* ಮುಂಬೈ ಎದುರು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ* ಉಭಯ ತಂಡಗಳಲ್ಲೂ ಮಹತ್ವದ ಬದಲಾವಣೆ* ಡೆಲ್ಲಿ ಪರ ಪಾದಾರ್ಪಣೆ ಮಾಡಿದ ಶಾರ್ದೂಲ್ ಠಾಕೂರ್
ಮುಂಬೈ(ಮಾ.27): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಇದೀಗ ಉಭಯ ತಂಡಗಳು ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಲು ಎದುರು ನೋಡುತ್ತಿವೆ. ಉಭಯ ತಂಡಗಳ ಪರ ಕೆಲ ಕ್ರಿಕೆಟಿಗರು ಪಾದಾರ್ಪಣೆ ಮಾಡಿದ್ದಾರೆ.
ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಬ್ರೆಬೋರ್ನ್ ಮೈದಾನ ಆತಿಥ್ಯವನ್ನು ವಹಿಸಿದೆ. ಟೀಂ ಇಂಡಿಯಾದ ಎಲ್ಲಾ ಮಾದರಿಯ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾಗೆ ಭವಿಷ್ಯದ ನಾಯಕ ಎಂದೇ ಕರೆಸಿಕೊಳ್ಳುವ ರಿಷಬ್ ಪಂತ್ ಸವಾಲು ಎದುರಾಗಲಿದೆ. 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಪರ ಮೊದಲ ಪಂದ್ಯದಲ್ಲೇ ತಿಲಕ್ ವರ್ಮಾ, ಟಿಮ್ ಡೇವಿಡ್, ಮುರುಗನ್ ಅಶ್ವಿನ್, ಡೇನಿಯಲ್ ಸ್ಯಾಮ್ಸ್, ಬಾಸಿಲ್ ಥಂಪಿ ಹಾಗೂ ಟೈಮಲ್ ಮಿಲ್ಸ್ ಪಾದಾರ್ಪಣೆ ಮಾಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ನಂಬಿಗಸ್ಥ ಬ್ಯಾಟರ್ ಸೂರ್ಯಕುಮಾರ್ ಕುಮಾರ್ (Suryakumar Yadav) ಯಾದವ್ ಅನುಪಸ್ಥಿತಿಯಲ್ಲಿ ಅನ್‌ಮೋಲ್‌ಪ್ರೀತ್ ಸಿಂಗ್ ಹಾಗೂ ತಿಲಕ್ ವರ್ಮಾ ಯಾವ ರೀತಿಯ ಪ್ರದರ್ಶನ ತೋರಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಇದರ ಜತೆಗೆ ಸಿಂಗಾಪುರ ಮೂಲದ ಸ್ಪೋಟಕ ಬ್ಯಾಟರ್ ಟಿಮ್ ಡೇವಿಡ್ ಮೇಲೆ ಕೂಡಾ ಹೆಚ್ಚಿನ ನಿರೀಕ್ಷೆಯನ್ನು ಇಡಲಾಗಿದೆ. ಬಿಗ್‌ಬ್ಯಾಶ್ ಲೀಗ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿರುವ ಟೈಮಲ್ ಮಿಲ್ಸ್ ಹಾಗೂ ಡೇನಿಯಲ್ ಸ್ಯಾಮ್ಸ್ ಕೂಡಾ ಐಪಿಎಲ್‌ನಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ ಇಬ್ಬರು ವಿದೇಶಿ ಅಟಗಾರರೊಂದಿಗೆ ಕಣಕ್ಕಿಳಿಯುತ್ತಿದ್ದು, ಟಿಮ್ ಸೈಫರ್ಟ್ (Tim Seifert) ಹಾಗೂ ರೋಮನ್ ಪೋವೆಲ್ (Rovman Powell) ಡೆಲ್ಲಿ ಪರ ಕಣಕ್ಕಿಳಿಯುತ್ತಿರುವ ವಿದೇಶಿ ಆಟಗಾರರೆನಿಸಿದ್ದಾರೆ. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಏನ್ರಿಚ್ ನೋಕಿಯ (Anrich Nortje) ಸದ್ಯ ಕ್ವಾರಂಟೈನ್‌ನಲ್ಲಿದ್ದು, ಮೊದಲ ಪಂದ್ಯದ ಆಯ್ಕೆಗೆ ಅಲಭ್ಯರಾಗಿದ್ದಾರೆ. ಇದೇ ರೀತಿ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್(David Warner) ಕೂಡಾ, ಪಾಕಿಸ್ತಾನ ಪ್ರವಾಸದಲ್ಲಿರುವುದರಿಂದ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 30 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಎರಡೂ ತಂಡಗಳು ಬಹುತೇಕ ಸಮಬಲದ ಪ್ರದರ್ಶನ ತೋರಿವೆ. 30 ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ ತಂಡವು 16 ಬಾರಿ ಗೆಲುವು ದಾಖಲಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 14 ಬಾರಿ ಗೆಲುವಿನ ರುಚಿ ಕಂಡಿದೆ. ಎರಡೂ ತಂಡಗಳು ಸ್ಪೋಟಕ ಬ್ಯಾಟರ್‌ಗಳನ್ನು ಹೊಂದಿದ್ದು, ರನ್ ಮಳೆ ಹರಿಯುವ ಸಾಧ್ಯತೆಯಿದೆ.
ತಂಡಗಳು ಹೀಗಿವೆ ನೋಡಿ
ಮುಂಬೈ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ತಿಲಕ್ ವರ್ಮಾ, ಅನ್ಮೋಲ್‌ಪ್ರೀತ್ ಸಿಂಗ್, ಕೀರನ್ ಪೊಲ್ಲಾರ್ಡ್, ಟಿಮ್ ಡೇವಿಡ್, ಡೇನಿಯಲ್ ಸ್ಯಾಮ್ಸ್, ಮುರುಗನ್ ಅಶ್ವಿನ್, ಟೈಮಲ್ ಮಿಲ್ಸ್, ಬಾಸಿಲ್ ಥಂಪಿ, ಜಸ್ಪ್ರೀತ್ ಬುಮ್ರಾ.
ಡೆಲ್ಲಿ: ಪೃಥ್ವಿ ಶಾ, ಟಿಮ್ ಸೀಫರ್ಟ್, ಮನ್ದೀಪ್ ಸಿಂಗ್, ರಿಷಭ್ ಪಂತ್(ನಾಯಕ), ರೋಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಖಲೀಲ್ ಅಹಮ್ಮದ್, ಕುಲ್ದೀಪ್ ಯಾದವ್, ಕಮಲೇಶ್ ನಾಗರಕೋಟಿ.
ಸ್ಥಳ: ಮುಂಬೈ, ಬ್ರಾಬೊರ್ನ್ ಕ್ರೀಡಾಂಗಣ
ಪಂದ್ಯ: ಮಧ್ಯಾಹ್ನ 3.30ಕ್ಕೆ,
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
