Asianet Suvarna News Asianet Suvarna News

IPL 2021: ಹಣ ಉಳಿಸಲು ಹೋಗಿ ಕೋವಿಡ್‌ ಅಪಾಯಕ್ಕೆ ಆಹ್ವಾನ ನೀಡಿತಾ ಬಿಸಿಸಿಐ..?

* ಯುಎಇ ಚರಣದ ಐಪಿಎಲ್‌ ಮೇಲೂ ಕೋವಿಡ್ ವಕ್ರದೃಷ್ಠಿ

* ಸನ್‌ರೈಸರ್ಸ್‌ ವೇಗಿ ನಟರಾಜನ್ ಸೇರಿ ಆರು ಮಂದಿಗೆ ಕೋವಿಡ್ ದೃಢ

* ಹಣ ಉಳಿತಾಯಕ್ಕಾಗಿ ಆ್ಯಪ್‌ ಬಳಕೆ ನಿಲ್ಲಿಸಿದ ಬಿಸಿಸಿಐ ವಿರುದ್ದ ಫ್ರಾಂಚೈಸಿಗಳ ಅಸಮಾಧಾನ

IPL 2021 No contact tracing app in UAE Franchises upset with the BCCI Says Report kvn
Author
Dubai - United Arab Emirates, First Published Sep 23, 2021, 9:20 AM IST

ದುಬೈ(ಸೆ.23): ಐಪಿಎಲ್‌(IPL 2021) ಟೂರ್ನಿಯನ್ನು ಕೊರೋನಾ ಸೋಂಕು ಬಿಡದೆ ಕಾಡುತ್ತಿದೆ. ಸನ್‌ರೈಸರ್ಸ್‌ ಹೈದರಾಬಾದ್‌(Sunrisers Hyderabad) ತಂಡದ ವೇಗದ ಬೌಲರ್‌ ಟಿ.ನಟರಾಜನ್‌ಗೆ ಸೋಂಕು ದೃಢಪಟ್ಟಿದ್ದು, ಅವರನ್ನು 10 ದಿನಗಳ ಕಾಲ ಐಸೋಲೇಷನ್‌ಗೆ ಒಳಪಡಿಸಲಾಗಿದೆ. ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರು ಆಟಗಾರರು ಸೇರಿ ಒಟ್ಟು 6 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಹಣ ಉಳಿತಾಯ ಮಾಡಲು ಹೋಗಿ ಬಿಸಿಸಿಐ ತಂಡ ಸಮಸ್ಯೆಯೊಂದನ್ನು ಮೈಮೇಲೆ ಎಳೆದುಕೊಂಡಿತೇ ಎನ್ನುವ ಅನುಮಾನ ಕಾಡಲಾರಂಭಿಸಿದೆ.

ಈ ವರ್ಷ ಮೇ ತಿಂಗಳಲ್ಲಿ ಆಟಗಾರರಿಗೆ ಸೋಂಕು ತಗುಲಿದ ಕಾರಣದಿಂದಲೇ ಬಿಸಿಸಿಐ(BCCI), ಐಪಿಎಲ್‌ ಟೂರ್ನಿಯನ್ನು ಸ್ಥಗಿತಗೊಳಿಸಿತ್ತು. ಇದೀಗ ಮತ್ತೊಮ್ಮೆ ಕೊರೋನಾ ಸೋಂಕು ಬಿಸಿಸಿಐ ತಲೆಬಿಸಿ ಹೆಚ್ಚಿಸಿದೆ.

ಹಣ ಉಳಿತಾಯಕ್ಕಾಗಿ ಆ್ಯಪ್‌ ಬಳಕೆ ನಿಲ್ಲಿಸಿದ ಬಿಸಿಸಿಐ

ಕಳೆದ ವರ್ಷ ಯುಎಇನಲ್ಲಿ ಐಪಿಎಲ್‌ ನಡೆದಾಗ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಲು ಮೊಬೈಲ್‌ ಆ್ಯಪ್‌ವೊಂದರ ಚಂದಾದಾರಿಕೆ ಪಡೆದು ಬಳಕೆ ಮಾಡಲಾಗುತ್ತಿತ್ತು. ಈ ಬಾರಿ ಹಣ ಉಳಿಸಲು ಬಿಸಿಸಿಐ ಆ್ಯಪ್‌ ಬಳಕೆ ಮಾಡುತ್ತಿಲ್ಲ. ಯಾರಾದರೂ ಸೋಂಕಿತರಾದರೆ ಅವರು ನೀಡುವ ಮಾಹಿತಿಯನ್ನು ಆಧರಿಸಿ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗುತ್ತದೆ. ಬಿಸಿಸಿಐ ವಿರುದ್ದ ಫ್ರಾಂಚೈಸಿಗಳು ಅಸಮಾಧಾನ ವ್ಯಕ್ತಪಡಿಸಿವೆ ಎಂದು ವರದಿಯಾಗಿದೆ.

IPL 2021: ಟಿ ನಟರಾಜನ್‌ ಸೇರಿ ಸನ್‌ರೈಸರ್ಸ್‌ನ 6 ಆಟಗಾರರಿಗೆ ಕೋವಿಡ್ ಪಾಸಿಟಿವ್..!

ಅದೇ ರೀತಿ ಟಿ. ನಟರಾಜನ್‌(T Natarajan) ನೀಡಿದ ಮಾಹಿತಿ ಆಧಾರದ ಮೇಲೆ ಆಲ್ರೌಂಡರ್‌ ವಿಜಯ್‌ ಶಂಕರ್‌, ನೆಟ್‌ ಬೌಲರ್‌ ಪೆರಿಸ್ವಾಮಿ, ತಂಡದ ವ್ಯವಸ್ಥಾಪಕ ವಿಜಯ್‌, ಫಿಸಿಯೋಥೆರಾಪಿಸ್ಟ್‌ ಶ್ಯಾಮ್‌ ಸುಂದರ್‌, ವೈದ್ಯೆ ಅಂಜನಾ ಹಾಗೂ ವ್ಯವಸ್ಥಾಪಕ ತುಷಾರ್‌ರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಪರಿಗಣಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಬೆಂಗಳೂರಿನಿಂದ ದುಬೈಗೆ ಪ್ರಯಾಣಿಸಿದ್ದ ನಟರಾಜನ್‌

ಬೆಂಗಳೂರಿನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದ ನಟರಾಜನ್‌ ಸೆಪ್ಟೆಂಬರ್ 9ರಂದು ದುಬೈಗೆ ವಾಣಿಜ್ಯ ವಿಮಾನದಲ್ಲಿ ಪ್ರಯಾಣಿಸಿದ್ದರು. ದುಬೈ ತಲುಪಿದ ಮೇಲೆ 6 ದಿನಗಳ ಕಾಲ ಕ್ವಾರಂಟೈನ್‌ ಪೂರೈಸಿ ತಂಡ ಕೂಡಿಕೊಂಡಿದ್ದರು. ಪ್ರಯಾಣದ ವೇಳೆ ಸೋಂಕು ತಗುಲಿತೇ ಇಲ್ಲವೇ ಬಯೋ ಬಬಲ್‌ನೊಳಗೇ ಸೋಂಕು ತಗುಲಿದೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.

ನಟರಾಜನ್‌ ಅವರಿಗೆ ಕೋವಿಡ್‌ 19(Covid 19) ಸೋಂಕು ದೃಢಪಡುತ್ತಿದ್ದಂತೆಯೇ ಇತರೆ ಆಟಗಾರರು ಹಾಗೂ ಫ್ರಾಂಚೈಸಿಗಳು ಹೆಚ್ಚು ತಲೆ ಕೆಡಿಸಿಕೊಂಡಿವೆ. ಬಯೋ ಬಬಲ್‌ನೊಳಗೆ ಸಾಕಷ್ಟು ಎಚ್ಚರಿಕೆಯಿಂದಿರಲು ಆಟಗಾರರಿಗೆ ಬಿಸಿಸಿಐ ಸೂಚನೆಯನ್ನು ನೀಡಿದೆ.
 

Follow Us:
Download App:
  • android
  • ios