* ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿಂದು ಮುಂಬೈ ವರ್ಸಸ್ ಬೆಂಗಳೂರು ಫೈಟ್* ಸತತ ಎರಡು ಸೋಲುಗಳಿಂದ ಕಂಗಾಲಾಗಿರುವ ಉಭಯ ತಂಡಗಳು* ರೋಹಿತ್ ಶರ್ಮಾ ವರ್ಸಸ್ ವಿರಾಟ್ ಕೊಹ್ಲಿ ನಡುವಿನ ಜಿದ್ದಾಜಿದ್ದಿನ ಪೈಪೋಟಿಗೆ ಕ್ಷಣಗಣನೆ
ದುಬೈ(ಸೆ.26): ವಿರಾಟ್ ಕೊಹ್ಲಿ(Virat Kohli) ಹಾಗೂ ರೋಹಿತ್ ಶರ್ಮಾ(Rohit Sharma) ಒಬ್ಬರ ಮೇಲೊಬ್ಬರು ಮೇಲುಗೈ ಸಾಧಿಸಲು ಎದುರು ನೋಡುತ್ತಿದ್ದು, ಭಾನುವಾರ ತಮ್ಮ ತಂಡಗಳನ್ನು ಗೆಲುವಿನ ಹಳಿಗೆ ತರಲು ಕಾತರಿಸುತ್ತಿದ್ದಾರೆ.
ಯುಎಇ ಚರಣದ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ಖಾತೆ ತೆರೆಯಲು ತುದಿಗಾಲಿನಲ್ಲಿ ನಿಂತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡವು ಸತತ 2 ಪಂದ್ಯಗಳಲ್ಲಿ ಸೋತಿದ್ದರೆ, ಮುಂಬೈ ಇಂಡಿಯನ್ಸ್(Mumbai Indians) ಕೂಡಾ ಸತತ 2 ಪಂದ್ಯಗಳಲ್ಲಿ ಸೋತಿದೆ. ಪ್ಲೇ-ಆಫ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಇದು ನಿರ್ಣಾಯಕ ಪಂದ್ಯ ಎನಿಸಿದೆ
ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿರುವ 6 ಆಟಗಾರರು ಮುಂಬೈ ಪರ ಆಡುತ್ತಿದ್ದು, ಯಾರೂ ಉತ್ತಮ ಲಯದಲ್ಲಿಲ್ಲ. ಹಾರ್ದಿಕ್ ಪಾಂಡ್ಯ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಕೊಹ್ಲಿ ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರಾದರೂ ಅವರ ಸ್ಟ್ರೈಕ್ ರೇಟ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಅಸಮಾಧಾನವಿದೆ. ಬಲಿಷ್ಠ ತಂಡಗಳ ನಡುವಿನ ಕಾದಾಟ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
IPL 2021: ಚೆನ್ನೈ ಮುಂದೆ ನಡೆಯುತ್ತಾ KKR ಆಕ್ರಮಣಕಾರಿ ಆಟ..?
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಶರಣಾಗಿತ್ತು. ಇದಾದ ಬಳಿಕ ಎರಡನೇ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್ ಎದುರು ಆಘಾತಕಾರಿ ಸೋಲು ಕಂಡಿದೆ. ಇನ್ನು ವಿರಾಟ್ ಕೊಹ್ಲಿ ಪರಿಸ್ಥಿತಿ ಕೂಡಾ ಸಾಕಷ್ಟು ಭಿನ್ನವಾಗಿಲ್ಲ. ಮೊದಲ ಪಂದ್ಯದಲ್ಲಿ ಕೆಕೆಆರ್ ಎದುರು ಹೀನಾಯ ಸೋಲು ಕಂಡಿದ್ದ ಕೊಹ್ಲಿ ಪಡೆ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಶರಣಾಗಿತ್ತು.
ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಮುಂಬೈ ಇಂಡಿಯನ್ಸ್ 17 ಬಾರಿ ಗೆಲುವು ದಾಖಲಿಸಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 11 ಬಾರಿ ಗೆಲುವಿನ ನಗೆ ಬೀರಿದೆ
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ವಿರಾಟ್ ಕೊಹ್ಲಿ(ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಟಿಮ್ ಡೇವಿಡ್, ಕೈಲ್ ಜೇಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಯುಜುವೇಂದ್ರ ಚಹಲ್.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ರಾಹುಲ್ ಚಹರ್, ಆಡಂ ಮಿಲ್ನೆ, ಜಸ್‌ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.
ಸ್ಥಳ: ದುಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
