* ಚೆನ್ನೈ ಸೂಪರ್‌ ತಂಡ ಕೂಡಿಕೊಂಡ ಮತೀಶಾ ಪತಿರಣ* ಮತೀಶಾ ಪತಿರಣ ಶ್ರೀಲಂಕಾದ ಅಂಡರ್ 19 ವಿಶ್ವಕಪ್ ಪ್ರತಿಭೆ* ವೇಗಿ ಆಡಂ ಮಿಲ್ನೆ ಬದಲಿಗೆ ಮತೀಶಾ ಪತಿರಣಗೆ ಸ್ಥಾನ

ಬೆಂಗಳೂರು(ಏ.21): ಸ್ನಾಯು ಸೆಳೆತಕ್ಕೆ ಒಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ವೇಗಿ ಆಡಂ ಮಿಲ್ನೆ (Adam Milne), 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದೀಗ ನ್ಯೂಜಿಲೆಂಡ್ ವೇಗಿಯ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಶ್ರೀಲಂಕಾದ ಯುವ ವೇಗಿ ಮತೀಶಾ ಪತಿರಣ (Matheesha Pathirana) ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಈ ಕುರಿತಂತೆ ಸಿಎಸ್‌ಕೆ ಫ್ರಾಂಚೈಸಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

2022ರ ಟಾಟಾ ಐಪಿಎಲ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವೇಗಿ ಆಡಂ ಮಿಲ್ನೆ ಬದಲಿಗೆ ಮತೀಶಾ ಪತಿರಣ ಅವರೊಂದಿಗೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ಎದುರಿನ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ಆಡಂ ಮಿಲ್ನೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇದೀಗ ಆಡಂ ಮಿಲ್ನೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದು, ಅವರ ಬದಲಿಗೆ ಮತೀಶಾ ಪತಿರಣ ಅವರೊಂದಿಗೆ ಸಿಎಸ್‌ಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಮತೀಶಾ ಪತಿರಣ ಶ್ರೀಲಂಕಾದ ಯುವ ಪ್ರತಿಭಾನ್ವಿತ ವೇಗಿಯಾಗಿದ್ದು, 2020 ಹಾಗೂ 2022ರ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದೀಗ ಮತೀಶಾ ಪತಿರಣ ಅವರಿಗೆ 20 ಲಕ್ಷ ರುಪಾಯಿ ನೀಡಿ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಮತೀಶಾ ಪತಿರಣ ಅವರ ಬೌಲಿಂಗ್ ಶೈಲಿಯು ಲಂಕಾದ ದಿಗ್ಗಜ ವೇಗಿ ಲಸಿತ್ ಮಾಲಿಂಗ ಅವರ ಬೌಲಿಂಗ್‌ ಶೈಲಿಯನ್ನು ಹೋಲುತ್ತಿದೆ. ಮತೀಶಾ ಪತಿರಣ ಇದುವರೆಗೂ ಕೇವಲ 2 ಪಂದ್ಯಗಳನ್ನಷ್ಟೇ ಆಡಿದ್ದಾರೆ. 

IPL 2022: ಚೆನ್ನೈ ಸೂಪರ್ ಕಿಂಗ್ಸ್‌ ತಂಡದಿಂದ ಹೊರಗುಳಿದ ಸ್ಟಾರ್ ಕ್ರಿಕೆಟಿಗ..?

ಆಡಂ ಮಿಲ್ನೆ ಅವರ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿತು. ಮೊದಲೇ ದೀಪಕ್ ಚಹರ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಆಡಂ ಮಿಲ್ನೆ ಅನುಪಸ್ಥಿತಿ ನುಂಗಲಾರದ ತುತ್ತಾಗಿ ಪರಿಣಮಿಸಿತು. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ದೀಪಕ್ ಚಹರ್‌ಗೆ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 15ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ.

ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇದಾದ ಬಳಿಕ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಎದುರು ಸಿಎಸ್‌ಕೆ ಭರ್ಜರಿ ಗೆಲುವು ದಾಖಲಿಸುವ ಮೂಲಕ ಅಂಕಗಳ ಖಾತೆ ತೆರೆದಿತ್ತು. ಆದರೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ತನ್ನ ಪಾಲಿನ ಆರನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದೆ. ಇನ್ನು ಇದೀಗ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಮುಂಬೈ ಇಂಡಿಯನ್ಸ್ ತಂಡದ ವಿರುದ್ದ ಕಣಕ್ಕಿಳಿಯಲಿದೆ.