ಚೆನ್ನೈ(ಏ.18): ಮತ್ತೊಮ್ಮೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ದ 38 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ಇದೇ ಮೊದಲ ಬಾರಿಗೆ ಆವೃತ್ತಿಯ ಮೊದಲ 3 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದೆ. 

ಕಳೆದ ಆವೃತ್ತಿಯಲ್ಲೂ ಕೆಕೆಆರ್‌ ವಿರುದ್ದದ ಎರಡು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದ ಆರ್‌ಸಿಬಿ ಇದೀಗ ಮತ್ತೊಮ್ಮೆ ಕೆಕೆಆರ್ ಎದುರು ಪ್ರಾಬಲ್ಯ ಮೆರೆದಿದೆ. ಇದರ ಜತೆಗೆ 6 ಅಂಕಗಳೊಂದಿಗೆ ಆರ್‌ಸಿಬಿ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಆರ್‌ಸಿಬಿ ನೀಡಿದ್ದ 205 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಕೋಲ್ಕತ ನೈಟ್‌ ರೈಡರ್ಸ್‌ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಚುರುಕಾಗಿ ರನ್‌ ಗಳಿಸುವ ಯತ್ನದಲ್ಲಿ ಗಿಲ್‌ 9 ಎಸೆತದಲ್ಲಿ 21 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಕೆಲಹೊತ್ತಿನಲ್ಲೇ ರಾಹುಲ್‌ ತ್ರಿಪಾಠಿ ಕೂಡಾ 25 ರನ್‌ ಬಾರಿಸಿ ಸುಂದರ್‌ಗೆ ವಿಕೆಟ್‌ ಒಪ್ಪಿಸಿದರು. ರಾಣಾ ಬ್ಯಾಟಿಂಗ್ ಕೇವಲ 18 ರನ್‌ಗಳಿಗೆ ಸೀಮಿತವಾಯಿತು.

ಇನ್ನು ನಾಯಕ ಇಯಾನ್‌ ಮಾರ್ಗನ್‌ ಹಾಗೂ ಶಕೀಬ್‌ ತಂಡಕ್ಕೆ ಆಸರೆಯಾಗುವ ಯತ್ನ ನಡೆಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ದಿನೇಶ್‌ ಕಾರ್ತಿಕ್ ಕೇವಲ 2 ರನ್‌ ಬಾರಿಸಿ ವಿಕೆಟ್ ಒಪ್ಪಿಸುವ ಮೂಲಕ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಲು ವಿಫಲರಾದರು. ಕೊನೆಯಲ್ಲಿ ರಸೆಲ್‌ (31) ಹೋರಾಟ ಕೆಕೆಆರ್‌ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಇದಕ್ಕೂ ಮೊದಲು ಆರ್‌ಸಿಬಿ ಆರಂಭಿಕ ಆಘಾತದ ಹೊರತಾಗಿಯೂ ಎಬಿ ಡಿವಿಲಿಯರ್ಸ್‌(78) ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌(76) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ ಕಳೆದುಕೊಂಡು 204 ರನ್‌ ಕಲೆಹಾಕಿತ್ತು.