* ಅಹಮದಾಬಾದ್ ಫ್ರಾಂಚೈಸಿಯಿಂದ ತನ್ನ ತಂಡದ ಹೆಸರು ಘೋಷಣೆ* 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಒಟ್ಟು 10 ತಂಡಗಳು ಭಾಗಿ* ಐಪಿಎಲ್ ಮೆಗಾ ಹರಾಜಿಗೂ ಮುನ್ನ ಅಹಮದಾಬಾದ್ ತಂಡದ ಹೆಸರು ಘೋಷಣೆ
ಬೆಂಗಳೂರು(ಫೆ.07): ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ (Indian Premier League) ಟೂರ್ನಿಯ ನೂತನ ತಂಡಗಳ ಪೈಕಿ ಕೊನೆಗೂ ಅಹಮದಾಬಾದ್ ಫ್ರಾಂಚೈಸಿಯು ತನ್ನ ತಂಡದ ಅಧಿಕೃತ ಹೆಸರು ಘೋಷಣೆ ಮಾಡಿದ್ದು, ಅಹಮದಾಬಾದ್ ತಂಡಕ್ಕೆ ಅಹಮದಾಬಾದ್ ಟೈಟಾನ್ಸ್ (Ahmedabad Titans) ಎಂದು ಹೆಸರಿಟ್ಟಿದೆ ಎಂದು ವರದಿಯಾಗಿದೆ. ಇಷ್ಟು ದಿನಗಳ ಕಾಯುವಿಕೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕೊನೆಗೂ ಎಲ್ಲಾ ಐಪಿಎಲ್ ತಂಡಗಳ ಹೆಸರು ಅಧಿಕೃತವಾದಂತೆ ಆಗಿದೆ. ಕೆಲ ದಿನಗಳ ಹಿಂದಷ್ಟೇ ಡಾ. ಆರ್.ಪಿ. ಸಂಜೀವ್ ಗೋಯೆಂಕಾ ಒಡೆತನದ ಲಖನೌ ಫ್ರಾಂಚೈಸಿಯು ತನ್ನ ತಂಡಕ್ಕೆ ಲಖನೌ ಸೂಪರ್ ಜೈಂಟ್ಸ್ ಎಂದು ಹೆಸರಿಟ್ಟಿತ್ತು. ಇದೀಗ ಅಹಮದಾಬಾದ್ ಫ್ರಾಂಚೈಸಿಯು ಅಧಿಕೃತವಾಗಿ ತನ್ನ ತಂಡದ ಹೆಸರನ್ನು ಘೋಷಿಸಿದೆ.
ಹೌದು, 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಈಗಿರುವ ಎಂಟು ತಂಡಗಳ ಜತೆಗೆ ಲಖನೌ ಸೂಪರ್ ಜೈಂಟ್ಸ್ ಹಾಗೂ ಅಹಮದಬಾದ್ ಟೈಟಾನ್ಸ್ ತಂಡಗಳು ಪಾಲ್ಗೊಳ್ಳಲಿವೆ. ಐಪಿಎಲ್ ಮೆಗಾ ಹರಾಜಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಅಹಮದಾಬಾದ್ ಫ್ರಾಂಚೈಸಿಯು (Ahmedabad Franchise) ತನ್ನ ತಂಡಕ್ಕೆ ಅಹಮದಾಬಾದ್ ಟೈಟಾನ್ಸ್ ಎಂದು ಹೆಸರಿಟ್ಟಿದೆ ಎಂದು ವರದಿಯಾಗಿದೆ.
ಸಿವಿಸಿ ಕ್ಯಾಪಿಟಲ್ಸ್ ಒಡೆತನದ ಅಹಮದಾಬಾದ್ ಫ್ರಾಂಚೈಸಿಯು ಬಿಸಿಸಿಐಗೆ ಬರೋಬ್ಬರಿ 5,625 ಕೋಟಿ ರುಪಾಯಿಗಳನ್ನು ನೀಡಿ ಅಹಮದಾಬಾದ್ ತಂಡದ ಮಾಲೀಕತ್ವವನ್ನು ಪಡೆದುಕೊಂಡಿತ್ತು. ಬಹುನಿರೀಕ್ಷಿತ ಐಪಿಎಲ್ ಆಟಗಾರರ ಮೆಗಾ ಹರಾಜು ಇದೇ ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಹರಾಜಿಗೂ ಮುನ್ನ ಅಹಮದಾಬಾದ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ(Hardik Pandya), ರಶೀದ್ ಖಾನ್‌ಗೆ (Rashid Khan) ತಲಾ 15 ಕೋಟಿ ರುಪಾಯಿ ಹಾಗೂ ಶುಭ್‌ಮನ್ ಗಿಲ್‌ಗೆ (Shubman Gill) 8 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಅಹಮದಾಬಾದ್ ಟೈಟಾನ್ಸ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
IPL Auction 2022: ಐಪಿಎಲ್ ಮೆಗಾ ಹರಾಜಿನಿಂದ ಹೊರಗುಳಿದ ಟಾಪ್ 4 ಕ್ರಿಕೆಟಿಗರಿವರು..!
ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ, ಅಹಮದಾಬಾದ್ ಟೈಟಾನ್ಸ್ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಗ್ಯಾರಿ ಕರ್ಸ್ಟನ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನುಳಿದಂತೆ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ವಿಕ್ರಂ ಸೋಲಂಕಿ ಅಹಮದಾಬಾದ್ ಟೈಟಾನ್ಸ್ ತಂಡದ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ ಕೊನೆಯ ವಾರದಿಂದ ಆರಂಭವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮಹಾರಾಷ್ಟ್ರದಲ್ಲಿ ಹಾಗೂ ಪ್ಲೇ ಆಫ್ ಪಂದ್ಯಗಳು ಅಹಮದಬಾದ್‌ನಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಒಟ್ಟು 10 ತಂಡಗಳು ಪಾಲ್ಗೊಂಡಿರುವುದರಿಂದ ಲೀಗ್ ಹಂತದಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ.
ಎಲ್ಲಾ 10 ಐಪಿಎಲ್ ತಂಡಗಳ ಹೆಸರುಗಳು ಹೀಗಿವೆ ನೋಡಿ:
1. ಮುಂಬೈ ಇಂಡಿಯನ್ಸ್
2. ಚೆನ್ನೈ ಸೂಪರ್ ಕಿಂಗ್ಸ್
3. ಕೋಲ್ಕತಾ ನೈಟ್ ರೈಡರ್ಸ್
4. ರಾಜಸ್ಥಾನ ರಾಯಲ್ಸ್
5. ಸನ್‌ರೈಸರ್ಸ್ ಹೈದರಾಬಾದ್
6. ಡೆಲ್ಲಿ ಕ್ಯಾಪಿಟಲ್ಸ್
7. ರಾಯಲ್ ಚಾಲೆಂಜರ್ಸ್ ಬೆಂಗಳೂರು
8. ಪಂಜಾಬ್ ಕಿಂಗ್ಸ್
9. ಲಖನೌ ಸೂಪರ್ ಜೈಂಟ್ಸ್
10. ಅಹಮದಾಬಾದ್ ಟೈಟಾನ್ಸ್
