* ಬಲಿಷ್ಠ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕಿಂದು ರಾಜಸ್ಥಾನ ರಾಯಲ್ಸ್‌ ಸವಾಲು* ರಾಜಸ್ಥಾನ ರಾಯಲ್ಸ್‌ ಪಾಲಿಗಿಂದು ಮಾಡು ಇಲ್ಲವೇ ಮಡಿ ಪಂದ್ಯ* ಪ್ಲೇ ಆಫ್‌ನತ್ತ ದಿಟ್ಟ ಹೆಜ್ಜೆ ಹಾಕುತ್ತಿದೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು

ದುಬೈ(ಸೆ.29): ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ಗೆಲುವು ಸಾಧಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡ, ಸತತ 2 ಸೋಲು ಅನುಭವಿಸಿ ಕಂಗೆಟ್ಟಿರುವ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್‌ (Rajasthan Royals) ಸವಾಲನ್ನು ಸ್ವೀಕರಿಸಲು ಸಜ್ಜಾಗಿದೆ.

10 ಪಂದ್ಯಗಳಿಂದ 12 ಅಂಕ ಹೊಂದಿರುವ ಆರ್‌ಸಿಬಿ (RCB), ಬುಧವಾರ ನಡೆಯಲಿರುವ ಪಂದ್ಯವನ್ನು ಗೆದ್ದು ಪ್ಲೇ-ಆಫ್‌ನತ್ತ ಒಂದು ಹೆಜ್ಜೆ ಮುಂದಿಡಲು ಎದುರು ನೋಡುತ್ತಿದೆ. ಮತ್ತೊಂದೆಡೆ ಸತತ 2 ಪಂದ್ಯಗಳಲ್ಲಿ ಸೋತಿರುವ ರಾಯಲ್ಸ್‌ಗೆ ಇದು ನಿರ್ಣಾಯಕ ಪಂದ್ಯವೆನಿಸಿದೆ. ಪ್ಲೇ-ಆಫ್‌ನಲ್ಲಿ ಸ್ಥಾನಕ್ಕಾಗಿ ಪೈಪೋಟಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಒಂದು ಸೋಲು ರಾಜಸ್ಥಾನ ತಂಡದ ಲೆಕ್ಕಾಚಾರವನ್ನು ತಲೆಕೆಳಗಾಗಿಸಲಿದೆ.

Scroll to load tweet…

ವಿರಾಟ್‌ ಕೊಹ್ಲಿ (Virat Kohli), ಯಜುವೇಂದ್ರ ಚಹಲ್‌, ಹರ್ಷಲ್‌ ಪಟೇಲ್‌ ಉತ್ತಮ ಲಯದಲ್ಲಿರುವುದು ಆರ್‌ಸಿಬಿ ಪಾಲಿಗೆ ಸಿಹಿ ಸುದ್ದಿ. ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಹ ಕಳೆದ ಪಂದ್ಯದಲ್ಲಿ ಆಲ್ರೌಂಡ್‌ ಪ್ರದರ್ಶನ ತೋರಿದ್ದರು. ಎಬಿ ಡಿ ವಿಲಿಯ​ರ್ಸ್‌ (Ab De Villiers) ಅಬ್ಬರಿಸಿದರೆ ರಾಯಲ್ಸ್‌ಗೆ ಸೋಲು ಕಟ್ಟಿಟ್ಟಬುತ್ತಿ. ಇನ್ನೊಂದೆಡೆ ರಾಜಸ್ಥಾನ ಸರಿಯಾದ ಸಂಯೋಜನೆಯೊಂದಿಗೆ ಕಣಕ್ಕಿಳಿಯಲು ಪರದಾಡುತ್ತಿದೆ. ನಾಯಕ ಸಂಜು ಸ್ಯಾಮ್ಸನ್‌ ಏಕಾಂಗಿ ಹೋರಾಟ ಫಲ ನೀಡುತ್ತಿಲ್ಲ. ಬೌಲರ್‌ಗಳೂ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡದೆ ಇರುವುದು ತಂಡದ ತಲೆನೋವು ಹೆಚ್ಚಿಸಿದೆ.

ಐಪಿಎಲ್ (IPL) ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಒಟ್ಟು 23 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 11 ಬಾರಿ ಗೆಲುವು ದಾಖಲಿಸಿದ್ದರೆ, ರಾಜಸ್ಥಾನ ರಾಯಲ್ಸ್ ತಂಡವು 10 ಬಾರಿ ಗೆಲುವಿನ ಸಿಹಿಯುಂಡಿತ್ತು. ಇನ್ನೆರಡು ಪಂದ್ಯಗಳ ಫಲಿತಾಂಶ ಹೊರಬಿದ್ದಿರಲಿಲ್ಲ. 

IPL 2021: ಟಿ20 ವಿಶ್ವಕಪ್‌ ಟೂರ್ನಿಗೆ ಶ್ರೇಯಸ್ ಅಯ್ಯರ್‌ಗೆ ಜಾಕ್‌ಪಾಟ್‌..?

ಸದ್ಯ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 10 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 4 ಸೋಲುಗಳೊಂದಿಗೆ 12 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಇನ್ನೊಂದು ಪಂದ್ಯ ಜಯಿಸಿದರೆ, ಬಹುತೇಕ ಪ್ಲೇ ಆಫ್‌ ಹಾದಿ ಮತ್ತಷ್ಟು ಸುಲಭವಾಗಲಿದೆ. ಇನ್ನೊಂದೆಡೆ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್‌ ತಂಡವು 10 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 6 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, ಪ್ಲೇ ಆಫ್‌ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯ ರಾಯಲ್ಸ್‌ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ವಿರಾಟ್ ಕೊಹ್ಲಿ(ನಾಯಕ), ದೇವದತ್ ಪಡಿಕ್ಕಲ್‌, ಶ್ರೀಕರ್‌ ಭರತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಎಬಿ ಡಿ ವಿಲಿಯರ್ಸ್‌, ಡೇನಿಯಲ್‌ ಕ್ರಿಶ್ಚಿಯನ್‌, ಕೈಲ್ ಜೇಮಿಸನ್‌, ಶಾಬಾಜ್ ಅಹಮ್ಮದ್‌, ಹರ್ಷಲ್‌ ಪಟೇಲ್‌, ಮೊಹಮ್ಮದ್ ಸಿರಾಜ್‌, ಯುಜುವೇಂದ್ರ ಚಹಲ್‌.

ರಾಜಸ್ಥಾನ ರಾಯಲ್ಸ್‌: ಯಶಸ್ವಿ ಜೈಸ್ವಾಲ್‌, ಎವಿನ್ ಲೆವಿಸ್‌, ಸಂಜು ಸ್ಯಾಮ್ಸನ್‌(ನಾಯಕ), ಮಹಿಪಾಲ್ ಲೊಮ್ರಾರ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ರೆಯಾನ್ ಪರಾಗ್‌, ರಾಹುಲ್‌ ತೆವಾಟಿಯಾ, ಕ್ರಿಸ್‌ ಮೋರಿಸ್‌, ಜಯದೇವ್ ಉನಾದ್ಕತ್‌, ಮುಸ್ತಾಫಿಜುರ್ ರೆಹಮಾನ್‌, ಚೇತನ್ ಸಕಾರಿಯಾ.

ಸ್ಥಳ: ದುಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌