ಚೆನ್ನೈ ಹಾಗೂ ಪಂಜಾಬ್ ನಡುವಿನ ಲೀಗ್ ಪಂದ್ಯ 60 ರನ್ ಸಿಡಿಸಿದ ಲಿಯಾಮ್ ಲಿವಿಂಗ್‌ಸ್ಟೋನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 181 ರನ್ ಟಾರ್ಗೆಟ್
ಮುಂಬೈ(ಏ.03): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 8 ವಿಕೆಟ್ ನಷ್ಟಕ್ಕೆ 180 ರನ್ ಸಿಡಿಸಿದೆ. ಲಿಯಾಮ್ ಲಿವಿಂಗ್‌ಸ್ಟೋನ್ ಸ್ಫೋಟಕ ಬ್ಯಾಟಿಂಗ್, ಶಿಖರ್ ಧವನ್ ಸಿಡಿಸಿದ 33 ರನ್ ಕಾಣಿಕೆಯಿಂದ ಪಂಜಾಬ್ ಕಿಂಗ್ಸ್ ತಂಡ ಚೆನ್ನೈಗೆ ಬೃಹತ್ ಟಾರ್ಗೆಟ್ ನೀಡುವಲ್ಲಿ ಯಶಸ್ವಿಯಾಗಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಪಡೆಯಲಿಲ್ಲ. ನಾಯಕ ಮಯಾಂಕ್ ಅಗರ್ವಾಲ್ ಕೇವಲ 4 ರನ್ ಸಿಡಿಸಿ ಔಟಾದರು. ಶಿಖರ್ ಧವನ್ ಹೋರಾಟ ಮುಂದುವರಿಸಿದರೆ, ಇತ್ತ ಭಾನುಕ ರಾಜಪಕ್ಸ 9 ರನ್ ಸಿಡಿಸಿ ನಿರ್ಗಮಿಸಿದರು. 14 ರನ್‌ಗಳಿಗೆ ಪಂಜಾಬ್ ಕಿಂಗ್ಸ್ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಶಿಖರ್ ಧವನ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಜೊತೆಯಾಟದಿಂದ ಪಂಜಾಬ್ ಕಿಂಗ್ಸ್ ಚೇತರಿಸಿಕೊಂಡಿತು. ಲಿಯಾಮ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರೆ, ಧವನ್ ಉತ್ತಮ ಸಾಥ್ ನೀಡಿದರು. ಶಿಖರ್ ಧವನ್ 24 ಎಸೆತದಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 33 ರನ್ ಸಿಡಿಸಿ ಔಟಾದರು.
ಲಿಯಾಮ್ ಲಿವಿಂಗ್‌ಸ್ಟೋನ್ 32 ಎಸೆತದಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ 60 ರನ್ ಸಿಡಿಸಿ ಔಟಾದರು. 187.50 ಸ್ಟ್ರೈಕ್ ರೇಟ್‌ನಲ್ಲಿ ಲಿಯಾಮ್ ಬ್ಯಾಟ್ ಬೀಸಿದರು. ತಂಡ ಸೇರಿಕೊಂಡ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅಬ್ಬರಿಸುವ ಸೂಚನೆ ನೀಡಿದರು. ಆದರೆ 17 ಎಸೆತದಲ್ಲಿ 3 ಸಿಕ್ಸರ್ ನೆರವಿನಿಂದ 26 ರನ್ ಸಿಡಿಸಿ ನಿರ್ಗಮಿಸಿದರು.
ಶಾರುಖ್ ಖಾನ್ ಮತ್ತೆ ನಿರಾಸೆ ಅನುಭವಿಸಿದರು. ಕೇವಲ 6 ರನ್ ಸಿಡಿಸಿ ಔಟಾದರು. ಒಡೆನ್ ಸ್ಮಿತ್ 3 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಕಾಗಿಸೋ ರಬಡಾ ಹಾಗೂ ರಾಹುಲ್ ಚಹಾರ್ ಅಬ್ಬರಿಸಲು ಪ್ರಯತ್ನಿಸಿದರು. ಚಹಾರ್ 12 ರನ್ ಸಿಡಿಸಿ ಔಟಾದರು. ರಬಾಡ ಅಜೇಯ 12 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 8 ವಿಕೆಟ್ 180 ನಷ್ಟಕ್ಕೆ ರನ್ ಸಿಡಿಸಿತು.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ಮಯಾಂಕ್ ಅಗರ್ವಾಲ್(ನಾಯಕ), ಶಿಖರ್ ಧವನ್, ಭಾನುಕಾ ರಾಜಪಕ್ಸ, ಲಿಯಾಮ್ ಲಿವಿಂಗ್‌ಸ್ಟೋನ್, ಶಾರುಖ್ ಖಾನ್, ಜಿತೇಶ್ ಶರ್ಮಾ, ಒಡೆನ್ ಸ್ಮಿತ್, ಅರ್ಶದೀಪ್ ಸಿಂಗ್, ಕಾಗಿಸೋ ರಬಡಾ, ರಾಹುಲ್ ಚಹಾರ್, ವೈಭವ್ ಆರೋರ,
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11
ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ಪಪ್ಪ, ಮೊಯಿನ್ ಆಲಿ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ(ನಾಯಕ), ಎಂಎಸ್ ಧೋನಿ, ಶಿವಂ ದುಬೆ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡನ್, ಡ್ವೇನ್ ಪ್ರಿಟೋರಿಯಸ್, ಮುಕೇಶ್ ಚೌಧರಿ
ಐಪಿಎಲ್ ಅಂಕಪಟ್ಟಿ:
ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಪಂಜಾಬ್ ಕಿಂಗ್ಸ್ 7 ಮತ್ತು ಚೆನ್ನೈ ಸೂಪರ್ ಕಿಂಗ್ಸ್ 8ನೇ ಸ್ಥಾನದಲ್ಲಿದೆ. ರಾಜಸ್ಥಾನ ರಾಯಲ್ಸ್ 2 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ ಎರಡನೇ ಸ್ಥಾನದಲ್ಲಿದೆ.ಗುಜರಾತ್ ಟೈಟಾನ್ಸ್ 3, ಡೆಲ್ಲಿ ಕ್ಯಾಪಿಟಲ್ಸ್ 4, ಲಖನೌ ಸೂಪರ್ ಜೈಂಟ್ಸ್ 5, ರಾಯಲ್ ಚಾಲೆಂಜರ್ಸ್ ಬೆಂಗಳೂರು 6ನೇ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ 9 ಹಾಗೂ ಸನ್‌ರೈಸರ್ಸ್ ಹೈದರಾಬಾದ್ 10ನೇ ಸ್ಥಾನದಲ್ಲಿದೆ.
