* ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್-ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿ* ಹೈವೋಲ್ಟೇಜ್ ಪಂದ್ಯಕ್ಕೆ ಮುಂಬೈನ ವಾಂಖೆಡೆ ಮೈದಾನ ಆತಿಥ್ಯ* ಕಳೆದ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಕೆಕೆಆರ್..?
ಬೆಂಗಳೂರು(ಮಾ.26): ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) ಟೂರ್ನಿ ಆರಂಭಕ್ಕೆ ಕೆಲವೇ ಕ್ಷಣಗಳು ಭಾಕಿ ಉಳಿದಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಕಳೆದ ಆವೃತ್ತಿಯ ರನ್ನರ್ ಅಪ್ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡಗಳು ಕಣಕ್ಕಿಳಿಯುವುದರೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ.
ಕಳೆದ ಆವೃತ್ತಿಯ ಐಪಿಎಲ್ ಫೈನಲ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು, ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಕೆಕೆಆರ್ ತಂಡದ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಈ ಬಾರಿ ಉಭಯ ತಂಡಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಎರಡು ತಂಡಗಳಿಗೂ ಹೊಸ ನಾಯಕರಿಗೆ ಪಟ್ಟ ಕಟ್ಟಲಾಗಿದೆ. ಐಪಿಎಲ್ ಟೂರ್ನಿ ಆರಂಭಕ್ಕೆ ಕೇವಲ ಎರಡು ದಿನಗಳು ಬಾಕಿ ಇದ್ದಾಗ, ಧೋನಿ ತಮ್ಮ ನಾಯಕ ಸ್ಥಾನದಿಂದ ಕೆಳಗಿಳಿದಿದ್ದು, ರವೀಂದ್ರ ಜಡೇಜಾಗೆ(Ravindr Jadeja) ಸಿಎಸ್‌ಕೆ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನೊಂದೆಡೆ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲೂ ಬದಲಾವಣೆಯಾಗಿದ್ದು, ಶ್ರೇಯಸ್ ಅಯ್ಯರ್(Shreyas Iyer) ಕೆಕೆಆರ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಇನ್ನು ಎರಡು ತಂಡಗಳ ಪಾಲಿಗೆ ಈ ಪಂದ್ಯದಲ್ಲಿ ಸ್ಟಾರ್ ವಿದೇಶಿ ಆಟಗಾರರ ಕೊರತೆ ಕಾಡುವ ಸಾಧ್ಯತೆಯಿದೆ. ಚೆನ್ನೈ ತಂಡವು ಸ್ಟಾರ್ ಆಲ್ರೌಂಡರ್ ಮೋಯಿನ್ ಅಲಿಯವರ ಸೇವೆಯಿಂದ ವಂಚಿತವಾಗಿದೆ. ಇನ್ನೊಂದೆಡೆ ಕೋಲ್ಕತಾ ನೈಟ್ ರೈಡರ್ಸ್ ತಂಡವು ಆರಂಭಿಕ ಕೆಲ ಪಂದ್ಯಗಳಿಗೆ ಪ್ಯಾಟ್ ಕಮಿನ್ಸ್ ಹಾಗೂ ಆರೋನ್ ಫಿಂಚ್ ಅವರ ಅನುಪಸ್ಥಿತಿಯನ್ನು ಎದುರಿಸಲಿದೆ.
ಪಿಚ್ ರಿಪೋರ್ಟ್: ವಾಂಖೆಡೆ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದರೂ ಸಹಾ, ವೇಗಿಗಳಿಗೆ ನೆರವಾಗುವ ಸಾಧ್ಯತೆ ಹೆಚ್ಚಿದೆ. ಎರಡೂ ತಂಡಗಳಲ್ಲೂ ಸ್ಪೋಟಕ ಬ್ಯಾಟರ್‌ಗಳಿರುವುದರಿಂದ ಮೊದಲ ಪಂದ್ಯದಲ್ಲೇ ರನ್ ಮಳೆ ಹರಿಯುವ ಸಾಧ್ಯತೆಯಿದೆ. ಪವರ್ ಪ್ಲೇನಲ್ಲಿ ತಂಡವು ಗಳಿಸುವ ರನ್ ಆಧಾರದಲ್ಲಿ ಪಂದ್ಯದ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆಯಿದೆ. ಈ ಪಿಚ್‌ನಲ್ಲಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು.
ಮೊದಲ ಪಂದ್ಯಕ್ಕೆ ಸಂಭಾವ್ಯ ತಂಡ ಹೀಗಿದೆ ನೋಡಿ
ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್‌ವೇ, ಋತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ(ನಾಯಕ), ಮಹೇಂದ್ರ ಸಿಂಗ್ ಧೋನಿ(ವಿಕೆಟ್ ಕೀಪರ್), ಮಹೀಶ್ ತೀಕ್ಷಣ, ಡ್ವೇನ್ ಬ್ರಾವೋ, ತುಷಾರ್ ದೇಶಪಾಂಡೆ, ಆಡಂ ಮಿಲ್ನೆ.
ಕೋಲ್ಕತಾ ನೈಟ್ ರೈಡರ್ಸ್: ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್(ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್(ವಿಕೆಟ್ ಕೀಪರ್), ಆಂಡ್ರೆ ರಸೆಲ್, ಚಮಿಕಾ ಕರುಣಾರತ್ನೆ, ಸುನಿಲ್ ನರೈನ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಉಮೇಶ್ ಯಾದವ್.
ಇಂದಿನ ಪಂದ್ಯವನ್ನು ಕೋಲ್ಕತ ನೈಟ್ ರೈಡರ್ಸ್ ಗೆಲ್ಲುವ ಸಾಧ್ಯತೆ: ಟಿ20 ಸ್ಪೆಷಲಿಸ್ಟ್ ಬ್ಯಾಟರ್ ಹಾಗೂ ಆಲ್ರೌಂಡರ್‌ಗಳ ದಂಡನ್ನೇ ಹೊಂದಿರುವ ಕೆಕೆಆರ್ ತಂಡವು ಮೊದಲ ಪಂದ್ಯದಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚು. ಪವರ್ ಪ್ಲೇನಲ್ಲಿ 50+ ರನ್ ಬಾರಿಸಿದರೆ, ಆ ಬಳಿಕ ದೊಡ್ಡ ಮೊತ್ತ ಕಲೆಹಾಕಬಲ್ಲ ಬ್ಯಾಟರ್‌ಗಳ ಬಲ ಕೆಕೆಆರ್‌ಗಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಕೆಕೆಆರ್ ಸೇಡು ತೀರಿಸಿಕೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
