ಆರಂಭಿಕ ಆಟಗಾರ ಅಭಿಷೇಕ್ ವರ್ಮ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಏಡೆನ್ ಮಾರ್ಕ್ರಮ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ದೊಡ್ಡ ಮೊತ್ತ ಕಲೆಹಾಕಲು ಯಶಸ್ವಿಯಾಗಿದೆ.
ಮುಂಬೈ (ಏ.27): ಸತತ ಐದು ಪಂದ್ಯಗಳ ಗೆಲುವಿನ ನಾಗಾಲೋಟದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಗುಜರಾತ್ ಟೈಟಾನ್ಸ್ (Gujarat Titans) ತಂಡದ ಗೆಲುವಿಗೆ ದೊಡ್ಡ ಮೊತ್ತದ ಗುರಿ ನೀಡಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ (SRH) ತಂಡ, ಅಭಿಷೇಕ್ ವರ್ಮ (65ರನ್, 42 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಏಡೆನ್ ಮಾರ್ಕ್ರಮ್ (56ರನ್, 40 ಎಸೆತ, 2 ಬೌಂಡರಿ, 3 ಸಿಕ್ಸರ್) ಅವರ ಅದ್ಭುತ ಅರ್ಧಶತಕಗಳ ಮೂಲಕ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ. ಆರಂಭದಲ್ಲಿ ಮೊಹಮದ್ ಶಮಿ (Mohammed Shami) ಘಾತಕ ಬೌಲಿಂಗ್ ದಾಳಿಯ ನಡುವೆಯೂ ಸನ್ ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್ ಗೆ 195 ರನ್ ಪೇರಿಸಿದೆ.
ಬ್ಯಾಟಿಂಗ್ ಆರಂಭಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. 44 ರನ್ ಗಳಿಸುವ ವೇಳೆಗೆ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಉತ್ತಮ ಫಾರ್ಮ್ ನಲ್ಲಿದ್ದ ರಾಹುಲ್ ತ್ರಿಪಾಠಿ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಯುವ ಬ್ಯಾಟ್ಸ್ ಮನ್ ಅಭಿಷೇಕ್ ಶರ್ಮ, ಮೊಹದಮ್ ಶಮಿ ಅವರ ಘಾತಕ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸದರೆ, ಕೇನ್ ವಿಲಿಯಮ್ಸನ್ ಮಾತ್ರ ಚೆಂಡನ್ನು ಎದುರಿಸಲು ತಡಕಾಡಿದರು. ಹೊಸ ಚೆಂಡಿನ ದಾಳಿಯಲ್ಲಿ ಅಕ್ಷರಶಃ ಬೆಂಕಿಯಾಗಿದ್ದ ಮೊಹಮದ್ ಶಮಿ, 3ನೇ ಓವರ್ ನಲ್ಲಿ ವಿಲಿಯಮ್ಸನ್ ಅವರ ವಿಕೆಟ್ ಅನ್ನು ಉರುಳಿಸಿದರು. ಈ ವೇಳೆ ಸನ್ ರೈಸರ್ಸ್ ಹೈದಾರಾಬಾದ್ ತಂಡ 26 ರನ್ ಬಾರಿಸಿತ್ತು. ಕೇನ್ ವಿಲಿಯಮ್ಸನ್ 8 ಎಸೆತಗಳಲ್ಲಿ 1 ಬೌಂಡರಿ ಇದ್ದ 5 ರನ್ ಬಾರಿಸಿ ಔಟಾದರು.
ಆ ನಂತರ ಅಭಿಷೇಕ್ ವರ್ಮಗೆ ಜೊತೆಯಾದ ರಾಹುಲ್ ತ್ರಿಪಾಠಿ ಆರಂಭದಲ್ಲಿಯೇ ಜೀವದಾನ ಪಡೆದುಕೊಂಡರು. ರಶೀದ್ ಖಾನ್, ತ್ರಿಪಾಠಿ ಅವರ ಕ್ಯಾಚ್ ಅನ್ನು ಕೈಚೆಲ್ಲಿದರೂ ಇದರ ಲಾಭವನ್ನು ಪಡೆದುಕೊಳ್ಳಲು ತ್ರಿಪಾಠಿ ವಿಫಲರಾದರು. ಎದುರಿಸಿದ 10 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಇದ್ದ 16 ರನ್ ಬಾರಿಸಿದ್ದ ರಾಹುಲ್ ತ್ರಿಪಾಠಿ (Rahul Tripati) 5ನೇ ಓವರ್ ನ ಕೊನೆಯ ಎಸೆತದಲ್ಲಿ ಮೊಹಮದ್ ಶಮಿಗೆ ಎಲ್ ಬಿಯಾಗಿ ಹೊರನಡೆದರು. ತ್ರಿಪಾಠಿ ಬಾರಿಸಿದ ಈ ಮೂರೂ ಬೌಂಡರಿಗಳು ಶಮಿ ಎಸೆತದಲ್ಲೇ ಬಂದಿದ್ದವು.
ಪವರ್ ಪ್ಲೇ ಮುಕ್ತಾಯಕ್ಕೂ ಮುನ್ನವೇ ಎರಡು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮೂರನೇ ವಿಕೆಟ್ ಗೆ ಅಭಿಷೇಕ್ ವರ್ಮ ಹಾಗೂ ಏಡೆನ್ ಮಾರ್ಕ್ರಮ್ ಆಧಾರವಾದರು. 104 ರನ್ ಗಳ ಅದ್ಭುತ ಜೊತೆಯಾಟವನ್ನು ಈ ಜೋಡಿ ಮೂರನೇ ವಿಕೆಟ್ ಗೆ ಆಡಿತು. ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮೂಲಕ ತಂಡವನ್ನು ಆಧರಿಸಲು ಪ್ರಯತ್ನಿಸಿದ ಅಭಿಷೇಕ್ ವರ್ಮ ಓವರ್ ಗಳು ಕಳೆದಂತೆ ಗುಜರಾತ್ ತಂಡದ ಎಲ್ಲಾ ಬೌಲರ್ ಗಳನ್ನು ದಂಡಿಸಿದರು. ಅದರಲ್ಲೂ ಪ್ರಮುಖವಾಗಿ ರಶೀದ್ ಖಾನ್ ಅವರ ಎಸೆತಗಳನ್ನು ಬೌಂಡರಿ ಕಡೆಗೆ ಅಟ್ಟುವ ಮೂಲಕ ಕೇವಲ 33 ಎಸೆತಗಲ್ಲಿ ತಮ್ಮ ಅರ್ಧಶತಕ ಪೂರೈಸಿದರು.
ರಶೀದ್ ಅವರ ಎಸೆತದಲ್ಲಿ ಅಭಿಷೇಕ್ ಶರ್ಮ ಮೂರು ಸಿಕ್ಸರ್ ಹಾಗೂ 1 ಬೌಂಡರಿಗಳನ್ನು ಸಿಡಿಸಿದರು. 15 ಓವರ್ ಗಳಲ್ಲಿ 2 ವಿಕೆಟ್ ಗೆ 140 ರನ್ ಬಾರಿಸಿದ್ದ ಹಂತದಲ್ಲಿ 42 ಎಸೆತಗಳಲ್ಲಿ 6 ಬೌಂಡರಿ ಹಾಗೂ ಮೂರು ಸಿಕ್ಸರ್ ಗಳೊಂದಿಗೆ 65 ರನ್ ಬಾರಿಸಿದ್ದ ಅಭಿಷೇಕ್ ಶರ್ಮ, ಅಲ್ಜಾರಿ ಜೋಸೆಫ್ ಗೆ ಔಟಾದರು.
ಆ ಬಳಿಕ ಸನ್ ರೈಸರ್ಸ್ ತಂಡ ರನ್ ಏರಿಸುವ ಇರಾದೆಯಲ್ಲಿ ಕೆಲ ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡಿತು. ಸ್ಫೋಟಕ ಆಟಗಾರ ನಿಕೋಲಸ್ ಪೂರನ್ (3) ಹಾಗೂ ವಾಷಿಂಗ್ಟನ್ ಸುಂದರ್ (3) ಅವರಿಂದ ಹೆಚ್ಚಿನ ಕಾಣಿಕೆ ಬರಲಿಲ್ಲ. 40 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೊಂದಿಗೆ 56 ರನ್ ಬಾರಿಸಿದ್ದ ಏಡೆನ್ ಮಾರ್ಕ್ರಮ್ 18ನೇ ಓವರ್ ನ ಕೊನೆಯ ಎಸೆತದಲ್ಲಿ ಔಟಾಗಿದ್ದು ಸನ್ ರೈಸರ್ಸ್ ತಂಡದ ಹಿನ್ನಡೆಗೆ ಕಾರಣವಾಯಿತು.
ದುಬಾರಿಯಾದ ರಶೀದ್: ರಶೀದ್ ಖಾನ್ ತಮ್ಮ ನಾಲ್ಕು ಓವರ್ ಗಳ ಕೋಟಾದಲ್ಲಿ 45 ರನ್ ನೀಡಿದರು. ಆ ಮೂಲಕ ಐಪಿಎಲ್ ನಲ್ಲಿ ತಮ್ಮ ಮೂರನೇ ಅತ್ಯಂತ ದುಬಾರಿ ಓವರ್ ಅನ್ನು ರಶೀದ್ ಖಾನ್ ಎಸೆದಂತಾಗಿದೆ.
