Asianet Suvarna News Asianet Suvarna News

IPL 2021 ಸನ್‌ರೈಸರ್ಸ್‌ ಮೇಲೆ ಸವಾರಿ ಮಾಡುತ್ತಾ ಆರ್‌ಸಿಬಿ..?

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿದ್ದು, ಒಂದು ಹೈವೋಲ್ಟೇಜ್‌ ಪಂದ್ಯವನ್ನು ನಿರೀಕ್ಷೆ ಮಾಡಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

IPL 2021 RCB takes on Sunrisers Hyderabad in Chennai kvn
Author
Chennai, First Published Apr 14, 2021, 8:42 AM IST

ಚೆನ್ನೈ(ಏ.14): 14ನೇ ಆವೃತ್ತಿಯ ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲೇ ಬಲಿಷ್ಠ ಮುಂಬೈ ಇಂಡಿಯನ್ಸ್‌ ವಿರುದ್ದ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಇದೀಗ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಅಂತಹದ್ದೇ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದೆ.

ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ಪಾಲಿಗೆ ಎರಡನೇ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಆರ್‌ಸಿಬಿಗೆ ಸವಾಲೆಸೆಯಲಿದೆ. ಕೋಲ್ಕತ ನೈಟ್‌ ರೈಡರ್ಸ್‌ ಎದುರು 10 ರನ್‌ಗಳ ರೋಚಕ ಸೋಲು ಕಂಡಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಆರ್‌ಸಿಬಿ ವಿರುದ್ದ ಗೆದ್ದು ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ. ಇನ್ನೊಂದು ಕಡೆ ಕಳೆದ ಆವೃತ್ತಿಯ ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ವಿರುದ್ದ ಮುಗ್ಗರಿಸಿದ್ದ ಅರ್‌ಸಿಬಿ ಆ ಸೋಲಿನ ಲೆಕ್ಕಾಚುಕ್ತಾ ಮಾಡಲು ಹವಣಿಸುತ್ತಿದೆ.

ಬಲಿಷ್ಠ ಮುಂಬೈ ಎದುರು ಆರ್‌ಸಿಬಿ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ್ದರು. ಇನ್ನು ಬೌಲಿಂಗ್‌ನಲ್ಲಿ ಹರ್ಷಲ್‌ ಪಟೇಲ್‌, ಕೈಲ್‌ ಜೇಮಿಸನ್‌ ಆಕರ್ಷಕ ಪ್ರದರ್ಶನ ತೋರಿದ್ದರು. ಇಂದಿನ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಸಹ ತಂಡವನ್ನು ಕೂಡಿಕೊಳ್ಳಲಿದ್ದು, ಆರ್‌ಸಿಬಿ ಮತ್ತಷ್ಟು ಬಲಿಷ್ಠವಾಗಲಿದೆ.

IPL 2021: ಸುಲಭ ಟಾರ್ಗೆಟ್ ಚೇಸ್ ಮಾಡಲು ಕೆಕೆಆರ್ ವಿಫಲ; ಮುಂಬೈಗೆ ಮೊದಲ ಗೆಲುವು!

ಇನ್ನೊಂದೆಡೆ ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಡೇವಿಡ್‌ ವಾರ್ನರ್ ಅಬ್ಬರಿಸಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಜಾನಿ ಬೇರ್‌ಸ್ಟೋವ್‌ ಹಾಗೂ ಮನೀಶ್‌ ಪಾಂಡೆ ಹಾಗೂ ಅಬ್ದುಲ್ ಸಮದ್ ತಮ್ಮ ಲಯವನ್ನು ಮುಂದುವರೆಸಬೇಕಾಗಿದೆ. ಒಂದು ವೇಳೆ ಕೇನ್‌ ವಿಲಿಯಮ್ಸನ್‌ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರೆ ಮೊಹಮ್ಮದ್ ನಬಿ ಹೊರಗುಳಿಯಬೇಕಾಗುತ್ತದೆ.

ಸಂಭಾವ್ಯ ತಂಡಗಳು ಹೀಗಿವೆ:
ಆರ್‌ಸಿಬಿ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಗ್ಲೆನ್‌ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್‌, ವಾಷಿಂಗ್ಟನ್ ಸುಂದರ್‌, ಡೇನಿಯಲ್ ಕ್ರಿಶ್ಚಿಯನ್‌, ಕೈಲ್ ಜೇಮಿಸನ್‌, ಹರ್ಷಲ್‌ ಪಟೇಲ್‌, ಮೊಹಮ್ಮದ್ ಸಿರಾಜ್‌, ಯುಜುವೇಂದ್ರ ಚಹಲ್

ಸನ್‌ರೈಸರ್ಸ್‌: ಡೇವಿಡ್‌ ವಾರ್ನರ್‌, ವೃದ್ದಿಮಾನ್ ಸಾಹ, ಮನೀಶ್ ಪಾಂಡೆ, ಜಾನಿ ಬೇರ್‌ಸ್ಟೋವ್‌, ಕೇನ್‌ ವಿಲಿಯಮ್ಸನ್‌, ವಿಜಯ್‌ ಶಂಕರ್, ಅಬ್ದುಲ್‌ ಸಮದ್‌, ರಶೀದ್‌ ಖಾನ್‌, ಭುವನೇಶ್ವರ್ ಕುಮಾರ್‌, ಸಂದೀಪ್ ಶರ್ಮಾ, ಟಿ ನಟರಾಜನ್‌.

ಪಂದ್ಯ ಆರಂಭ: 7.30
ಸ್ಥಳ: ಚೆನ್ನೈ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

Follow Us:
Download App:
  • android
  • ios