ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ನಾಯಕ ರಶೀದ್ ಖಾನ್ ದಿಟ್ಟ ಹೋರಾಟ ಗುಜರಾತ್ ಟೈಟಾನ್ಸ್ ತಂಡಕ್ಕೆ ರೋಚಕ ಗೆಲುವು
ಪುಣೆ(ಏ.17): ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ನಾಯಕ ರಶೀದ್ ಖಾನ್ ದಿಟ್ಟ ಹೋರಾಟ ಗುಜರಾತ್ ತಂಡದ ಫಲಿತಾಂಶವನ್ನೇ ಬದಲಿಸಿತು. ಸೋಲಿನ ದವಡೆಯಲ್ಲಿದ್ದ ತಂಡಕ್ಕೆ ಮಿಲ್ಲರ್ ನೀಡಿದ ಟಾನಿಕ್‌ನಿಂದ ಗುಜರಾತ್ ಟೈಟಾನ್ಸ್ 3 ವಿಕೆಟ್ ರೋಚಕ ಗೆಲುವು ಕಂಡಿದೆ.
170 ರನ್ ಟಾರ್ಗೆಟ್ ಪಡೆದ ಗುಜರಾತ್ ಟೈಟಾನ್ಸ್ ಸುಲಭವಾಗಿ ಚೇಸ್ ಮಾಡಬಲ್ಲ ಲೆಕ್ಕಾಚಾರದಲ್ಲಿತ್ತು. ಆದರೆ ಶುಬಮನ್ ಗಿಲ್ ಹಾಗೂ ವಿಜಯ್ ಶಂಕರ್ ಡಕೌಟ್ ಆದರು. ಆರಂಭಿಕ 2 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡ ಗುಜರಾತ್ ಎಚ್ಚರಿಕೆಯ ಹೆಜ್ಜೆ ಇಟ್ಟಿತ್ತು. ವೃದ್ಧಿಮಾನ್ ಸಾಹ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು.ಇತ್ತ 12 ರನ್ ಸಿಡಿಸಿದ ಅಭಿನವ್ ಮನೋಹರ್ ಅಬ್ಬರಿಸುವ ಮೊದಲೇ ವಿಕೆಟ್ ಕೈಚೆಲ್ಲಿದರು.
ಸಾಹ 11 ರನ್ ಸಿಡಿಸಿ ನಿರ್ಗಮಿಸಿದರು. 48 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಗುಜರಾತ್ ಟೈಟಾನ್ಸ್ ಸಂಕಷ್ಟಕ್ಕೆ ಸಿಲುಕಿತು. ಕುಸಿತ ತಂಡಕ್ಕೆ ಡೇವಿಡ್ ಮಿಲ್ಲರ್ ಬ್ಯಾಟಿಂಗ್ ನೆರವಾಯಿತು. ಇತ್ತ ರಾಹುಲ್ ಟಿವಾಟಿಯಾ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಮಿಲ್ಲರ್ ದಿಟ್ಟ ಹೋರಾಟ ನೀಡಿದರು.
ಮಿಲ್ಲರ್ 28 ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಪ್ರಮುಖ ವಿಕೆಟ್ ಕಬಳಿಸಿ ಯಶಸ್ಸು ಸಾಧಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಿಲ್ಲರ್ ಸಿಕ್ಸರ್ ತೀವ್ರ ಹೊಡೆತ ನೀಡಿತು. ಮಿಲ್ಲರ್ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ಪಂದ್ಯದಲ್ಲಿ ಮೇಲೆ ನಿಧಾನವಾಗಿ ಹಿಡಿತ ಸಾಧಿಸಲು ಆರಂಭಿಸಿತು. ಗುಜರಾತ್ ಗೆಲುವಿಗೆ ಅಂತಿಮ 24 ಎಸೆತದಲ್ಲಿ 52 ರನ್ ಅವಶ್ಯಕತೆ ಇತ್ತು.
ಮಿಲ್ಲರ್‌ಗೆ ನಾಯಕ ರಶೀದ್ ಖಾನ್ ಉತ್ತಮ ಸಾಥ್ ನೀಡಿದರು. ಇವರಿಬ್ಬರ ಜೊತೆಯಾಟ ಚೆನ್ನೈ ತಂಡಕ್ಕೆ ತಲೆನೋವಾಗಿ ಪರಿಣಮಿಸಿತು.ಅಬ್ಬರಿಸಿದ ರಶೀದ್ ಖಾನ್ 21 ಎಸೆತದಲ್ಲಿ 40 ರನ್ ಸಿಡಿಸಿ ಔಟಾದರು. ರಶೀದ್ ವಿಕೆಟ್ ಪತನ ಗುಜರಾತ್ ಟೈಟಾನ್ಸ್ ತಂಡಕ್ಕೆ ತೀವ್ರ ಹಿನ್ನಡೆ ತಂದಿತು. ರಶೀದ್ ಬೆನ್ನಲ್ಲೇ ಅಲ್ಜಾರಿ ಜೋಸೆಫ್ ವಿಕೆಟ್ ಪತನಗೊಂಡಿತು. ಅಂತಿಮ 6 ಎಸೆತದಲ್ಲಿ ಗುಜರಾತ್ ಗೆಲುವಿಗೆ 13 ರನ್ ಬೇಕಿತ್ತು.
ಅಂತಿಮ ಓವರ್‌ನ ಆರಂಭಿಕ ಎರಡು ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಮೂರನೇ ಎಸೆತವನ್ನು ಮಿಲ್ಲರ್ ಸಿಕ್ಸರ್ ಸಿಡಿಸಿದರು. 4ನೇ ಎಸೆತ ನೋ ಬಾಲ್. ಬಳಿಕ ಮಿಲ್ಲರ್‌ನಿಂದ ಬೌಂಡರಿ. 5ನೇ ಎಸೆತದಲ್ಲಿ 2 ರನ್ ಸಿಡಿಸುವ ಮೂಲಕ ಇನ್ನೂ ಒಂದು ಎಸೆತ ಬಾಕಿ ಇರುವಂತೆ ಡೇವಿಡ್ ಮಿಲ್ಲರ್ ಗುಜರಾತ್ ಟೈಟಾನ್ಸ್ ತಂಡಕ್ಕೆ 3 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು. ಮಿಲ್ಲರ್ ಅಜೇಯ 94 ರನ್ ಸಿಡಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರುತುರಾಜ್ ಗಾಯಕ್ವಾಡ್ ಹಾಗೂ ಅಂಬಾಟಿ ರಾಯುಡು ಉತ್ತಮ ರನ್ ಸಿಡಿಸಿದರು. ರುತುರಾಜ್ 48 ಎಸೆತದಲ್ಲಿ 73 ರನ್ ಸಿಡಿಸಿದರು. ಆದರೆ ರಾಬಿನ್ ಉತ್ತಪ್ಪ, ಮೊಯಿನ್ ಆಲಿ ಅಬ್ಬರಿಸಲಿಲ್ಲ. ಅಂಬಾಟಿ ರಾಯುಡು ದಿಟ್ಟ ಹೋರಾಟ ನೀಡಿದರು. ರಾಯುಡು 46 ರನ್ ಸಿಡಿಸಿ ಔಟಾದರು. ಇನ್ನು ಅಂತಿಮ ಹಂತದಲ್ಲಿ ಶಿವಂ ದುಬೆ 19 ರನ್ ಸಿಡಿಸಿದರೆ, ರವೀಂದ್ರ ಜಡೇಜಾ ಅಜೇಯ 22 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ನಷ್ಟಕ್ಕೆ 169 ರನ್ ಸಿಡಿಸಿತು.
