IPL 2021: KKR ಎದುರು ನೀಲಿ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್‌ಸಿಬಿ..!
* ಕೋವಿಡ್ ವಾರಿಯರ್ಸ್‌ಗಳಿಗೆ ಗೌರವ ಸಲ್ಲಿಸಲು ಮುಂದಾದ ಆರ್‌ಸಿಬಿ
* ಕೆಕೆಆರ್ ಎದುರಿನ ಪಂದ್ಯದಲ್ಲಿ ಬ್ಲೂ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ವಿರಾಟ್ ಪಡೆ
* ಸೆಪ್ಟೆಂಬರ್ 20ರಂದು ಕೆಕೆಆರ್ ತಂಡವನ್ನು ಎದುರಿಸಲಿದೆ ಆರ್‌ಸಿಬಿ
ದುಬೈ(ಸೆ.14): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರತಿವರ್ಷವೂ ಒಂದಿಲ್ಲೊಂದು ಸಾಮಾಜಿಕ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ. ಪ್ರತಿವರ್ಷ ಒಂದು ದಿನ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯುವ ಮೂಲಕ ಪರಿಸರ ಕಾಳಜಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಾ ಬಂದಿದೆ. ಇದೀಗ ಆರ್‌ಸಿಬಿ ತಂಡವು ಯುಎಇ ಚರಣದ ಮೊದಲ ಪಂದ್ಯದಲ್ಲೇ ನೀಲಿ ಜೆರ್ಸಿ ತೊಟ್ಟು ಕಣಕ್ಕಿಳಿಯುವ ಮೂಲಕ ಕೋವಿಡ್ ವಾರಿಯರ್‌ಗಳಿಗೆ ವಿನೂತನವಾಗಿ ಗೌರವ ಸೂಚಿಸಲು ಮುಂದಾಗಿದೆ.
ಹೌದು, ಸೆಪ್ಟೆಂಬರ್ 20ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡವು, ಬ್ಲೂ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಈ ವಿಚಾರವನ್ನು ಆರ್‌ಸಿಬಿ ಫ್ರಾಂಚೈಸಿಯು ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಖಚಿತಪಡಿಸಿದೆ.
IPL 2021: RCB ತಂಡ ಕೂಡಿಕೊಂಡ ಬೆಂಕಿ-ಬಿರುಗಾಳಿ..! ಈ ಸಲಾ ಕಪ್ ನಮ್ದೇ ನಾ..?
ಸೆಪ್ಟೆಂಬರ್ 20ರಂದು ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ಬ್ಲೂ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಕೋವಿಡ್ ಫ್ರಂಟ್‌ಲೈನ್ ವಾರಿಯರ್‌ಗಳು ಧರಿಸುವ ಪಿಪಿಇ ಕಿಟ್ ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯುವ ಮೂಲಕ ಅವರಿಗೆ ಆರ್‌ಸಿಬಿ ಗೌರವ ಸೂಚಿಸಲಿದೆ. ಕೋವಿಡ್ ವಿರುದ್ದದ ಹೋರಾಟದಲ್ಲಿ ಫ್ರಂಟ್‌ಲೈನ್ ವಾರಿಯರ್‌ಗಳು ಮುಂಚೂಣಿಯಲ್ಲಿದ್ದರು ಎಂದು ಆರ್‌ಸಿಬಿ ಫ್ರಾಂಚೈಸಿ ಟ್ವೀಟ್ ಮಾಡಿದೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 2 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇದೀಗ ಯುಎಇ ಚರಣದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಗೆಲುವಿನೊಂದಿಗೆ ಶುಭಾರಂಭ ಮಾಡಲು ಎದುರು ನೋಡುತ್ತಿದೆ.