ಮುಂಬೈ(ಏ.13): ರಾಜಸ್ಥಾನ ರಾಯಲ್ಸ್‌ ತಂಡದ ಯುವ ವೇಗಿ ಚೇತನ್‌ ಸಕಾರಿಯ ಪಂಜಾಬ್‌ ಕಿಂಗ್ಸ್‌ ವಿರುದ್ದ ತೋರಿದ ಕೆಚ್ಚೆದೆಯ ಪ್ರದರ್ಶನವನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೊಂಡಾಡಿದ್ದಾರೆ. 

ಪಂಜಾಬ್‌ ಕಿಂಗ್ಸ್‌ ವಿರುದ್ದ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಸಕಾರಿಯ ಬಲಿಷ್ಠ ತಂಡದೆದುರು ಕೇವಲ 31 ರನ್‌ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಮೊದಲ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ತಂಡಗಳು 200ಕ್ಕೂ ಅಧಿಕ ರನ್‌ ಬಿಟ್ಟುಕೊಟ್ಟಿದ್ದರೂ, ಯುವ ವೇಗಿ ಸಕಾರಿಯ ಪ್ರದರ್ಶನ ಸೆಹ್ವಾಗ್‌ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ನಾನು ಆತನ ಹೆಸರನ್ನು ಕೇಳಿದ್ದೆ, ದೇಸಿ ಕ್ರಿಕೆಟ್‌ನಲ್ಲಿ ಆತನ ಆಟವನ್ನು ಗಮನಿಸಿದ್ದೆ. ಆದರೆ ಐಪಿಎಲ್‌ನಲ್ಲಿ ಆತ ಇಷ್ಟು ಚೆನ್ನಾಗಿ ಬೌಲಿಂಗ್‌ ಮಾಡುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ. ದೇಸಿ ಕ್ರಿಕೆಟ್‌ನಲ್ಲಿ ಬೇರೆ ಬೇರೆ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್‌ ಮಾಡಿರಬಹುದು. ಆದರೆ ಐಪಿಎಲ್‌ನಲ್ಲಿ ಪ್ರಖ್ಯಾತ ಹಾಗೂ ದಿಗ್ಗಜ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್‌ ಮಾಡಬೇಕಾಗುತ್ತದೆ. ಈ ಪಂದ್ಯದಲ್ಲಿ ಸಕಾರಿಯನ ಬೌಲಿಂಗ್‌ ಪ್ರಬುದ್ಧತೆ ನೋಡಲು ಸಿಕ್ಕಿತು. 
ಜಹೀರ್ ಖಾನ್‌ ಹಾಗೂ ಆಶಿಶ್‌ ನೆಹ್ರಾ ಒಂದು ಬೌಂಡರಿ ಹೊಡೆಸಿಕೊಂಡ ತಕ್ಷಣ ವಿಚಲಿತರಾಗಬಾರದು ಎಂದು ಯಾವಾಗಲೂ ಹೇಳುತ್ತಿದ್ದರು. ಎಲ್ಲಿಯವರೆಗೂ ನೀವು ದಂಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನೀವು ಕಲಿಯುವುದಿಲ್ಲ ಹಾಗೆಯೇ ವಿಕೆಟ್ ಕಬಳಿಸುವುದಿಲ್ಲ. ನೆಹ್ರಾ ಹಾಗೂ ಜಹೀರ್ ಖಾನ್‌ಗಿದ್ದ ಪ್ರಬುದ್ಧತೆಯನ್ನು ನಾನು ಸಕಾರಿಯನಲ್ಲಿ ಕಂಡೆ ಎಂದು ವಿರೇಂದ್ರ ಸೆಹ್ವಾಗ್ ಯುವ ಬೌಲರ್‌ನ ಗುಣಗಾನ ಮಾಡಿದ್ದಾರೆ.

IPL 2021: ಪಂಜಾಬ್ ಕಿಂಗ್ಸ್ ಪಂದ್ಯ ಗೆದ್ದರೆ, ಹೃದಯ ಗೆದ್ದ ಸಂಜು ಸ್ಯಾಮ್ಸನ್!
 
ಸಕಾರಿಯನಲ್ಲಿ ಸಾಕಷ್ಟು ಬೌಲಿಂಗ್‌ ವೇರಿಯೇಷನ್ಸ್‌ ಇವೆ. ಕೆಲವೊಂದು ನೋ ಬಾಲ್ ಹಾಕಿರಬಹುದು, ಆದರೆ ಆತ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ. ಮಯಾಂಕ್ ಅಗರ್‌ವಾಲ್ ವಿಕೆಟ್ ಕಬಳಿಸಿ ಬಳಿಕ ಕ್ರಿಸ್‌ ಗೇಲ್‌ ಅವರನ್ನು ತಬ್ಬಿಬ್ಬು ಮಾಡಿದ ರೀತಿ ನಿಜಕ್ಕೂ ನನಗೆ ಇಷ್ಟವಾಯಿತು ಎಂದು ಸೆಹ್ವಾಗ್ ಹೇಳಿದ್ದಾರೆ.
 
2021ರ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 1.2 ಕೋಟಿ ರುಪಾಯಿ ನೀಡಿ ಚೇತನ್ ಸಕಾರಿಯರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಕಳೆದ ವರ್ಷ ಸಕಾರಿಯ ಆರ್‌ಸಿಬಿ ನೆಟ್‌ ಬೌಲರ್ ಆಗಿದ್ದರು. ಇನ್ನು ಚೇತನ್ ಸಕಾರಿಯ 2020ರ ಮಾರ್ಚ್‌ನಲ್ಲಿ ನಡೆದ ರಣಜಿ ಟ್ರೋಫಿ ಗೆದ್ದ ಸೌರಾಷ್ಟ್ರ ತಂಡದ ಸದಸ್ಯರಾಗಿದ್ದರು.