್ಲಿ ಸ್ಥಾನ ಪಡೆದ್ರು. ಈಗ ತಮಿಳರ ವಿರೋಧದ ನಡುವೆ ಐಪಿಎಲ್​​ನಲ್ಲೂ ಆಡ್ತಿದ್ದಾರೆ. 105 ಕೆಜಿಯಿಂದ 78 ಕೆಜಿಗೆ ತಮ್ಮ ತೂಕ ಇಳಿಸಿಕೊಂಡಿದ್ದಾರೆ. ಇದಕ್ಕೆ ಹೇಳೋದು ಮನಸ್ಸಿದ್ದರೆ ಮಾರ್ಗ ಅಂತ.