* ಡೆಲ್ಲಿ ಕ್ಯಾಪಿಟಲ್ಸ್ ಎದುರು ಭರ್ಜರಿ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್* ಡೆಲ್ಲಿ ಗೆಲ್ಲಲು 178 ರನ್‌ಗಳ ಗುರಿ ನೀಡಿದ ಮುಂಬೈ ಇಂಡಿಯನ್ಸ್* 3 ವಿಕೆಟ್ ಕಬಳಿಸಿ ಗಮನ ಸೆಳೆದ ಕುಲ್ದೀಪ್ ಯಾದವ್
ನವಿ ಮುಂಬೈ(ಮಾ.27): 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯ ಮೆಗಾ ಹರಾಜಿನಲ್ಲಿ ಗರಿಷ್ಠ ಮೊತ್ತ(15.25 ಕೋಟಿ ರುಪಾಯಿ)ಕ್ಕೆ ಮುಂಬೈ ಇಂಡಿಯನ್ಸ್ (Mumbai Indians) ಪಾಲಾಗಿದ್ದ ಇಶಾನ್ ಕಿಶನ್, ಮೊದಲ ಪಂದ್ಯದಲ್ಲೇ ಸ್ಪೋಟಕ ಅರ್ಧಶತಕ ಚಚ್ಚುವ ಮೂಲಕ ತಾವೆಷ್ಟು ಉಪಯುಕ್ತ ಬ್ಯಾಟರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿರುವ 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡವು 5 ವಿಕೆಟ್ ಕಳೆದುಕೊಂಡು 177 ರನ್ ಬಾರಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ಗೆ (Delhi Capitals) ಸವಾಲಿನ ಗುರಿ ನೀಡಿದೆ.
ಇಲ್ಲಿನ ಬ್ರೆಬೋನ್ ಮೈದಾನದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲು ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಇಶಾನ್ ಕಿಶನ್ (Ishan Kishan) 67 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ 32 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 41 ರನ್ ಬಾರಿಸಿ ಲೆಗ್‌ಸ್ಪಿನ್ನರ್ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.
ಇನ್ನು ಸೂರ್ಯಕುಮಾರ್ ಯಾದವ್ (Suryakumar Yadav) ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನಗಿಟ್ಟಿಸಿರುವ ಅನ್ಮೋಲ್‌ಪ್ರೀತ್ ಸಿಂಗ್(8) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ತಿಲಕ್ ವರ್ಮಾ 22 ರನ್ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಆದರೆ ತಿಲಕ್ ವರ್ಮಾಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಖಲೀಲ್ ಅಹಮ್ಮದ್ ಅವಕಾಶ ನೀಡಲಿಲ್ಲ. ಇನ್ನು ಕೆರಿಬಿಯನ್ ದೈತ್ಯ ಬ್ಯಾಟರ್ ಕೀರನ್ ಪೊಲ್ಲಾರ್ಡ್ ಬ್ಯಾಟಿಂಗ್ ಕೇವಲ 3 ರನ್‌ಗಳಿಗೆ ಸೀಮಿತವಾಯಿತು. ಪೊಲ್ಲಾರ್ಡ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಕುಲ್ದೀಪ್ ಯಾದವ್‌ಗೆ ಮೂರನೇ ಬಲಿಯಾದರು.
ಅಬ್ಬರಿಸಿದ ಇಶಾನ್ ಕಿಶನ್: ಮಧ್ಯಮ ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್ ತಂಡವು ದಿಢೀರ್ ಕುಸಿತ ಕಂಡಿದ್ದರಿಂದ, ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರ ಕೊಂಚ ಹಿನ್ನಡೆಯಾಗುವ ಆತಂಕ ಎದುರಿಸಿತು. ಆದರೆ ದುಬಾರಿ ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ತಂಡವನ್ನು ಕೂಡಿಕೊಂಡಿರುವ ಇಶಾನ್ ಕಿಶನ್, ಆರಂಭಿಕನಾಗಿ ಮಾತ್ರವಲ್ಲದೇ ಫಿನಿಶರ್ ಆಗಿಯೂ ಗಮನ ಸೆಳೆದರು. ಕಳೆದ ಆವತ್ತಿಯ ಐಪಿಎಲ್ ಟೂರ್ನಿಯ ಕೊನೆಯ ಮೂರು ಪಂದ್ಯಗಳಲ್ಲಿ ಅರ್ಧಶತಕ ಚಚ್ಚಿದ್ದ ಇಶಾನ್ ಕಿಶನ್, ಇದೀಗ ತಮ್ಮ ಹಳೆಯ ಖದರ್ ಅನ್ನು ಮುಂದುವರೆಸಿದ್ದಾರೆ. ಇಶಾನ್ ಕಿಶನ್ 34 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಇಶಾನ್ ಕಿಶನ್ 48 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 81 ರನ್ ಬಾರಿಸಿ ಅಜೇಯರಾಗುಳಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಶಿಸ್ತಿನ ದಾಳಿ ನಡೆಸಿದ ಚೈನಾಮನ್ ಸ್ಪಿನ್ನರ್ ಖ್ಯಾತಿಯ ಕುಲ್ದೀಪ್ ಯಾದವ್ 4 ಓವರ್ ಬೌಲಿಂಗ್ ಮಾಡಿ ಕೇವಲ 18 ರನ್ ನೀಡಿ 3 ವಿಕೆಟ್ ಪಡೆದರೆ, ಖಲೀಲ್ ಅಹಮ್ಮದ್ 2 ವಿಕೆಟ್ ಕಬಳಿಸಿದರು. ಡೆತ್ ಓವರ್ ಸ್ಪೆಷಲಿಸ್ಟ್ ಎಂದು ಗುರುತಿಸಿಕೊಂಡಿದ್ದ ಶಾರ್ದೂಲ್ ಠಾಕೂರ್ ಕೊನೆಯ ಓವರ್‌ನಲ್ಲಿ 18 ರನ್ ನೀಡುವ ಮೂಲಕ ಸಾಕಷ್ಟು ದುಬಾರಿ ಎನಿಸಿದರು.
ಸಂಕ್ಷಿಪ್ತ ಸ್ಕೋರ್
ಮುಂಬೈ ಇಂಡಿಯನ್ಸ್: 176
ಇಶಾನ್ ಕಿಶನ್: 81*
ರೋಹಿತ್ ಶರ್ಮಾ: 41
ಕುಲ್ದೀಪ್: 18/3
(* ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)
