ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಹಮದಾಬಾದ್(ಏ.30)‌: ಭರ್ಜರಿ ಆಟದೊಂದಿಗೆ ಮುನ್ನುಗ್ಗುತ್ತಿರುವ ರಾಯಲ್‌ ಚಾಲೆಂಜ​ರ್ಸ್ ಬೆಂಗಳೂರು ತಂಡ, ಶುಕ್ರವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೆಣಸಲಿದ್ದು ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಎರಡೂ ತಂಡಗಳಿಗೆ ಮೊದಲ ಸುತ್ತಿನ ಮುಖಾಮುಖಿಯ ಅಂತಿಮ ಪಂದ್ಯ ಇದಾಗಿದೆ.

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಎಡವಿದ್ದನ್ನು ಹೊರತುಪಡಿಸಿ ಆರ್‌ಸಿಬಿ ಉಳಿದ 5 ಪಂದ್ಯಗಳಲ್ಲಿ ಸಾಂಘಿಕ ಪ್ರದರ್ಶನದಿಂದ ಗೆಲುವು ಸಂಪಾದಿಸಿದೆ. ವಿರಾಟ್‌ ಕೊಹ್ಲಿ ಹಾಗೂ ದೇವದತ್‌ ಪಡಿಕ್ಕಲ್‌ ಸ್ಥಿರ ಪ್ರದರ್ಶನ ತೋರಲು ಕಾತರಿಸುತ್ತಿದ್ದರೆ, ಮ್ಯಾಕ್ಸ್‌ವೆಲ್‌ ಹಾಗೂ ಎಬಿ ಡಿ ವಿಲಿಯರ್ಸ್‌ರಿಂದ ಮತ್ತೊಮ್ಮೆ ಅಮೋಘ ಆಟ ನಿರೀಕ್ಷಿಸಲಾಗುತ್ತಿದೆ. ಯುವ ಆಟಗಾರ ರಜತ್‌ ಪತಿದಾರ್‌ ಭರವಸೆ ಮೂಡಿಸಿದ್ದಾರೆ. ತಂಡದ ಬೌಲಿಂಗ್‌ ವಿಭಾಗ ಅತ್ಯಂತ ಬಲಿಷ್ಠವಾಗಿದ್ದು, ನಾಯಕ ಕೊಹ್ಲಿ ಮುಂದೆ ಮ್ಯಾಕ್ಸ್‌ವೆಲ್‌ ಹೊರತುಪಡಿಸಿ 8 ಬೌಲಿಂಗ್‌ ಆಯ್ಕೆಗಳಿವೆ. ಬೌಲರ್‌ಗಳ ನಿರ್ವಹಣೆಯಲ್ಲಿ ಕೊಹ್ಲಿ ಯಶಸ್ಸು ಕಾಣುತ್ತಿದ್ದಾರೆ.

ಪೃಥ್ವಿ ಶಾ-ಧವನ್ ಅಬ್ಬರಕ್ಕೆ KKR ಧೂಳೀಪಟ; ಡೆಲ್ಲಿ ತಂಡಕ್ಕೆ 7 ವಿಕೆಟ್ ಗೆಲುವು!

ಪಂಜಾಬ್‌ ಕೈಹಿಡಿಯುತ್ತಿಲ್ಲ ಅದೃಷ್ಟ?: ಮತ್ತೊಂದೆಡೆ ಪಂಜಾಬ್‌ ಆಡಿರುವ 6 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 2ರಲ್ಲಿ. ತಂಡ ಮೊದಲು ಬ್ಯಾಟ್‌ ಮಾಡಿದಾಗ 3 ಬಾರಿ (106, 120 ಹಾಗೂ 123) ಸಾಧಾರಣ ಮೊತ್ತ ಕಲೆಹಾಕಿದೆ. ನಾಯಕ ಕೆ.ಎಲ್‌.ರಾಹುಲ್‌ ಸ್ಥಿರ ಪ್ರದರ್ಶನ ತೋರುತ್ತಿಲ್ಲ. ಆದರೆ ಅವರೇ ತಂಡದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ. ಮಯಾಂಕ್‌ ಅಗರ್‌ವಾಲ್‌ ಕೂಡ ನಿರೀಕ್ಷಿತ ಆಟವಾಡುತ್ತಿಲ್ಲ. ವಿದೇಶಿ ಆಟಗಾರರಿಂದ ತಂಡಕ್ಕೆ ಯಾವುದೇ ಉಪಯೋಗವಾಗುತ್ತಿಲ್ಲ. ಹಲವು ಬಾರಿ ತಂಡದ ಸಂಯೋಜನೆ ಬದಲಿಸಿದರೂ, ಪಂಜಾಬ್‌ಗೆ ಅದೃಷ್ಟ ಕೈಹಿಡಿಯುತ್ತಿಲ್ಲ.

ಪಿಚ್‌ ರಿಪೋರ್ಟ್‌: ಮೋದಿ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಮೊದಲು ಬ್ಯಾಟ್‌ ಮಾಡುವ ತಂಡ 180ಕ್ಕೂ ಹೆಚ್ಚು ರನ್‌ ಗಳಿಸಿದರೆ ಸುರಕ್ಷಿತ. 2ನೇ ಇನ್ನಿಂಗ್ಸ್‌ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಇದ್ದು, ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಕೊಹ್ಲಿ(ನಾಯಕ), ಪಡಿಕ್ಕಲ್‌, ರಜತ್‌, ಮ್ಯಾಕ್ಸ್‌ವೆಲ್‌, ವಿಲಿಯ​ರ್ಸ್, ವಾಷಿಂಗ್ಟನ್‌, ಜೇಮಿಸನ್‌, ಸ್ಯಾಮ್ಸ್‌, ಹರ್ಷಲ್‌, ಸಿರಾಜ್‌, ಚಹಲ್‌.

ಪಂಜಾಬ್‌: ಮಯಾಂಕ್‌, ರಾಹುಲ್‌(ನಾಯಕ), ಗೇಲ್‌, ಹೂಡಾ, ಪೂರನ್‌, ಶಾರುಖ್‌, ಹೆನ್ರಿಕ್ಸ್‌, ಜೋರ್ಡನ್‌, ಶಮಿ, ಅಶ್‌ರ್‍ದೀಪ್‌, ಬಿಷ್ಣೋಯ್‌.

ಸ್ಥಳ: ಅಹಮದಾಬಾದ್‌ 
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್