Asianet Suvarna News Asianet Suvarna News

IPL 2022: ಅಹಮದಾಬಾದ್ ಕೋಚ್‌ಗಳಾಗಿ ಗ್ಯಾರಿ ಕರ್ಸ್ಟನ್‌, ಆಶಿಶ್ ನೆಹ್ರಾ ನೇಮಕ..?

* 2022ರ ಐಪಿಎಲ್‌ ಟೂರ್ನಿಗೆ ಸಿದ್ದತೆಗಳು ಆರಂಭ

* ಅಹಮದಾಬಾದ್ ತಂಡಕ್ಕೆ ಗ್ಯಾರಿ ಕರ್ಸ್ಟನ್‌ ಕೋಚ್ ಆಗುವ ಸಾಧ್ಯತೆ

* ಕೋಚ್ ಆಗಿ ಅಪಾರ ಅನುಭವ ಹೊಂದಿರುವ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ

IPL 2022 Gary Kirsten Ashish Nehra likely to be part of Ahmedabad coaching staff Says Report kvn
Author
Bengaluru, First Published Dec 27, 2021, 6:00 PM IST

ಬೆಂಗಳೂರು(ಡಿ.27): ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಗ್ಯಾರಿ ಕರ್ಸ್ಟನ್‌ (Gary Kirsten) ಅತ್ಯಂತ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಗ್ಯಾರಿ ಕರ್ಸ್ಟನ್‌ ಐಪಿಎಲ್‌ನಲ್ಲಿ ಕೋಚ್‌ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಮೊದಲು ಗುರು ಗ್ಯಾರಿ, ಡೆಲ್ಲಿ ಡೇರ್‌ಡೆವಿಲ್ಸ್‌(ಈಗ ಡೆಲ್ಲಿ ಕ್ಯಾಪಿಟಲ್ಸ್) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್‌ ಆಗಿದ್ದರು. ಇದೀಗ ಐಪಿಎಲ್‌ನ ಹೊಸ ತಂಡವಾದ ಅಹಮದಾಬಾದ್ ತಂಡಕ್ಕೆ (Ahmedabad Franchise) ಗ್ಯಾರಿ ಕೋಚ್ ಆಗುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿದೆ. 

ಪ್ರಮುಖ ಕ್ರೀಡಾ ವೆಬ್‌ಸೈಟ್ ಕ್ರಿಕ್‌ಬಜ್ ವರದಿಯ ಪ್ರಕಾರ, ಟೀಂ ಇಂಡಿಯಾ(Team India) ಮಾಜಿ ಹೆಡ್ ಕೋಚ್‌ ಗ್ಯಾರಿ ಕರ್ಸ್ಟನ್‌ ಐಪಿಎಲ್‌ನ (IPL) ಹೊಸ ತಂಡವಾದ ಅಹಮದಾಬಾದ್ ತಂಡಕ್ಕೆ ಪ್ರಧಾನ ಕೋಚ್‌ ರೇಸ್‌ನಲ್ಲಿ ಸಾಕಷ್ಟು ಮುಂದಿದ್ದಾರೆ. ಇದರ ಜತೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ(Ashish Nehra) ಕೂಡಾ ಕೋಚ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ. ಬಹಳ ಮುಖ್ಯ ವಿಚಾರವೆಂದರೆ, ಈ ಇಬ್ಬರು ಈ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್‌ಗಳಾಗಿ ಕಾಣಿಸಿಕೊಂಡಿದ್ದರು. ಗ್ಯಾರಿ ಕರ್ಸ್ಟನ್‌ ಅವರ ಮಾರ್ಗದರ್ಶನದಲ್ಲಿ ಮಹೇಂದ್ರ ಸಿಂಗ್ ಧೋನಿ(MS Dhoni) ನೇತೃತ್ವದ ಟೀಂ ಇಂಡಿಯಾವು 2011ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಈ ಮೂಲಕ ಬರೋಬ್ಬರಿ 28 ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡವು ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು ಎನ್ನುವುದು ಗಮನಾರ್ಹ.

ಸಿವಿಸಿ ಒಡೆತನದ ಅಹಮದಾಬಾದ್ ಫ್ರಾಂಚೈಸಿಯು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ವಿಕ್ರಂ ಸೋಲಂಕಿ ಅವರನ್ನು ಸಹ ಸಹಾಯಕ ಕೋಚ್ ಸಿಬ್ಬಂದಿಯಾಗಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ. ಈ ಮೊದಲು ಸಿವಿಸಿ ಒಡೆತನದ ಅಹಮದಾಬಾದ್ ಫ್ರಾಂಚೈಸಿಯು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿಯನ್ನು ಹೆಡ್‌ ಕೋಚ್‌ ಆಗಿ ನೇಮಕ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು.

ಈಗಾಗಲೇ ಡಾ. ಸಂಜೀವ್ ಗೋಯೆಂಕಾ ಒಡೆತನದ ಲಖನೌ ಫ್ರಾಂಚೈಸಿಯು, ಜಿಂಜಾಬ್ವೆಯ ಆ್ಯಂಡಿ ಫ್ಲವರ್ ಅವರನ್ನು ಪ್ರಧಾನ ಕೋಚ್ ಆಗಿ ನೇಮಿಸಿಕೊಂಡಿದೆ. ಇನ್ನು ಗೌತಮ್ ಗಂಭೀರ್(Gautam Gambhir) ಅಹಮದಾಬಾದ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. 

ಅಹಮದಾಬಾದ್‌ ತಂಡಕ್ಕೆ ಬಿಸಿಸಿಐ ಗ್ರೀನ್ ಸಿಗ್ನಲ್‌

2022ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈಗಿರುವ 8 ತಂಡಗಳ ಜತೆಗೆ ಹೊಸದಾಗಿ ಲಖನೌ ಹಾಗೂ ಅಹಮದಾಬಾದ್‌ ತಂಡಗಳು ಸೇರ್ಪಡೆಯಾಗಿವೆ. ಸಿವಿಸಿ ಕ್ಯಾಪಿಟಲ್ ಒಡೆತನದ ಫ್ರಾಂಚೈಸಿಯು ಬರೋಬ್ಬರಿ 5,625 ಕೋಟಿ ರುಪಾಯಿ ನೀಡಿ ಅಹಮದಾಬಾದ್ ತಂಡವನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು. ಮೆಗಾ ಹರಾಜಿಗೂ ಅಹಮದಾಬಾದ್ ಫ್ರಾಂಚೈಸಿಗೆ ಸಂಕಷ್ಟವೊಂದು ಎದುರಾಗಿತ್ತು.

Breaking News: ಆಟಗಾರರ ಹರಾಜಿನ ಡೇಟ್‌ ಫಿಕ್ಸ್‌, ಬೆಂಗಳೂರಲ್ಲೇ ನಡೆಯಲಿದೆ IPL Auction 2022

ಸಿವಿಸಿ ಕ್ಯಾಪಿಟಲ್ಸ್ ಸಂಸ್ಥೆಯು ಬೆಟ್ಟಿಂಗ್ ಸಂಸ್ಥೆಯೊಂದರಲ್ಲಿ ಹೂಡಿಕೆ ಮಾಡಿದೆ ಎಂದು ವರದಿಯಾಗಿತ್ತು. ಹೀಗಾಗಿ ಈ ಕುರಿತಂತೆ ಬಿಸಿಸಿಐ ತನಿಖೆ ಆರಂಭಿಸಿತ್ತು. ಸಿವಿಸಿ ಕ್ಯಾಪಿಟಲ್ಸ್ ಸಂಸ್ಥೆಯು ಏಷ್ಯಾದಲ್ಲಿ ಸಂಪಾದನೆ ಮಾಡಿದ ಹಣದಲ್ಲಿ ಅಹಮದಾಬಾದ್ ತಂಡವನ್ನು ಖರೀದಿಸಿದೆ ಎಂದು ಖಚಿತವಾದ ಬೆನ್ನಲ್ಲೇ ಅಹಮದಾಬಾದ್ ತಂಡಕ್ಕೆ ಗ್ರೀನ್‌ ಸಿಗ್ನಲ್ ನೀಡಲು ಬಿಸಿಸಿಐ ತೀರ್ಮಾನಿಸಿದೆ ಎಂದು ವರದಿಯಾಗಿದೆ.

15ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಫೆಬ್ರವರಿ 2ನೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಆದರೆ ಬಿಸಿಸಿಐ ಈ ಕುರಿತಂತೆ ಯಾವುದೇ ಮಾಹಿತಿಯನ್ನು ನೀಡಿಲ್ಲ.
 

Follow Us:
Download App:
  • android
  • ios