IPL 2022: ಮುಂಬೈ ಎದುರಿನ ಗೆಲುವಿನ ಬೆನ್ನಲ್ಲೇ ಕೆ.ಎಲ್‌. ರಾಹುಲ್‌ಗೆ ದಂಡದ ಬರೆ‌..!

* ಮುಂಬೈ ಇಂಡಿಯನ್ಸ್‌ ಎದುರು ಗೆದ್ದು ಬೀಗಿದ ಲಖನೌ ಸೂಪರ್ ಜೈಂಟ್ಸ್‌

* ಗೆಲುವಿನ ಬೆನ್ನಲ್ಲೇ ಲಖನೌ ಸೂಪರ್ ಜೈಂಟ್ಸ್‌ ತಂಡಕ್ಕೆ ಶಾಕ್‌

* ನಿಧಾನಗತಿ ಬೌಲಿಂಗ್ ಮಾಡಿದ ತಪ್ಪಿಗಾಗಿ ರಾಹುಲ್ ಪಡೆಗೆ ದಂಡದ ಶಿಕ್ಷೆ

IPL 2022 Lucknow Super Giants captain KL Rahul Fined For Slow Over Rate against Mumbai Indians kvn

ಬೆಂಗಳೂರು(ಏ.25): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಎದುರು ಕೆ,ಎಲ್. ರಾಹುಲ್ (KL Rahul) ನೇತೃತ್ವದ ಲಖನೌ ಸೂಪರ್ ಜೈಂಟ್ಸ್‌ (Lucknow Super Giants) ತಂಡವು 36 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ಸಂಭ್ರಮದಲ್ಲಿರುವಾಗಲೇ ಐಪಿಎಲ್ ಆಡಳಿತ ಮಂಡಳಿಯು ಕೆ.ಎಲ್. ರಾಹುಲ್‌ಗೆ ಬಿಗ್ ಶಾಕ್ ನೀಡಿದೆ. 

ಹೌದು, ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ದದ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗಾಗಿ ಲಖನೌ ಸೂಪರ್ ಜೈಂಟ್ಸ್‌ ತಂಡದ ನಾಯಕ ಕೆ.ಎಲ್. ರಾಹುಲ್‌ಗೆ 24 ಲಕ್ಷ ರುಪಾಯಿ ದಂಡ ವಿಧಿಸಿರುವುದಾಗಿ ಐಪಿಎಲ್ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ನಿಧಾನಗತಿಯ ಬೌಲಿಂಗ್ ನಡೆಸುವ ಮೂಲಕ ಎರಡನೇ ಬಾರಿಗೆ ಐಪಿಎಲ್‌ ನೀತಿ ಸಂಹಿತೆ ಉಲ್ಲಂಘಿಸಿದೆ. ಹೀಗಾಗಿ ಲಖನೌ ತಂಡದ ನಾಯಕ ಕೆ.ಎಲ್. ರಾಹುಲ್‌ಗೆ 24 ಲಕ್ಷ ರುಪಾಯಿ ಹಾಗೂ ಮುಂಬೈ ಇಂಡಿಯನ್ಸ್ ಎದುರು ಆಡುವ ಹನ್ನೊಂದರ ಬಳಗದಲ್ಲಿ ಕಣಕ್ಕಿಳಿದಿದ್ದ ಉಳಿದ ಆಟಗಾರರಿಗೆ 6 ಲಕ್ಷ ಅಥವಾ ಪಂದ್ಯದ ಸಂಭಾವನೆಯ 25% ದಂಡ ವಿಧಿಸಲಾಗಿದೆ. 

ಏಪ್ರಿಲ್ 24ರಂದು, ಮುಂಬೈನ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ನಡೆದ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡದ ನಿಧಾನಗತಿಯ ಬೌಲಿಂಗ್ ನಡೆಸುವ ಮೂಲಕ ಐಪಿಎಲ್‌ ನೀತಿ ಸಂಹಿತೆ ಉಲ್ಲಂಘಿಸಿದೆ. ಹೀಗಾಗಿ ಲಖನೌ ನಾಯಕ ಕೆ ಎಲ್ ಹಾಗೂ ಹಾಗೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಉಳಿದ ಆಟಗಾರರಿಗೆ ದಂಡ ವಿಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಖನೌ ಸೂಪರ್ ಜೈಂಟ್ಸ್ ತಂಡವು, ನಾಯಕ ಕೆ.ಎಲ್. ರಾಹುಲ್ ಬಾರಿಸಿದ ಅಜೇಯ (103*) ಶತಕದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 168 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಮತ್ತೊಮ್ಮೆ ಗೆಲುವಿನ ಗುರಿ ತಲುಪಲು ವಿಫಲವಾಯಿತು. ಅಗ್ರಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದಾಗಿ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ 8 ಪಂದ್ಯಗಳನ್ನು ಸೋಲುವ ಮೂಲಕ ಪ್ಲೇ ಆಫ್ ಪ್ರವೇಶದ ಕನಸನ್ನು ಕೈಚೆಲ್ಲಿದೆ.

ಮುಂಬೈ ಇಂಡಿಯನ್ಸ್ ತಂಡದ ಪರ ನಾಯಕ ರೋಹಿತ್ ಶರ್ಮಾ(39), ತಿಲಕ್ ವರ್ಮಾ(38) ಹಾಗೂ ಕೀರನ್ ಪೊಲ್ಲಾರ್ಡ್‌(19) ಎರಡಂಕಿ ಮೊತ್ತ ದಾಖಲಿಸಿದ್ದು ಬಿಟ್ಟರೆ, ಉಳಿದ್ಯಾವ ಆಟಗಾರರು ಸಹ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಲಖನೌ ತಂಡದ ಪರ ಲಂಕಾ ಮೂಲದ ವೇಗಿ ದುಸ್ಮಂತಾ ಚಮೀರಾ ಶಿಸ್ತುಬದ್ದ ಬೌಲಿಂಗ್ ಮೂಲಕ ಗಮನ ಸೆಳೆದರು. ಚಮೀರಾ 4 ಓವರ್‌ ಬೌಲಿಂಗ್ ಮಾಡಿ ಕೇವಲ 14 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ಇನ್ನು ಕೃನಾಲ್ ಪಾಂಡ್ಯ 19 ರನ್ ನೀಡಿ 3 ವಿಕೆಟ್ ಪಡೆದರೆ, ಮೊಯ್ಸಿನ್ ಖಾನ್, ಜೇಸನ್ ಹೋಲ್ಡರ್, ರವಿ ಬಿಷ್ಣೋಯಿ ಹಾಗೂ ಆಯುಷ್ ಬದೋನಿ ತಲಾ ಒಂದೊಂದು ವಿಕೆಟ್ ಪಡೆದರು.

Latest Videos
Follow Us:
Download App:
  • android
  • ios