Asianet Suvarna News Asianet Suvarna News

IPL 2022 ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಗೆ ಪರದಾಡಿದ ಪಂಜಾಬ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬೌಲರ್ ಗಳಾದ ಅಕ್ಸರ್ ಪಟೇಲ್, ಖಲೀಲ್ ಅಹ್ಮದ್, ಕುಲದೀಪ್ ಯಾದವ್ ಹಾಗೂ ಲಲಿತ್ ಯಾದವ್ ತಲಾ ಎರಡು ವಿಕೆಟ್ ಸಾಧನೆ ಮಾಡುವುದರೊಂದಿಗೆ ಮಾಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುಬಲ್ಲಿ ಯಶಸ್ವಿಯಾಗಿದೆ.

IPL 2022 DC v PBKS Delhi Capitals Axar patel Kuldeep yadav Khaleel ahmed and Lalit Yadav Strikes Punjab Kings allout for 115 san
Author
Bengaluru, First Published Apr 20, 2022, 9:10 PM IST

ಮುಂಬೈ (ಏ.20): ಶಿಸ್ತಿನ ಬೌಲಿಂಗ್ ನಿರ್ವಹಣೆಯ ಮುಂದೆ ಪರದಾಡಿದ ಪಂಜಾಬ್ ಕಿಂಗ್ಸ್ (Punjab Kings) ತಂಡ 15ನೇ ಆವೃತ್ತಿಯ ಐಪಿಎಲ್ ನ (IPL 2022) 32ನೇ ಪಂದ್ಯದಲ್ಲಿ ರಿಷಭ್ ಪಂತ್ (Rishabh Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡಕ್ಕೆ ಅಲ್ಪ ಮೊತ್ತದ ಸವಾಲು ನೀಡಿದೆ.

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ (DC)ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಆರಂಭದ ಹೊರತಾಗಿಯೂ, ಅಕ್ಸರ್ ಪಟೇಲ್ (10ಕ್ಕೆ 2), ಕುಲದೀಪ್ ಯಾದವ್ (24ಕ್ಕೆ 2), ಲಲಿತ್ ಯಾದವ್ (11ಕ್ಕೆ 2) ಹಾಗೂ ಖಲೀಲ್ ಅಹ್ಮದ್‌ (21ಕ್ಕೆ 2) ಬೌಲಿಂಗ್ ದಾಳಿಯ ಮುಂದೆ ಪರದಾಡಿ 20 ಓವರ್ ಗಳಲ್ಲಿ 115 ರನ್ ಗೆ ಆಲೌಟ್ ಆಯಿತು.

ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್ ತಂಡ ಉತ್ತಮ ಆರಂಭ ಪಡೆದುಕೊಳ್ಳುವತ್ತ ಹೆಜ್ಜೆ ಹಾಕಿತ್ತು. ಕಳೆದ ಪಂದ್ಯವನ್ನು ಗಾಯದ ಕಾರಣದಿಂದಾಗಿ ತಪ್ಪಿಸಿಕೊಂಡಿದ್ದ ಮಾಯಾಂಕ್ ಅಗರ್ವಾಲ್ (Mayank agarwal ) ತಾವು ಎದುರಿಸಿದ್ದ 2ನೇ ಎಸೆತವನ್ನೇ ಬೌಂಡರಿಗಟ್ಟುವ ಮೂಲಕ ಅಬ್ಬರಿಸುವ ಸೂಚನೆ ನೀಡಿದ್ದರು. ಅದೇ ರೀತಿ ಆಡಿದ ಅವರು ನಂತರ ತಾವು ಎದುರಿಸಿದ 12 ಎಸೆಗಳಲ್ಲಿ 3 ಬೌಂಡರಿಗಳನ್ನು ಸಿಡಿಸಿದರು. ಇದರಲ್ಲಿ ಮೂರು ಬೌಂಡರಿಗಳು ಆಫ್ ಸೈಡ್ ನತ್ತ ಧಾವಿಸಿದರೆ, ಇನ್ನೊಂದು ಬೌಂಡರಿ ಲೆಗ್ ಸೈಡ್ ನತ್ತ ತೆರಳಿತ್ತು. ಇದರಿಂದಾಗಿ ಮೊದಲ ಮೂರು ಓವರ್ ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ ವಿಕೆಟ್ ನಷ್ಟವಿಲ್ಲದೆ 27 ರನ್ ಬಾರಿಸಿತ್ತು.

4ನೇ ಓವರ್ ನಲ್ಲಿ ದಾಳಿಗಿಳಿಸಿದ ಲಲಿತ್ ಯಾದವ್ ನಾಲ್ಕನೇ ಎಸೆತದಲ್ಲಿ ಶಿಖರ್ ಧವನ್ ವಿಕೆಟ್ ಉರುಳಿಸಿದ ಬಳಿಕ ಪಂಜಾಬ್ ಕಿಂಗ್ಸ್ ತಂಡದ ಪತನ ಆರಂಭಗೊಂಡಿತು. ಆಬ ಬಳಿಕ ನಿರಂತರವಾಗಿ ಪಂಜಾಬ್ ತಂಡ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. 15 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 24 ರನ್ ಬಾರಿಸಿದ್ದ ಮಾಯಾಂಕ್ ಅಗರ್ವಾಲ್ 5ನೇ ಓವರ್ ನಲ್ಲಿ ಮುಸ್ತಾಫಿಜುರ್ ರೆಹಮಾನ್ ಗೆ ವಿಕೆಟ್ ನೀಡಿದರೆ, ಕಳೆದ ಕೆಲ ಪಂದ್ಯಗಳಲ್ಲಿ ತಂಡದ ಆಧಾರಸ್ತಂಭವಾಗಿದ್ದ ಲಿಯಾಮ್ ಲಿವಿಂಗ್ ಸ್ಟೋನ್ ಕೇವಲ 2 ರನ್ ಬಾರಿಸಿ ಅಕ್ಸರ್ ಪಟೇಲ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ನಿರ್ಗಮಿಸಿದರು.

ಪಂಜಾಬ್ ತಂಡದಲ್ಲಿ ಫಾರ್ಮ್ ಕಂಡುಕೊಳ್ಳಲು ಒದ್ದಾಡುತ್ತಿರುವ ಜಾನಿ ಬೈರ್ ಸ್ಟೋ, 8 ಎಸೆತಗಳನ್ನು ಎದುರಿಸಿ 2 ಬೌಂಡರಿಗಳಿದ್ದ 9 ರನ್ ಬಾರಿಸಿ ಖಲೀಲ್ ಅಹ್ಮದ್‌ ಗೆ ವಿಕೆಟ ನೀಡಿದರು. 54 ರನ್ ಗೆ ಪ್ರಮುಖ 4 ವಿಕೆಟ್ ಕಳೆದುಕೊಂಡ ಪಂಜಾಬ್ ತಂಡಕ್ಕೆ ಈ ಹಂತದಲ್ಲಿ ಉತ್ತಮ ಜೊತೆಯಾಟದ ಅಗತ್ಯವಿತ್ತು.


ಈ ಹಂತದಲ್ಲಿ ಜೊತೆಯಾದ ಜಿತೇಶ್ ಶರ್ಮ (32 ರನ್, 23 ಎಸೆತ, 5 ಬೌಂಡರಿ) ಹಾಗೂ ಶಾರುಖ್ ಖಾನ್ (12) 5ನೇ ವಿಕೆಟ್ ಗೆ ಅಮೂಲ್ಯ 29 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 85ರ ಗಡಿ ಮುಟ್ಟಿಸಿದ್ದರು.  ಇನ್ನೇನು ಒಂಜಾಬ್ ತಂಡ ಚೇತರಿಕೆ ಕಾಣುತ್ತದೆ ಎನ್ನುವ ಹಂತದಲ್ಲಿ ಮತ್ತೆ ದಾಳಿಗಿಳಿದ ಅಕ್ಸರ್ ಪಟೇಲ್, ಜಿತೇಶ್ ಶರ್ಮಾ ಅವರನ್ನು ಎಲ್ ಬಿ ಮಾಡಿದರೆ, ಈ ಮೊತ್ತಕ್ಕೆ 5 ರನ್ ಸೇರಿಸುವ ವೇಳೆಗೆ ಕಗೀಸೋ ರಬಾಡ ಹಾಗೂ ಆಸ್ಟ್ರೇಲಿಯಾದ ನಾಥನ್ ಎಲ್ಲೀಸ್ ಕೂಡ ಹೊರನಡೆದರು. ಈ ಎರಡೂ ವಿಕೆಟ್ ಗಳನ್ನು ಕುಲದೀಪ್ ಯಾದವ್ ಮೂರು ಎಸೆತಗಳ ಅಂತರದಲ್ಲಿ ಪಡೆದುಕೊಂಡರು.

ಸ್ಫೋಟಕ ಅಟಗಾರ ಶಾರುಖ್ ಖಾನ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದ್ದ ಪಂಜಾಬ್ ಕಿಂಗ್ಸ್ ನಿರಾಸೆ ಕಂಡಿತು. ತಂಡದ ಮೊತ್ತ 92 ರನ್ ಆಗಿದ್ದಾಗ ಖಲೀಲ್ ಅಹ್ಮದ್ ಎಸೆತದಲ್ಲಿ ಶಾರುಖ್ ಖಾನ್ ನಿರ್ಗಮನ ಕಾಣುವುದರೊಂದಿಗೆ ಪಂಜಾಬ್ ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದು ಖಚಿತಗೊಂಡಿತ್ತು.

Follow Us:
Download App:
  • android
  • ios