* ಚೆನ್ನೈ ಎದುರು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್* ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ 2 ಮಹತ್ವದ ಬದಲಾವಣೆ* ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಒಂದು ಬದಲಾವಣೆ

ನವಿ ಮುಂಬೈ(ಮೇ.08): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 55ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಭ್ ಪಂತ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಪಂದ್ಯಕ್ಕೆ ಇಲ್ಲಿನ ಡಿವೈ ಪಾಟೀಲ್ ಅಕಾಡೆಮಿ ಮೈದಾನ ಆತಿಥ್ಯವನ್ನು ವಹಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಎರಡು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, ಮನ್ದೀಪ್ ಸಿಂಗ್ ಬದಲಿಗೆ ಕೆ ಎಸ್ ಭರತ್ ತಂಡ ಕೂಡಿಕೊಂಡಿದ್ದಾರೆ, ಇನ್ನು ಲಲಿತ್ ಯಾದವ್ ಬದಲಿಗೆ ಅಕ್ಷರ್ ಪಟೇಲ್ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ರವೀಂದ್ರ ಜಡೇಜಾ ಬದಲಿಗೆ ಶಿವಂ ದುಬೆ ತಂಡ ಕೂಡಿಕೊಂಡಿದ್ದಾರೆ.

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೂ ಮುನ್ನ ಪ್ಲೇ ಆಫ್‌ ಪ್ರವೇಶಿಸಬಲ್ಲ ನೆಚ್ಚಿನ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಮುಂಚೂಣಿಯಲ್ಲಿದ್ದವು. ಆದರೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಈಗಾಗಲೇ ಬಹುತೇಕ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇ ಆಫ್‌ಗೆ ಸ್ಥಾನ ಖಚಿತಪಡಿಸಿಕೊಳ್ಳಲು ಪರದಾಡುತ್ತಿದೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡವು 10 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 5 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 10 ಪಂದ್ಯಗಳನ್ನಾಡಿ 3 ಗೆಲುವು ಹಾಗೂ 7 ಸೋಲುಗಳೊಂದಿಗೆ 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ

ತಂಡಗಳು ಹೀಗಿವೆ ನೋಡಿ

ಡೆಲ್ಲಿ ಕ್ಯಾಪಿಟಲ್ಸ್‌:
ಡೇವಿಡ್ ವಾರ್ನರ್‌, ಕೆ ಎಸ್ ಭರತ್, ಮಿಚೆಲ್ ಮಾರ್ಷ್‌, ರಿಷಭ್ ಪಂತ್, ರೋಮನ್ ಪೊವೆಲ್, ರಿಪಾಲ್ ಪಟೇಲ್‌, ಅಕ್ಷರ್ ಪಟೇಲ್‌, ಶಾರ್ದೂಲ್‌ ಠಾಕೂರ್, ಏನ್ರಿಚ್ ನೊಕಿಯಾ, ಕುಲ್ದೀಪ್ ಯಾದವ್, ಖಲೀಲ್‌ ಯಾದವ್.

ಚೆನ್ನೈ ಸೂಪರ್ ಕಿಂಗ್ಸ್‌:
ಋತುರಾಜ್ ಗಾಯಕ್ವಾಡ್‌, ಡೆವೊನ್ ಕಾನ್‌ವೇ, ಮೋಯಿನ್ ಅಲಿ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಶಿವಂ ದುಬೆ, ಎಂ ಎಸ್ ಧೋನಿ, ಡ್ವೇನ್ ಪ್ರಿಟೋರಿಯಸ್, ಸಿಮರ್‌ಜಿತ್ ಸಿಂಗ್, ಮಹೀಶ್ ತೀಕ್ಷಣ, ಮುಕೇಶ್ ಚೌಧರಿ.

ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್‌ ಸ್ಟೇಡಿಯಂ, 
ಪಂದ್ಯ: ಸಂಜೆ 7.30ಕ್ಕೆ, 
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌